ಕಂಡು ಕೇಳರಿಯದ `ಮಹಾ’ ನಾಟಕದ ಸೂತ್ರಧಾರಿ ಯಾರು?

Public TV
2 Min Read

ಮುಂಬೈ: ಶಿವಸೇನೆ-ಕಾಂಗ್ರೆಸ್-ಎನ್‍ಸಿಪಿ ಸಾರಥ್ಯದಲ್ಲಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಆಗಿಯೇ ಬಿಡುತ್ತದೆ. ಉದ್ಧವ್ ಠಾಕ್ರೆ ಸಿಎಂ ಆಗುತ್ತಾರೆ. ರಾಜ್ಯಪಾಲರ ಕರೆ ಬರೋದು ಬಾಕಿ ಅಷ್ಟೇ. ಇನ್ನೇನು ಸರ್ಕಾರ ಬಂದು ಬಿಡುತ್ತೆ ಅಂತಾನೆ ಎಲ್ಲರೂ ಶುಕ್ರವಾರ ರಾತ್ರಿವರೆಗೂ ಭಾವಿಸಿಬಿಟ್ಟಿದ್ದರು. ಬಾಳಾ ಠಾಕ್ರೆ ಪುತ್ರ ಉದ್ಧವ್ ಕೂಡ ಸಿಎಂ ಪದವಿಗೇರುವ ಕನಸಿನಲ್ಲಿದ್ದರು. ಆದರೆ ಬೆಳಗಾಗುವಷ್ಟರಲ್ಲಿ ಮಹಾರಾಷ್ಟ್ರ ರಾಜಕೀಯದಲ್ಲಿ ಸೀನ್ ಬದಲಾಗಿ ಹೋಗಿತ್ತು. ಯಾರೂ ಊಹಿಸದ ರೀತಿಯಲ್ಲಿ ಪೊಲಿಟಿಕಲ್ ಸರ್ಜಿಕಲ್ ಸ್ಟ್ರೈಕ್ ನಡೆದು ಹೋಗಿತ್ತು. ಏನಾಗುತ್ತಿದೆ ಎಂದು ಎಲ್ಲರೂ ತಿಳಿದುಕೊಳ್ಳುವಷ್ಟರಲ್ಲಿ ಫಡ್ನವಿಸ್ ಸಿಎಂ ಆಗಿಬಿಟ್ಟರು. ಬಿಜೆಪಿ ಬೆಂಬಲಕ್ಕೆ ನಿಂತ ಅಜಿತ್ ಪವಾರ್ ಡಿಸಿಎಂ ಆಗಿ ಪವರ್ ಸ್ಟ್ರೋಕ್ ಕೊಟ್ಟಿದ್ದರು.

ಇಷ್ಟೆಲ್ಲ ಸುಲಭವಾಗಿ ಮುಗಿಯಲು ಕಾರಣರಾದ್ರೂ ಯಾರು..? ಸ್ಕೆಚ್ ಹಾಕಿ ರಣತಂತ್ರ ರೂಪಿಸಿದ್ದು ಮೋದಿ-ಅಮಿತ್ ಶಾ ಜೋಡಿ ಅನ್ನೋದು ಎಲ್ಲರಿಗೂ ಗೊತ್ತಿದ್ದರೂ ಅದನ್ನು ಯಾರಿಗೂ ಗೊತ್ತಿಲ್ಲದೆ, ನೀಟಾಗಿ ಕೊಟ್ಟ ಕೆಲಸವನ್ನು ಮಾಡಿ ಮುಗಿಸಿದ್ದು ಯಾರು ಅನ್ನೋದು ಈಗ ಎಲ್ಲರ ಕುತೂಹಲವಾಗಿದೆ. ಇಡೀ ದೇಶ ಕಂಡು ಕೇಳರಿಯದ ನಡೆದ `ಮಹಾ’ನ್ ನಾಟಕದ ಸೂತ್ರಧಾರಿ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಸಂಸದ ಭೂಪೇಂದ್ರ ಸಿಂಗ್ ಯಾದವ್. ಬಿಜೆಪಿ ಚಾಣಕ್ಯ ಅಮಿತ್ ಶಾ ರೂಪಿಸಿದ ರಣತಂತ್ರವನ್ನು ಚಾಚು ತಪ್ಪದೇ ಜಾರಿಗೆ ತಂದರು. ಇದನ್ನೂ ಓದಿ: ಅಜಿತ್ ಪವಾರ್ ನಿರ್ಧಾರದೊಂದಿಗೆ ಎನ್‍ಸಿಪಿ ಇಲ್ಲ: ಶರದ್ ಪವಾರ್

ಅಮಿತ್ ಶಾ ಪಾಲಿಗೆ ಬಲಗೈ ಬಂಟನಂತೆ ಇರುವ ಭೂಪೇಂದ್ರ ಸಿಂಗ್ ಯಾದವ್, ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಕಠಿಣವೆನಿಸಿದ್ದ ರಾಜ್ಯಗಳ ಹೊಣೆ ಹೊತ್ತು ಕಮಲಕ್ಕೆ ಭರ್ಜರಿ ಫಸಲು ತಂದುಕೊಟ್ಟಿದ್ದರು. ಪ್ರಚಾರದಿಂದ ಒಂದಷ್ಟು ದೂರ ಇದ್ದುಕೊಂಡು ಪಕ್ಷ ಕೊಟ್ಟ ಕೆಲಸವನ್ನು ಪೂರ್ತಿ ಮಾಡೋದರಲ್ಲಿ ಎತ್ತಿದ ಕೈ ಈ ಭೂಪೇಂದ್ರ. ಇವರೇ ಈಗ ಮಹಾರಾಷ್ಟ್ರದಲ್ಲಿ ದೇವೇಂದ್ರನ ಚಕ್ರ ತಿರುಗಿಸಿರುವವರು. ಇದನ್ನೂ ಓದಿ: ದೇವೇಂದ್ರ ಫಡ್ನವೀಸ್ ಪ್ರಮಾಣವಚನ- ಎನ್‍ಸಿಪಿ, ಕಾಂಗ್ರೆಸ್, ಶಿವಸೇನೆ ಸುಪ್ರೀಂ ಮೊರೆ

