ಮೊದಲ ಪತ್ನಿಯನ್ನು ಬಿಟ್ಟು ಕಾಲೇಜು ಯುವತಿಯನ್ನು ಮದ್ವೆಯಾದ ಬಿಜೆಪಿ ಶಾಸಕ!

Public TV
2 Min Read

– ಬಿಜೆಪಿ ಶಿಸ್ತು ಸಮಿತಿಗೆ ಪತ್ನಿಯಿಂದ ದೂರು

ಶ್ರೀನಗರ: ಜಮ್ಮು ಕಾಶ್ಮೀರ ಬಿಜೆಪಿ ಶಾಸಕರೊಬ್ಬರ ಪತ್ನಿ ತಮ್ಮ ಪತಿ ಕಾಲೇಜು ಯುವತಿಯೊಂದಿಗೆ ಮದುವೆಯಾಗಿರುವುದಾಗಿ ಆರೋಪ ಮಾಡಿ, ಬಿಜೆಪಿ ಶಿಸ್ತು ಸಮಿತಿಗೆ ದೂರು ನೀಡಿದ್ದಾರೆ.

ಜಮ್ಮು ಜಿಲ್ಲೆಯ ಶಾಸಕ ಗಗನ್ ಭಗತ್ ವಿರುದ್ಧ ಪತ್ನಿ ಮೋನಿಕಾ ಶರ್ಮಾ ಈ ಆರೋಪ ಮಾಡಿದ್ದು, 19 ವರ್ಷದ ಕಾಲೇಜು ಯುವತಿಯೊಂದಿಗೆ ಮದುವೆಯಾಗಿ ಆಕೆಯೊಂದಿಗೆ ವಾಸಿಸುತ್ತಿದ್ದಾರೆ ಎಂದು ದೂರಿದ್ದಾರೆ.

ಸದ್ಯ ಶಾಸಕ ಪತ್ನಿ ಆರೋಪದೊಂದಿಗೆ ಕಾಲೇಜು ಯುವತಿಯ ತಂದೆಯೂ ಸಹ ತಮ್ಮ ಮಗಳನ್ನು ಪಂಜಾಬ್ ಕಾಲೇಜಿನಿಂದ ಅಪಹರಣ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ ಈ ಆರೋಪಗಳನ್ನು ಯುವತಿ ಹಾಗೂ ಶಾಸಕ ಗಗನ ಭಗತ್ ನಿರಾಕರಿಸಿದ್ದು, ತಮ್ಮ ರಾಜಕೀಯ ಜೀವನಕ್ಕೆ ಕಪ್ಪು ಚುಕ್ಕೆ ತರಲು ಆಧಾರ ರಹಿತ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

ಅಂದಹಾಗೇ 13 ವರ್ಷಗಳ ಹಿಂದೆ ಶಾಸಕ ಗಗನ್ ಭಗತ್ ಹಾಗೂ ಮೋನಿಕಾ ಶರ್ಮಾ ಮದುವೆಯಾಗಿರುವುದಾಗಿ ತಿಳಿಸಿದ್ದು, ಸದ್ಯ ಶಾಸಕರ ವಿರುದ್ಧ ಪ್ರಧಾನಿ ಮೋದಿ ಸೇರಿದಂತೆ ಪಕ್ಷದ ಹಿರಿಯ ನಾಯಕರಿಗೆ ಶರ್ಮಾ ದೂರು ನೀಡಿದ್ದಾರೆ. ಅಲ್ಲದೇ ಈ ಹಿಂದೆ ತಮ್ಮ ದೈನಂದಿನ ಜೀವನ ನಿರ್ವಹಣೆಗಾಗಿ ಮಾಸಿಕ 1 ಲಕ್ಷ ರೂ. ಹಣ ನೀಡುವುದಾಗಿ ಗಗನ್ ಭಗತ್ ಹೇಳಿದ್ದರು. ಆದರೆ ಇದುವರೆಗೂ ಯಾವುದೇ ಹಣವನ್ನು ನೀಡಿಲ್ಲ. ಇದರಿಂದ ನನಗೆ ಹಾಗೂ ಮಕ್ಕಳಿಗೆ ತೀವ್ರ ಸಮಸ್ಯೆಯಾಗಿದೆ ಎಂದು ದೂರಿದ್ದಾರೆ.

ಜಮ್ಮು ಕಾಶ್ಮೀರದ ಬಿಜೆಪಿ ಮಹಿಳಾ ಘಟಕದ ಕಾರ್ಯದರ್ಶಿಯಾಗಿರುವ ನಾನು ತನ್ನ ಕುಟುಂಬ ಒಳಿತಿಗಾಗಿ ಒಂದು ವರ್ಷದಿಂದ ಈ ಕುರಿತು ಮಾಹಿತಿ ಬಹಿರಂಗ ಪಡಿಸಿಲ್ಲ. ತನಗೆ 12 ವರ್ಷದ ಮಗ ಹಾಗೂ 4 ವರ್ಷದ ಮಗಳು ಇದ್ದಾರೆ. ಪತಿ ವಿರುದ್ಧ ಆರೋಪದ ಕುರಿತು ಸಾಕ್ಷಿ ನೀಡಲು ತಮ್ಮ ಬಳಿ ಆಧಾರಗಳು ಇದ್ದು, ಅವುಗಳನ್ನು ಬಿಜೆಪಿ ಶಿಸ್ತು ಸಮಿತಿಗೆ ನೀಡಿದ್ದಾಗಿ ಹೇಳಿದ್ದಾರೆ. ಅಲ್ಲದೇ ಕಳೆದ ಎರಡು ದಿನಗಳ ಹಿಂದೆ ಈ ಆಧಾರಗಳನ್ನು ಸಮಿತಿಗೆ ನೀಡದಿರಲು ಗಗನ್ ಭಗತ್ ತಮ್ಮ ಬಳಿ ಮನವಿ ಮಾಡಿದ್ದಾಗಿ ತಿಳಿಸಿದ್ದಾರೆ.

ತಮ್ಮ ಪತಿ ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದು, ಅವರು ಇಂತಹ ಕೆಲಸ ಮಾಡಿ ಸಮಾಜಕ್ಕೆ ಯಾವ ಸಂದೇಶ ನೀಡುತ್ತಾರೆ. ಆದರೆ ಅವರು ಮದುವೆಯಾಗುವುದಕ್ಕೆ ಯಾವುದೇ ಆಕ್ಷೇಪವಿಲ್ಲ. ಅದನ್ನು ಬಹಿರಂಗ ಪಡಿಸಲಿ ಎಂದು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *