ಸಿದ್ದರಾಮಯ್ಯ ರಾಜೀನಾಮೆ ನೀಡಿ, ಮತ್ತೊಬ್ಬ ಹಿಂದುಳಿದ ನಾಯಕನನ್ನು ಸಿಎಂ ಮಾಡಲಿ: ವಿಜಯೇಂದ್ರ ಒತ್ತಾಯ

Public TV
2 Min Read

ಬೆಂಗಳೂರು: ಸಿದ್ದರಾಮಯ್ಯ (Siddaramaiah) ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೊಬ್ಬ ಹಿಂದುಳಿದ ನಾಯಕನನ್ನು ಸಿಎಂ ಮಾಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (B.Y.Vijayendra) ಆಗ್ರಹಿಸಿದರು.

ಮುಡಾ ಭ್ರಷ್ಟಾಚಾರ ಹಾಗೂ ವಾಲ್ಮೀಕಿ ನಿಗಮ ಹಗರಣ ಕುರಿತು ಮಾತನಾಡಿದ ಅವರು, ಮುಡಾದಲ್ಲಿ ದೊಡ್ಡ ಭ್ರಷ್ಟಾಚಾರವಾಗಿದೆ. 4-5 ಸಾವಿರ ಕೋಟಿಯ ದೊಡ್ಡ ಹಗರಣ ಬಯಲಾಗಿದೆ. ಸಿಎಂ ಆತಂಕಕ್ಕೆ ಒಳಗಾಗಿದ್ದಾರೆ. ಬಿಜೆಪಿ ಮೈಸೂರು ಚಲೋ ಮಾಡ್ತಿದೆ. ಪ್ರತಿಭಟನೆ ಹತ್ತಿಕ್ಕಲು ಸಿಎಂ ಪ್ರಯತ್ನ ಮಾಡ್ತಿದ್ದಾರೆ. ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ್ದಾರೆ. ಮೂಡಾದಲ್ಲಿ ಅಕ್ರಮ ಆಗಿಲ್ಲ ಅಂದರೆ ಸಿಬಿಐ ತನಿಖೆಗೆ ಕೊಡಿ. ನೀವು ಪ್ರಾಮಾಣಿಕವಾಗಿ ಇದ್ದರೆ ಸಿಬಿಐ ತನಿಖೆಗೆ ಕೊಡಿ. ನಿಮ್ಮ ಸರ್ಕಾರದ ಪಾಪದ ಕೊಡ ತುಂಬಿದೆ. ಯಾವುದೇ ಕ್ಷಣದಲ್ಲಿ ಸರ್ಕಾರ ಬೀಳಬಹುದು ಎಂದು ಕಿಡಿಕಾರಿದರು. ಇದನ್ನೂ ಓದಿ: ವಾಲ್ಮೀಕಿ ನಿಗಮದ ಹಗರಣ – ರಾಯಚೂರಿನಲ್ಲಿ ಇಡಿ ವಿಚಾರಣೆ ಅಂತ್ಯ

ಸಿದ್ದರಾಮಯ್ಯ ಅವರಿಗಿಂತ ಅನೇಕ ಹಿಂದುಳಿದ ನಾಯಕರಿದ್ದಾರೆ. ಬಿ.ಕೆ.ಹರಿಪ್ರಸಾದ್ ಕೂಡ ಅವರಿಗಿಂತ ಹಿಂದುಳಿದವರಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕೆ ಅನೇಕರು ಟವೆಲ್ ಹಾಕಿದ್ದಾರೆ. ಹಾಗಾಗಿ ಅದು ಬಿಕೆ ಮಾತಾ ಅಥವಾ ಡಿಕೆ ಮಾತಾ ಗೊತ್ತಿಲ್ಲ ಎಂದು ಸಿಎಂ ಹೇಳಿಕೆಯನ್ನು ಲೇವಡಿ ಮಾಡಿದರು.

