ಹೆಚ್‍ಡಿಡಿಯಂತೆ ತಂದೆ, ಸೋನಿಯಾ ರೀತಿ ತಾಯಿ, ಮೋದಿಯಂತಹ ನಾಯಕ ಇರಬೇಕು: ರಾಜುಗೌಡ

Public TV
1 Min Read

ಯಾದಗಿರಿ: ತಂದೆ ಇದ್ದರೆ ಮಾಜಿ ಪ್ರಧಾನಿ ದೇವೇಗೌಡ ರೀತಿ ಇರಬೇಕು, ತಾಯಿ ಇದ್ದರೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ರೀತಿ ಇರಬೇಕು ಹಾಗೆಯೇ ನಾಯಕ ಇದ್ದರೆ ಪ್ರಧಾನಿ ನರೇಂದ್ರ ಮೋದಿ ರೀತಿ ಇರಬೇಕು ಅಂತ ಬಿಜೆಪಿ ಶಾಸಕ ರಾಜುಗೌಡ ಹೇಳಿದ್ದಾರೆ.

ಜಿಲ್ಲೆಯ ಶಹಪುರದ ಸಗರ ಗ್ರಾಮದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ದೇವೇಗೌಡರ ರೀತಿ ತಂದೆ ಇರಬೇಕು, ಯಾಕೆಂದರೆ ಅವರು ತಮ್ಮ ಪುತ್ರರರು, ಸೊಸೆ, ಮೊಮ್ಮಕ್ಕಳು ಹಾಗೂ ಸಂಬಂಧಿಕರಿಗೆ ರಾಜಕೀಯ ಸ್ಥಾನಮಾನ ಕಲ್ಪಿಸಿದ್ದಾರೆ. ಆದ್ರೆ ತಮ್ಮ ಪತ್ನಿ ಚನ್ನಮ್ಮ ಅವರಿಗೆ ಯಾವ ಸ್ಥಾನಮಾನ ನೀಡಿಲ್ಲ, ತಮ್ಮ ಧರ್ಮಪತ್ನಿಯ ಮೇಲೆ ದೇವೇಗೌಡರಿಗೆ ಯಾಕೆ ಅಷ್ಟು ಸಿಟ್ಟು ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು. ಬಳಿಕ ತಾಯಿ ಇದ್ದರೆ ಸೋನಿಯಾ ಗಾಂಧಿ ರೀತಿ ಇರಬೇಕು. ಯಾಕೆಂದರೆ ತಮ್ಮ ಮಗ ದಡ್ಡ ಎಂದು ಗೊತ್ತಿದ್ದರೂ ಅವರು ಅವನನ್ನ ಪ್ರಧಾನಿ ಮಾಡಲು ಹೊರಟಿದ್ದಾರೆ ಎಂದು ಟೀಕಿಸಿದರು.

ಸೋನಿಯಾ ಗಾಂಧಿ ಮತ್ತು ದೇವೇಗೌಡರ ಕುಟುಂಬ ರಾಜಕೀಯದ ಬಗ್ಗೆ ಲೇವಡಿ ಮಾಡಿದ ರಾಜುಗೌಡ ಅವರು, ಸೋನಿಯಾ ಗಾಂಧಿ ಹಾಗೂ ದೇವೇಗೌಡ ಅವರಿಗೆ ತಮ್ಮ ಕುಟುಂಬದ ಅಭಿವೃದ್ಧಿಯೇ ಮುಖ್ಯವಾಗಿದೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಒಬ್ಬ ದಡ್ಡ. 5ನೇ ತರಗತಿ ಮೂರು ಬಾರಿ ಪರೀಕ್ಷೆ ಬರೆದರೂ ಫೇಲಾಗುತ್ತಾನೆ. ಇಂತಹ ದಡ್ಡನನ್ನು ಪ್ರಧಾನಮಂತ್ರಿ ಮಾಡಲು ಸೋನಿಯಾ ಗಾಂಧಿ ಮುಂದಾಗಿದ್ದಾರೆ ಎಂದು ಮಾತಿನ ಚಾಟಿ ಬಿಸಿದರು.

ಬರೀ ಕುಟುಂಬ ರಾಜಕಾರಣ ಮಾಡುವ ನಾಯಕರ ಮಧ್ಯೆ ಜನರಿಗಾಗಿ, ಸೈನಿಕರಿಗಾಗಿ ಕೆಲಸ ಮಾಡಲು ನರೇಂದ್ರ ಮೋದಿಯಂತಹ ನಾಯಕ ಬೇಕು. ಆದ್ದರಿಂದ ಈ ಬಾರಿ ಬಿಜೆಪಿಗೆ ಮತ ಹಾಕಿ ಮೋದಿಯನ್ನು ಗೆಲ್ಲಿಸಿ ಎಂದು ಅವರು ಮನವಿ ಮಾಡಿಕೊಂಡರು.

https://www.youtube.com/watch?v=6uai3LL2pBk

Share This Article
Leave a Comment

Leave a Reply

Your email address will not be published. Required fields are marked *