ಪ್ರತಿನಿತ್ಯ 60 ಸಾವಿರ ಜನರಿಗೆ ಊಟ ಕಲ್ಪಿಸಿದ ಮುನಿರತ್ನ

Public TV
1 Min Read

ಬೆಂಗಳೂರು: ಇಡೀ ಭೂಮಂಡಲವೇ ಮಹಾಮಾರಿ ಕೊರೋನಾ ವೈರಸ್‍ಗೆ ತತ್ತರಿಸಿ ಹೋಗಿದ್ದು, ದೇಶದಲ್ಲಿಯೂ ಪರಿಸ್ಥಿತಿ ಬಿಗಡಾಯಿಸಿದ್ದರಿಂದ ಲಾಕ್ ಡೌನ್ ಘೋಷಿಸಲಾಗಿದೆ. ಹೀಗಾಗಿ ಕೆಲ ಬಡ ಜನತೆ ಊಟ, ಅಗತ್ಯ ವಸ್ತುಗಳಿಲ್ಲದೆ ಪರಿತಪಿಸುತ್ತಿದ್ದಾರೆ. ಇದನ್ನು ಮನಗಂಡ ಬಿಜೆಪಿ ಮುಖಂಡ ಮುನಿರತ್ನ ಅವರು ಬಡವರ ಹೊಟ್ಟೆ ತುಂಬಿಸುತ್ತಿದ್ದು, ನಿತ್ಯ 60 ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡುತ್ತಿದ್ದಾರೆ.

ತಮ್ಮ ಕ್ಷೇತ್ರದ 50 ರಿಂದ 60 ಸಾವಿರ ಜನರಿಗೆ ಪ್ರತಿನಿತ್ಯ ಮೂರು ಹೊತ್ತು ಊಟದ ವ್ಯವಸ್ಥೆ ಮಾಡಿದ್ದಾರೆ. ಬೆಳಗ್ಗೆ ಉಪಹಾರ, ಮಧ್ಯಾಹ್ನ ಊಟ ಮತ್ತು ರಾತ್ರಿಯ ಊಟದ ವ್ಯವಸ್ಥೆ ಮಾಡಿದ್ದು, ಇದಕ್ಕಾಗಿ ಮತ್ತಿಕೆರೆಯ ಕಲ್ಯಾಣ ಮಂಟಪದಲ್ಲಿ 60 ಜನರ ಬಾಣಸಿಗರ ತಂಡ ಊಟ ತಯಾರು ಮಾಡುತ್ತಿದೆ.

ಪ್ರತಿನಿತ್ಯ 5 ಸಾವಿರ ಕೆ.ಜಿ ಅಕ್ಕಿ ಬಳಸಿಕೊಂಡು ಆಹಾರ ತಯಾರು ಮಾಡುತ್ತಿದ್ದು, ಕ್ಷೇತ್ರದ ಬಡವರಿಗೆ, ಕೂಲಿ ಕಾರ್ಮಿಕರಿಗೆ ಊಟದ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತಿದ್ದಾರೆ. ಇದಕ್ಕೆ ಬಡ ಜನತೆ ಸಹ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಕೇಂದ್ರ ಸರ್ಕಾರ ಎಪ್ರಿಲ್ 14ರ ವರಗೆ ದೇಶಾದ್ಯಂತ ಲಾಕ್ ಡೌನ್ ಮಾಡಿದೆ. ಜನ ಅನವಶ್ಯಕವಾಗಿ ರಸ್ತೆಗೆ ಬರದೇ ತಮ್ಮ ಮನೆಗಳಲ್ಲೇ ಇದ್ದು ಸೋಂಕು ತಗುಲದಂತೆ ಕಟ್ಟೆಚ್ಚರವಹಿಸಬೇಕಾಗಿದೆ. ದೇಶ ಲಾಕ್ ಡೌನ್ ಆಗಿ ಇವತ್ತಿಗೆ 6 ನೇ ದಿನ. ಉಳ್ಳವರು ಹೇಗೋ ಜೀವನ ಸಾಗಿಸುತ್ತಿದ್ದಾರೆ. ಅದರೆ ದಿನಗೂಲಿ ನೌಕರರು, ಕೂಲಿ ಕಾರ್ಮಿಕರು, ಬಡವರು ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ.

Share This Article
Leave a Comment

Leave a Reply

Your email address will not be published. Required fields are marked *