ಈಗಾಗಲೇ ನಾಗೇಂದ್ರ ಬಂಧನ ಆಗಿದೆ. ರಾಜ್ಯವು ಕಾಂಗ್ರೆಸ್‌ಗೆ ಎಟಿಎಂ ಆಗಿದೆ. ರಾಹುಲ್ ಗಾಂಧಿಗೆ ದುಡ್ಡು ಕಳುಸೋ ಕೆಲಸ ಇವರು ಮಾಡ್ತಿದ್ದಾರೆ. ವಾಲ್ಮೀಕಿ ನಿಗಮದಲ್ಲಿ ದೊಡ್ಡ ಹಗರಣ ಆಗಿದೆ. ಸಿಎಂ ಇದಕ್ಕೆ ಉತ್ತರ ಕೊಡಬೇಕು. ಕೂಡಲೇ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು. ಸಿಬಿಐ ತನಿಖೆಗೆ ಕೊಡಿ. ಮುಡಾ ಕ್ಲೀನ್ ಮಾಡ್ತೀನಿ ಅಂತಾ ಸಿಎಂ ಹೇಳ್ತಿದ್ದಾರೆ. ಈಗ ಅವರಿಗೆ ಜ್ಞಾನೋದಯವಾಗಿದೆ. ತಮ್ಮ ಬಣ್ಣ ಬಯಲಾದ ಹಿನ್ನೆಲೆ ಈಗ ಮಾತಾಡ್ತಿದ್ದಾರೆ. ಎಸ್‌ಐಟಿ ಬೇಕಾಗಿಲ್ಲ, ಸಿಬಿಐಗೆ ಕೊಡಬೇಕು. ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ. ಇನ್ನೊಬ್ಬ ಹಿಂದುಳಿದ ನಾಯಕನನ್ನ ಸಿಎಂ ಮಾಡಿ. ಸಿಎಂ ಸಿದ್ದರಾಮಯ್ಯ ಮುಂದುವರಿಯಲು ನೈತಿಕತೆ ಇಲ್ಲ. ನಾನು ಸಿಎಂ ಸ್ಥಾನದಲ್ಲಿ ಇರೋದು ಕೆಲವರಿಗೆ ಆಗ್ತಿಲ್ಲ ಅಂತಾ ಅವರ ಪಕ್ಷದವರಿಗೆ ಹೇಳ್ತಿದ್ದಾರೆ. ಸಿದ್ದರಾಮಯ್ಯ ಇವತ್ತು ಎಕ್ಸ್ಪೋಸ್ ಆಗಿದ್ದಾರೆ. ಮುಡಾ ಅಕ್ರಮದಲ್ಲಿ ಸಿಎಂ ಕುಟುಂಬ ಭಾಗಿಯಾಗಿದೆ ಎಂದು ಗಂಭೀರ ಆರೋಪ ಮಾಡಿದರು. ಇದನ್ನೂ ಓದಿ: ನನಗೇನೂ ಗೊತ್ತಿಲ್ಲ: ಇ.ಡಿ ವಶಕ್ಕೆ ಪಡೆದಾಗ ಶಾಸಕ ನಾಗೇಂದ್ರ ಪ್ರತಿಕ್ರಿಯೆ

ವಾಲ್ಮೀಕಿ ಹಗರಣದಲ್ಲಿ ಬೇರೆ ರಾಜ್ಯಕ್ಕೆ ಹಣ ಹೋಗಿದೆ. ಡೆಲ್ಲಿ ಕಾಂಗ್ರೆಸ್‌ಗೆ ಕರ್ನಾಟಕ ಎಟಿಎಂ ಆಗಿದೆ. ವಾಲ್ಮೀಕಿ ಹಗರಣ ದೊಡ್ಡದಾಗಿದೆ. ಮುಡಾ ಹಗರಣ ಯಾವುದೇ ತಡ ಮಾಡದೇ ಸಿಬಿಐಗೆ ವಹಿಸಬೇಕು. ಸಿದ್ದರಾಮಯ್ಯ ಕೂಡಲೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಈ ದೇಶದಲ್ಲಿ ನನ್ನ ಕುಟುಂಬಕ್ಕೆ 62 ಕೋಟಿ ಅನ್ಯಾಯ ಆಗಿದೆ ಅಂತಾ ಜನರ ದುಡ್ಡು ಲೂಟಿ ಹೊಡೆಯುತ್ತಿರೋ ಏಕೈಕ ಸಿಎಂ ಸಿದ್ದರಾಮಯ್ಯ. ಡಿಸಿ ಅವರು ಸ್ಪಷ್ಟವಾಗಿ ಅಕ್ರಮ ಆಗಿರೋ ಬಗ್ಗೆ ವರದಿ ಕೊಟ್ಟಿದ್ದಾರೆ. ಒಂದು ಕ್ಷಣದಲ್ಲಿ ಸಿಎಂ ಆ ಸ್ಥಾನದಲ್ಲಿ ಕುಳಿತುಕೊಳ್ಳುವ ನೈತಿಕತೆ ಇಲ್ಲ. ಸಿಎಂ ನಮ್ಮ ಹೋರಾಟ ಹತ್ತಿಕ್ಕುವ ಕೆಲಸ ಮಾಡ್ತಿದ್ದೀರಾ? ನಮ್ಮ ಶಾಸಕರು, ಕಾರ್ಯಕರ್ತರನ್ನು ಅರೆಸ್ಟ್ ಮಾಡ್ತಿದ್ದಾರೆ. ನಮ್ಮ ಕಾರ್ಯಕರ್ತರಿಗೆ ಇದ್ದ ತಿಂಡಿ ಬಿಸಾಕಿದ್ದಾರೆ. ಬಿಜೆಪಿ ಕೈ ಕಟ್ಟಿ ಕುಳಿತುಕೊಳ್ಳುವುದಿಲ್ಲ ಎಂದು ಎಚ್ಚರಿಸಿದರು.

Share This Article