ಸರ್ಕಾರ ಕಾನೂನು ರೂಪಿಸುವವರೆಗೂ ಮಕ್ಕಳನ್ನು ಹಡೆಯುತ್ತಲೇ ಇರು ಎಂದು ಪತ್ನಿಗೆ ಹೇಳಿದ್ದೀನಿ: ಬಿಜೆಪಿ ಶಾಸಕ

Public TV
1 Min Read

ಮುಜಾಫರ್ ನಗರ್ : ಜನಸಂಖ್ಯೆ ನಿಯಂತ್ರಣಕ್ಕೆ ಸರ್ಕಾರ ನಿರ್ದಿಷ್ಟ ಕಾನೂನು ರೂಪಿಸುವವರೆಗೂ ನೀನು ಮಕ್ಕಳನ್ನು ಹಡೆಯುವುದನ್ನು ನಿಲ್ಲಿಸಬೇಡ ಎಂದು ಪತ್ನಿಗೆ ಹೇಳಿದ್ದೇನೆ ಎಂದು ಹೇಳುವ ಮೂಲಕ ಉತ್ತರ ಪ್ರದೇಶ ಬಿಜೆಪಿ ಶಾಸಕರೊಬ್ಬರು ವಿವಾದಕ್ಕೆ ಕಾರಣರಾಗಿದ್ದಾರೆ.

ಖತೌಲಿ ಕ್ಷೇತ್ರದ ಬಿಜೆಪಿ ಶಾಸಕ ವಿಕ್ರಮ್ ಸೈನಿ ಶುಕ್ರವಾರ ಈ ಹೇಳಿಕೆಯನ್ನು ನೀಡಿದ್ದಾರೆ. ಮುಜಾಫರ್ ನಗರದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮಗೆ ಇಬ್ಬರು ಮಕ್ಕಳು ಸಾಕು ಎಂದು ನನ್ನ ಪತ್ನಿ ಹೇಳಿದ್ದಾಳೆ. ಆದರೆ ಸರ್ಕಾರ ಜನಸಂಖ್ಯಾ ನಿಯಂತ್ರಣ ಕಾನೂನು ರೂಪಿಸುವವರೆಗೂ ಮಕ್ಕಳನ್ನು ಹಡೆಯುತ್ತಾ ಇರಲು ತಿಳಿಸಿದ್ದೇನೆ ಎಂದು ಹೇಳಿದ್ದಾರೆ.

ನಾವು ಇಬ್ಬರು ಮಕ್ಕಳು ಸಾಕು ಎಂಬ ನಿಯಮವನ್ನು ಒಪ್ಪಿಕೊಂಡಿದ್ದೇವೆ. ಆದರೆ ಇತರರು ಅದನ್ನು ಒಪ್ಪಿಕೊಂಡಿಲ್ಲ. ಕಾನೂನು ಎಲ್ಲರಿಗೂ ಒಂದೇ ಆಗಿರಬೇಕು. ಹಿಂದೂಗಳು ಮಕ್ಕಳಿಗೆ ಜನ್ಮ ನೀಡುವುದನ್ನು ನಿಲ್ಲಿಸಬಾರದು. ನನ್ನ ಪತ್ನಿ ನಮಗೆ ಮೂರನೇ ಮಗು ಬೇಡವೆಂದು ಹೇಳಿದ್ದಳು. ಆದರೆ ನಾನು 4 ರಿಂದ 5 ಮಕ್ಕಳನ್ನು ಪಡೆಯೋಣವೆಂದು ಹೇಳಿದ್ದೇನೆ ಎಂದು ಜನಸಂಖ್ಯಾ ನಿಯಂತ್ರಣ ವಿಷಯದ ಕುರಿತು ನಡೆದ ಕಾರ್ಯಕ್ರಮದಲ್ಲಿ ಹೇಳಿದರು.

ಶಾಸಕರು ವಿವಾದತ್ಮಾಕ ಹೇಳಿಕೆ ಮೂಲಕವೇ ಹೆಚ್ಚು ಸುದ್ದಿಯಾಗುತ್ತಿದ್ದು, ಕಳೆದ ವರ್ಷ ಜನವರಿಯಲ್ಲಿ ಹಿಂದೂಸ್ತಾನ ಹಿಂದೂಗಳದ್ದು ಮಾತ್ರ, ಇತರರು ಪಾಕಿಸ್ತಾನಕ್ಕೆ ಹೋಗಿ ಎಂದು ಹೇಳಿದ್ದರು. ಅಲ್ಲದೇ ಹೊಸ ವರ್ಷದ ಆಚರಣೆ ಕ್ರೈಸ್ತ ಸಮುದಾಯದ ಹಬ್ಬ. ಇದರಿಂದ ಹಿಂದೂಗಳು ದೂರವಿರಿ ಎಂದು ಹೇಳಿದ್ದರು. ಫೆಬ್ರವರಿ 14ರ ಪ್ರೇಮಿಗಳ ದಿನವನ್ನು ಆಚರಿಸಬೇಡಿ ಎಂದು ಯುವಕರಿಗೆ ಕರೆ ನೀಡಿದ್ದರು.

 

Share This Article
Leave a Comment

Leave a Reply

Your email address will not be published. Required fields are marked *