ಏಸು ಪ್ರತಿಮೆ ವಿವಾದ – ಜನವರಿ 13ಕ್ಕೆ ಪ್ರತಿಭಟನೆ ನಡೆಸಲಿರುವ ಬಿಜೆಪಿ ನಾಯಕರು

Public TV
1 Min Read

ರಾಮನಗರ: ಕನಕಪುರ ತಾಲೂಕಿನ ಹಾರೋಬೆಲೆ ಗ್ರಾಮದ ಕಪಾಲ ಬೆಟ್ಡದಲ್ಲಿ ನಿರ್ಮಾಣವಾಗುತ್ತಿರುವ ಏಸು ಕ್ರಿಸ್ತನ ಪ್ರತಿಮೆ ವಿರೋಧಿಸಿ ಜನವರಿ 13ರಂದು ಬೆಟ್ಟಕ್ಕೆ ಭೇಟಿ ನೀಡಿ ಪ್ರತಿಭಟನೆ ನಡೆಸುವುದಾಗಿ ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ರಾಮನಗರದಲ್ಲಿ ತಿಳಿಸಿದ್ದಾರೆ.

ಕಪಾಲ ಬೆಟ್ಟದಲ್ಲಿ ನಿರ್ಮಾಣವಾಗುತ್ತಿರುವ ಏಸು ಕ್ರಿಸ್ತನ ಪ್ರತಿಮೆ ಇದೀಗ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಈಗಾಗಲೇ ಸರ್ಕಾರದಿಂದ ಜಿಲ್ಲಾಡಳಿತಕ್ಕೆ ವರದಿ ನೀಡುವಂತೆ ಸಹ ಸೂಚನೆ ನೀಡಲಾಗಿದೆ. ಇದೀಗ ದಿನದಿಂದ ದಿನಕ್ಕೆ ವಿವಾದ ರಂಗೇರುತ್ತಿದ್ದು ಬಿಜೆಪಿ ನಾಯಕರು ಬೆಟ್ಟಕ್ಕೆ ಭೇಟಿ ನೀಡಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

ರಾಮನಗರದಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಅಭಿಯಾನ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರು ಭಾಗಿಯಾಗಿದ್ದರು. ನಗರದ ಕೆಂಪೇಗೌಡ ಸರ್ಕಲ್‍ನಿಂದ ಆರಂಭವಾದ ಜಾಗೃತಿ ಜಾಥಾ ಮೆರವಣಿಗೆ ಜೂನಿಯರ್ ಕಾಲೇಜ್ ಮೈದಾನದವರೆಗೆ ನಡೆಸಲಾಯಿತು. ಸಿಎಎ ಬೆಂಬಲದ ಅಭಿಯಾನದಲ್ಲಿ ಮಾಜಿ ಎಂಎಲ್‍ಸಿ ಅಶ್ವಥ್ ನಾರಾಯಣ್, ಬಿಜೆಪಿ ಜಿಲ್ಲಾಧ್ಯಕ್ಷ ಎಂ. ರುದ್ರೇಶ್ ಸೇರಿದಂತೆ ಹಲವರು ಭಾಗಿಯಾಗಿದ್ದರು.

ಈ ವೇಳೆ ಮಾಜಿ ಸಚಿವ ಸಿ.ಪಿ ಯೋಗೇಶ್ವರ್‍ರವರು, ಕಪಾಲ ಬೆಟ್ಟ ಅರಣ್ಯ ಪ್ರದೇಶದಲ್ಲಿ ಬರುತ್ತೆ, ಅದು ಗೋಮಾಳದ ಜಮೀನು. ಅಲ್ಲಿ ಅನಧಿಕೃತವಾಗಿ ಏಸು ಕ್ರಿಸ್ತನ ಪ್ರತಿಮೆ ನಿರ್ಮಾಣ ಮಾಡ್ತಿರುವುದು ತಪ್ಪು ಎಂದರು. ಅಲ್ಲದೆ ಅನಧಿಕೃತವಾಗಿ ಪ್ರತಿಮೆ ನಿರ್ಮಾಣವಾಗುತ್ತಿರುವ ದೃಷ್ಟಿಯಿಂದ ಇದೇ ಜನವರಿ 13ರಂದು ಜಿಲ್ಲೆಯಾದ್ಯಂತ ಕಾರ್ಯಕ್ರಮ ರೂಪಿಸಿದ್ದೇವೆ. ಕಪಾಲ ಬೆಟ್ಟಕ್ಕೆ ಭೇಟಿ ನೀಡುತ್ತೇವೆ, ಕನಕಪುರದಲ್ಲಿ ಪ್ರತಿಭಟನೆ ಮಾಡುವುದಾಗಿ ಹೇಳಿದರು.

ನಾವು ಶಾಂತಿ ಪ್ರಿಯರಾಗಿದ್ದು, ನಾವು ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತೇವೆ. ಕಪಾಲ ಬೆಟ್ಟಕ್ಕೆ ಹೋಗಿ ಬಂದ ಬಳಿಕ ಕನಕಪುರದಲ್ಲಿ ಪ್ರತಿಭಟನೆ ಮೂಲಕ ಜನಜಾಗೃತಿ ಮೂಡಿಸುವಂತಹ ಕೆಲಸ ಮಾಡುವುದಾಗಿ ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *