ಬೆಂಗ್ಳೂರಿಗೆ ಬರುವಂತೆ ಬಿಜೆಪಿ ಶಾಸಕರಿಗೆ ಬುಲಾವ್

Public TV
1 Min Read

– ರಮಾಡಾನ್ ಖಾಸಗಿ ರೆಸಾರ್ಟಿನಲ್ಲಿ ರೂಂ ಬುಕಿಂಗ್!

ಬೆಂಗಳೂರು: ಪಕ್ಷದ ಎಲ್ಲ ಶಾಸಕರಿಗೆ ಫೋನ್ ಮಾಡಿ ಸೋಮವಾರದೊಳಗಾಗಿ ಬೆಂಗಳೂರಿಗೆ ಬರುವಂತೆ ಬಿಜೆಪಿ ಸಚೇತಕ ಸುನೀಲ್ ಕುಮಾರ್ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಬಿಜೆಪಿ ನಾಯಕರು ಪಕ್ಷದ ಶಾಸಕರಿಗಾಗಿ ಯಲಹಂಕದ ರಮಾಡಾನ್ ಖಾಸಗಿ ರೆಸಾರ್ಟ್ ನಲ್ಲಿ ಮೂವತ್ತು ರೂಂ ಬುಕ್ ಮಾಡಿದ್ದಾರೆ. ಆದರೆ ಯಾರು ರೆಸಾರ್ಟಿಗೆ ತೆರಳಿಲ್ಲ. ಬೆಂಗಳೂರಿಗೆ ಸಿಎಂ ಆಗಮಿಸಿದ ಬಳಿಕ ನಡೆಯುವ ಬೆಳವಣಿಗೆ ನೋಡಿಕೊಂಡು ರೆಸಾರ್ಟಿಗೆ ತೆರಳಲು ಬಿಜೆಪಿ ಚಿಂತನೆ ನಡೆಸಿದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಈಗಲೇ ರೆಸಾರ್ಟಿಗೆ ಶಿಫ್ಟ್ ಆದರೆ ಕಾಂಗ್ರೆಸ್-ಜೆಡಿಎಸ್ ಶಾಸಕರ ರಾಜೀನಾಮೆಯ ಹಿಂದೆ ಬಿಜೆಪಿ ಕೈವಾಡವಿದೆ ಎಂದು ಬಿಂಬಿತ ಆಗಲಿದೆ. ಹೀಗಾಗಿ ಅನಿವಾರ್ಯ ಪರಿಸ್ಥಿತಿ ಎದುರಾದರೆ ಮಾತ್ರ ರೆಸಾರ್ಟಿಗೆ ತೆರಳುವ ಸಿದ್ಧತೆಯನ್ನು ನಾಯಕರು ಮಾಡಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ತಮ್ಮ ಕ್ಷೇತ್ರಗಳಿಗೆ ಮರಳಿರುವ ಶಾಸಕರಿಗೆ ಬುಲಾವ್ ನೀಡಿದ್ದಾರೆ ಎನ್ನಲಾಗುತ್ತಿದೆ.

ರಿವರ್ಸ್ ಅಪರೇಷನ್ ಭೀತಿಯಲ್ಲಿ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಬಿಜೆಪಿ ತಯಾರಿ ನಡೆಸಿದೆ. ಭಾನುವಾರ ನಡೆಯಲಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ಸಭೆಯ ಮೇಲೆ ತಮ್ಮ ಶಾಸಕರನ್ನು ರೆಸಾರ್ಟಿಗೆ ಶಿಫ್ಟ್ ಮಾಡಬೇಕಾ ಬೇಡ್ವಾ ಎಂದು ಬಿಜೆಪಿ ನಿರ್ಧಾರ ಕೈಗೊಳ್ಳಲಿದೆ. ಹೀಗಾಗಿ ನಾಳೆಯವರೆಗೂ ಕಾದು ನೋಡುವ ಆಟವನ್ನು ಕೇಸರಿ ಪಡೆ ಮುಂದುವರಿಸಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಯಾವುದೇ ಕ್ಷಣದಲ್ಲಿ ಏನು ಬೇಕಾದ್ರೂ ಆಗಬಹುದು. ಕೆಲ ಅತೃಪ್ತರ ಗುಂಪು ಬಿ.ಎಸ್.ಯಡಿಯೂರಪ್ಪ ಸಿಎಂ ಆಗಬಾರದು ಅಂತ ಕಾಂಗ್ರೆಸ್ ಅಥವಾ ಜೆಡಿಎಸ್ ಆಪರೇಷನ್‍ಗೆ ಒಳಗಾಗುವ ಸಾಧ್ಯತೆ ಇದೆ. ಹೀಗಾಗಿ ಶಾಸಕರನ್ನು ರೆಸಾರ್ಟಿಗೆ ಶಿಫ್ಟ್ ಮಾಡಿದರೆ ಒಳ್ಳೆಯದು ಎಂದು ಬಿಜೆಪಿ ವಲಯದಿಂದ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಲಹೆ ಬಂದಿದೆ. ಇದಕ್ಕಾಗಿ ಕಮಲ ಪಾಳಯವು ರೆಸಾರ್ಟ್ ಚಿಂತನೆ ನಡೆಸುತ್ತಿದೆ ಎನ್ನಲಾಗುತ್ತದೆ.

Share This Article
Leave a Comment

Leave a Reply

Your email address will not be published. Required fields are marked *