ಪಿಒಕೆ ವಶಕ್ಕೆ ಪಡೆಯುತ್ತೇವೆ, ರಾಮಮಂದಿರ ಕಟ್ಟುತ್ತೇವೆ: ಸೆಂಥಿಲ್ ವಿರುದ್ಧ ಸುನೀಲ್ ಕುಮಾರ್ ಕಿಡಿ

Public TV
2 Min Read

ಉಡುಪಿ: ಸಂಸದ ಅನಂತ್‍ಕುಮಾರ್ ಹೆಗ್ಡೆ ಬೆನ್ನಲ್ಲೇ ಶಾಸಕ ಸುನೀಲ್ ಕುಮಾರ್ ಅವರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಸಸಿಕಾಂತ್ ಸೆಂಥಿಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನೂತನ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ನಗರದಲ್ಲಿ ಅಭಿನಂದನೆ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ಶಾಸಕರು, ಪ್ರಧಾನಿ ಮೋದಿ ನಿಲುವನ್ನು ವಿರೋಧಿಸಿ ರಾಜೀನಾಮೆ ಕೊಟ್ಟಿದ್ದೀರಿ. ಮುಂದೆ ನಿಮ್ಮಂತವರು ಆತ್ಮಹತ್ಯೆಯನ್ನೂ ಕೂಡ ಮಾಡಿಕೊಳ್ಳಬೇಕಾಗುತ್ತದೆ. ಕಾಶ್ಮೀರ, ರಾಮಮಂದಿರ ವಿಚಾರದಲ್ಲಿ ಸೆಂಥಿಲ್ ಅವರಿಗೆ ಅಸಮಾಧಾನವಂತೆ. ಕೇವಲ 370ನೇ ವಿಧಿ ಅಲ್ಲ, ಪಿಒಕೆ ಒಳಗೆ ಪ್ರವೇಶ ಮಾಡುತ್ತೇವೆ. ರಾಮ ಮಂದಿರವನ್ನೂ ಕಟ್ಟುತ್ತೇವೆ ಎಂದು ಸವಾಲು ಹಾಕಿದರು.

ಒಬ್ಬ ಜಿಲ್ಲಾಧಿಕಾರಿ ರಾಜೀನಾಮೆ ಕೊಟ್ಟರೆ ನಮ್ಮ ನಿಲುವು ಬದಲಾಗುವುದಿಲ್ಲ. ನೀವು ತಮಿಳುನಾಡಿನಲ್ಲಿ ಯಾವುದೋ ರಾಜಕೀಯ ಪಕ್ಷದಿಂದ ಚುನಾವಣೆಗೆ ನಿಲ್ಲುವುದಕ್ಕಾಗಿ ದೇಶದ ವ್ಯವಸ್ಥೆಯನ್ನು ಪ್ರಶ್ನೆ ಮಾಡಬೇಡಿ. ಕಾಶ್ಮೀರದ ಕುರಿತಂತೆ ರಾಮ ಮಂದಿರದ ಕುರಿತಂತೆ ನಮ್ಮ ಪಕ್ಷದ ನಿಲುವು ಬದಲಾಗುವುದಿಲ್ಲ. ಜಗತ್ತು ಭಾರತದ ಆಡಳಿತವನ್ನು ಒಪ್ಪಿಕೊಳ್ಳುತ್ತೆ. ಭಾರತದ ನಾಗರಿಕರು ಪ್ರಧಾನಿ ನರೇಂದ್ರ ಮೋದಿ ಅವರ ಕೆಲಸ ಮೆಚ್ಚಿದೆ ಎಂದು ಸುನೀಲ್ ಹೇಳಿದರು.

ಸಂಸದ ಅನಂತ್‍ಕುಮಾರ್ ಹೆಗ್ಡೆ ಅವರು ಸೋಮವಾರ ಟ್ವೀಟ್ ಮೂಲಕ ಸಸಿಕಾಂತ್ ಸೆಂಥಿಲ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಕೇಂದ್ರ ಸರ್ಕಾರ ಸಂಸತ್‍ನಲ್ಲಿ ಬಹುಮತದಿಂದ ಕೈಗೊಂಡ ನಿರ್ಧಾರವನ್ನು ಸರ್ಕಾರಿ ಅಧಿಕಾರಿ ಪ್ರಶ್ನಿಸಬಾರದು. ಅಂತಹ ದುಸ್ಸಾಹಸಕ್ಕೆ ಸೆಂಥಿಲ್ ಕೈಹಾಕಿದ್ದಾರೆ. ಇದಕ್ಕಿಂತ ದೊಡ್ಡ ದ್ರೋಹ ಮತ್ತೊಂದಿಲ್ಲ ಎಂದು ಗುಡುಗಿದ್ದರು.

ಸಂಬಂಧಪಟ್ಟ ಅಧಿಕಾರಿಗಳು ಸಸಿಕಾಂತ್ ಸೆಂಥಿಲ್ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ರಾಜ್ಯಪಾಲರಿಗೂ ಕ್ರಮಕೈಗೊಳ್ಳುವ ಅಧಿಕಾರವಿದೆ. ಜನರು ಕೂಡ ಇದನ್ನು ಬಯಸುತ್ತಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಇಂತಹ ದುಷ್ಕೃತ್ಯ ಎಸಗಿದ್ದಾರೆ. ಇದರ ಹಿಂದೆ ಇರುವ ಕೈಗಳ ಕೈವಾಡ ಬೆಳಕಿಗೆ ಬರಬೇಕು. ಹೀಗಾಗಿ ತನಿಖೆ ಅಗತ್ಯವಾಗಿದೆ ಎಂದು ಒತ್ತಾಯಿಸಿದ್ದರು.

ಅನಂತ್‍ಕುಮಾರ್ ಹೆಗ್ಡೆ ಅವರು ಭಾನುವಾರ ಸಸಿಕಾಂತ್ ಸೆಂಥಿಲ್ ಅವರ ಪತ್ರಿಕಾ ಹೇಳಿಕೆಯ ತುಣುಕನ್ನು ಟ್ವೀಟ್ ಮಾಡಿ, ಈತ ಮಾಡಬೇಕಾದ ಮೊದಲ ಕೆಲಸವೆಂದರೆ ಕೂಡಲೇ ತನ್ನ ನಿಲುವನ್ನು ಬೆಂಬಲಿಸಿದವರೊಂದಿಗೆ ಪಾಕಿಸ್ತಾನಕ್ಕೆ ವಲಸೆ ಹೋಗುವುದು. ಇದು ಪ್ರಾಯೋಗಿಕವಾಗಿಯೂ ಸುಲಭ ಮತ್ತು ಅಂತಿಮ ಪರಿಹಾರ ಕೂಡ. ಇಲ್ಲೇ ಇದ್ದು ದೇಶ ಒಡೆಯುವ ಬದಲು, ಅಲ್ಲಿಗೆ ಹೋಗಿ ನಮ್ಮ ದೇಶ ಮತ್ತು ನಮ್ಮ ಸರ್ಕಾರದ ವಿರುದ್ಧ ನೇರ ಹೋರಾಟ ಮಾಡುವುದು ಒಳಿತು. ಇದರಲ್ಲಾದರೂ ನಿಯತ್ತು ತೋರಿಸಲಿ ಎಂದು ಹೇಳಿದ್ದರು.

Share This Article
Leave a Comment

Leave a Reply

Your email address will not be published. Required fields are marked *