ನಿಮಗಂತೂ ಬೇರೆ ಉದ್ಯೋಗವಿಲ್ಲ, ಬೆಂಕಿ ಹಚ್ಚೋ ಕೆಲ್ಸ ಮಾಡ್ತೀರಾ: ಮಾಧ್ಯಮಗಳ ವಿರುದ್ಧ ಈಶ್ವರಪ್ಪ ಕಿಡಿ

Public TV
1 Min Read

ಬಾಗಲಕೋಟೆ: ಬಿಜೆಪಿ ಪಕ್ಷದಲ್ಲಿನ ಭಿನ್ನಮತದ ಬಗ್ಗೆ ಪ್ರಶ್ನಿಸಿದ್ದಕ್ಕೆ ಮಾಧ್ಯಮದವರ ಮೇಲೆಯೇ ಪರಿಷತ್ ವಿಪಕ್ಷ ನಾಯಕ ಕೆ.ಎಸ್ ಈಶ್ವರಪ್ಪ ಕಿಡಿಕಾರಿದ್ದಾರೆ.

ಪರಿವರ್ತನಾ ಯಾತ್ರೆಯಲ್ಲಿ ಹೆಚ್ಚಾಗಿ ಕಾಣಿಸದೇ ಇದ್ದ ಹಿನ್ನೆಲೆಯಲ್ಲಿ ಮಾಧ್ಯಮಗಳು ಪಕ್ಷದಲ್ಲಿ ಭಿನ್ನಮತ ಇದೆಯೇ ಎಂದು ಕೇಳಿದ್ದಕ್ಕೆ, ನಿಮಗಂತೂ ಬೇರೆ ಉದ್ಯೋಗವಿಲ್ಲ, ಬೆಂಕಿ ಹಚ್ಚೊ ಕೆಲಸ ಮಾಡುತ್ತಿರಾ ಎಂದು ಗರಂ ಆಗಿ ಪ್ರತಿಕ್ರಿಯಿಸಿದ್ದಾರೆ.

ಬೆಳಗಾವಿ ಅಧಿವೇಶನದ ಸಂದರ್ಭದಲ್ಲೂ ನನ್ನ ಆರೋಗ್ಯ ಸರಿ ಇರಲಿಲ್ಲ. ಅಲ್ಲಿಂದ ಈವರೆಗೂ ನನ್ನ ಆರೋಗ್ಯ ಸರಿ ಹೋಗಿಲ್ಲ. ಹುನಗುಂದ ಮತ್ತು ಕನಕಗಿರಿಯಲ್ಲಿ ನಮ್ಮ ಕಾರ್ಯಕರ್ತರು ಸಬಲೀಕರಣದ ಕಾರ್ಯಕ್ರಮದಲ್ಲಿ ಭಾಗವಹಿಸಲೇ ಬೇಕು ಅಂತ ಒತ್ತಾಯ ಮಾಡಿದ್ದಕ್ಕೆ ನಾನು ಇಲ್ಲಿಗೆ ಬಂದಿದ್ದೇನೆ. ನನಗೆ ಈವಾಗ್ಲೂ ಹುಷಾರಿಲ್ಲ. ಅದು ಬಿಟ್ಟು ಏನೇನೋ ಕಾರಣಗಳನ್ನು ಕಟ್ಟಿದ್ರೆ ಹೇಗೆ ಎಂದು ಪ್ರಶ್ನಿಸಿದ ಅವರು, ಕಾರಣಗಳನ್ನು ಕಟ್ಟೋದ್ರಲ್ಲಿ ಮಾಧ್ಯಮದವರು ರಾಜಕಾರಣಗಳಿಗಿಂತ ಎಕ್ಸ್ ಪರ್ಟ್. ಎಲ್ಲಾ ರಾಜಕಾರಣಿಗಳನ್ನು ನೀವು ಮೀರಿಸುತ್ತೀರಿ ಅಂತ ಸಿಡಿಮಿಡಿಗೊಂಡರು.

ನಿಮ್ಮ ಮನೆಯಲ್ಲಿ ಗಂಡ ಹೆಂಡಿ ಜಗಳ ನಡೆಯಲ್ವ? ಅಣ್ಣ-ತಮ್ಮ ಜಗಳಾಡಲ್ವ? ಒಂದು ಕುಟುಂಬ ಅಂದ್ಮೆಲೆ ಇಂಥದ್ದೆಲ್ಲಾ ಇರುತ್ತೆ. ಕೂತುಕೊಂಡು ಬಗೆಹರಿಸುತ್ತೇವೆ. ನೀವು ನಿಮ್ಮ ಹೆಂಡ್ತಿ ಯಾಕೆ ಜಗಳಾಡುತ್ತೀರಿ ಅಂತ ಕೇಳಿದ್ರೆ, ಅದು ನಾನು ನನ್ನ ಹೆಂಡ್ತಿ ಮುಚ್ಕೊಂಡಿರು ನೀನು ಅಂತ ಹೇಳಲ್ವಾ ಎಂದು ದರ್ಪದಿಂದ ಪ್ರಶ್ನಿಸಿದ್ರು.

ಆರೋಗ್ಯ ಸರಿ ಇಲ್ಲದ ಕಾರಣದಿಂದಾಗಿ ನಾನು ಪರಿವರ್ತನಾ ಯಾತ್ರೆಯಲ್ಲಿ ಭಾಗವಹಿಸಿಲ್ಲ. ಪಕ್ಷದಲ್ಲಿ ಭಿನ್ನಮತ ಇರೋದು ನಿಜ, ಆದ್ರೆ ಬಗೆಹರಿಸಿಕೊಳ್ಳುತ್ತೇವೆ ಎಂದು ತೇಪೆ ಹಚ್ಚುವ ಕೆಲಸ ಮಾಡಿದ್ರು.

ಬಾಗಲಕೋಟೆಗೆ ಆಗಮಿಸಿದ ವೇಳೆ ಸ್ಥಳಿಯ ನಾಯಕರು ಸ್ವಾಗತಿಸಲು ಬಾರದ ಬಗ್ಗೆ ಪ್ರತಿಕ್ರಿಯಿಸಿ, ಕನ್ನಡ ಅರ್ಥವಾಗಲ್ವಾ? ಇನ್ನು ಬೇರೆ ಪದ ಬಳಸಬೇಕಾಗುತ್ತದೆ ಎಂದು ಮಾಧ್ಯಮದವರ ಮೇಲೆ ದರ್ಪತೋರಿದ್ರು. ನಂತ್ರ ನಿಮ್ಮ ಪಕ್ಷದಲ್ಲಿಯೇ ನಿಮ್ಮನ್ನ ವ್ಯವಸ್ಥಿತವಾಗಿ ಮುಗಿಸುವ ಸಂಚು ನಡೆದಿದೆಯಾ, ಒಬ್ಬಂಟಿಯಾದ ಬಗ್ಗೆ ಪ್ರಶ್ನಿಸಿದ್ದಕ್ಕೆ, ಯಾರೋ ಕುಡಿದವರು ಹೇಳಬೇಕಷ್ಟೆ ಅಂತ ಮಾಧ್ಯಮದವರ ವಿರುದ್ಧ ಕೆಂಡಾಮಂಡಲರಾದ್ರು.

Share This Article
Leave a Comment

Leave a Reply

Your email address will not be published. Required fields are marked *