ಫಡ್ನವಿಸ್ ಪದಗ್ರಹಣಕ್ಕಾಗಿ ಶುಕ್ರವಾರ ಸಂಜೆಯೇ ಮಹಾ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಜೊತೆ ಸೇರಿ ಸಕಲ ತಯಾರಿಯನ್ನು ಮಾಡಿ ಮುಗಿಸಿದ್ದರಂತೆ. ಭೂಪೇಂದ್ರರ ಹಗಲಿರುಳು ಕೆಲಸದಿಂದಾಗಿಯೇ ರಾತ್ರೋರಾತ್ರಿ ಅಜಿತ್ ಪವಾರ್ ಕ್ಯಾಂಪ್ ಬದಲಿಸಿದ್ದು, ಬೆಳ್ಳಂಬೆಳಗ್ಗೆ ಕೇವಲ 3 ನಿಮಿಷದಲ್ಲಿ ಯಾರಿಗೂ ಗೊತ್ತಾಗದ ರೀತಿ ಮಹಾ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು. ಈ ಮೂಲಕ ಅಮಿತ್ ಶಾ ತಮ್ಮ ಮೇಲೆ ಇಟ್ಟ ನಂಬಿಕೆಯನ್ನು ಭೂಪೇಂದ್ರ ಸಿಂಗ್ ಯಾದವ್ ಉಳಿಸಿಕೊಂಡ್ರು.

ಭೂಪೇಂದ್ರರಿಂದ ದೇವೇಂದ್ರ ಸರ್ಕಾರ ಅಸ್ತಿತ್ವಕ್ಕೆ ಬಂತು. ಆದರೆ ಆ ಸರ್ಕಾರದ ಬುಡವೇ ಇನ್ನೂ ಸರಿ ಹೋಗಿಲ್ಲ. ಎನ್‍ಸಿಪಿಯ ಅಜಿತ್ ಪವಾರ್ ನಂಬಿಕೊಂಡಿದ್ದ ಬಿಜೆಪಿಗೆ ಶಾಕ್ ಆಗಿದೆ. ಬೆಳಗ್ಗೆ ಪ್ರಮಾಣ ವಚನಕ್ಕೆ ಬಂದಿದ್ದವರು ಸಂಜೆ ಹೊತ್ತಿಗೆ ದೆಹಲಿಯಿಂದ ಓಡೋಡಿ ಬಂದು ಕ್ಯಾಂಪ್ ಬದಲಿಸಿದ್ದಾರೆ. ಈಗ ಅಜಿತ್ ಪವಾರ್ ಬಳಿ ನಾಲ್ವರು ಶಾಸಕರಷ್ಟೇ ಉಳಿದುಕೊಂಡಿದ್ದಾರೆ. ಇದನ್ನೂ ಓದಿ: ಬಿಜೆಪಿಗೆ ಅಧಿಕಾರದ ಕುರ್ಚಿ ನೀಡಿದ ಅಜಿತ್ ಪವಾರ್ ಯಾರು? ಇಲ್ಲಿದೆ ಮಾಹಿತಿ

ಕರ್ನಾಟಕದ ರೆಬೆಲ್ ಶಾಸಕರು ಇದ್ದ ಹೋಟೆಲ್‍ನಲ್ಲಿ ಎನ್‍ಸಿಪಿ ಶಾಸಕರು ಕ್ಯಾಂಪ್ ಮಾಡಿದ್ದಾರೆ. ಕಾಂಗ್ರೆಸ್ ಶಾಸಕರು ಭೋಪಾಲ್‍ಗೆ ಶಿಫ್ಟ್ ಆಗಿದ್ದಾರೆ. ಶಿವಸೇನೆ ಶಾಸಕರು ರೆಸಾರ್ಟ್ ಒಂದರಲ್ಲಿ ಒಟ್ಟಾಗಿ ಇದ್ದಾರೆ. ಈ ನಡುವೆ, ಇವತ್ತು ಭಾನುವಾರವಾದ್ರೂ ಸುಪ್ರೀಂಕೋರ್ಟ್ ಶಿವಸೇನೆ-ಎನ್‍ಸಿಪಿ-ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಗಳನ್ನು ಕೈಗೆತ್ತಿಕೊಳ್ಳಲಿದೆ. ಈ ಬೆಳವಣಿಗೆ ಬಿಜೆಪಿಯನ್ನು ಆತಂಕಕ್ಕೆ ದೂಡಿದೆ. ಸಿಎಂ ಫಡ್ನವಿಸ್‍ಗೆ ಬಹುಮತ ಸಾಬೀತು ಮಾಡಲು ಎಷ್ಟು ದಿನ ಸಮಯ ಸಿಕ್ಕುತ್ತೆ ಎನ್ನುವುದರ ಮೇಲೆ ಬಿಜೆಪಿ ಸರ್ಕಾರದ ಪವರ್ ನಿಂತಿದೆ.

Share This Article
Leave a Comment

Leave a Reply

Your email address will not be published. Required fields are marked *