ಬಿಜೆಪಿಗೆ ಗಾಂಧಿ, ನೆಹರುರನ್ನ ತೆಗಳುವುದೇ ಕೆಲಸ – ಸಿದ್ದರಾಮಯ್ಯ

Public TV
2 Min Read

-ಯುವಪೀಳಿಗೆ ಸಹಕಾರ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಳ್ಳಿ: ಸಿಎಂ ಕರೆ

ಬೆಂಗಳೂರು: ಬಿಜೆಪಿಗೆ (BJP) ಗಾಂಧಿ ಹಾಗೂ ನೆಹರು ಅವರನ್ನು ತೆಗಳುವುದೇ ಕೆಲಸ ಎಂದು ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ (Siddaramaiah) ವಾಗ್ದಾಳಿ ನಡೆಸಿದರು.

ಜವಾಹರಲಾಲ್ ನೆಹರು (Jawaharlal Nehru) ಜನ್ಮದಿನದ ಅಂಗವಾಗಿ ವಿಧಾನಸೌಧದಲ್ಲಿರುವ ನೆಹರು ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ದೇಶದ ಮೊದಲ ಪ್ರಧಾನಮಂತ್ರಿ ಜವಾಹರ್‌ಲಾಲ್ ನೆಹರು ಅವರ ಜನ್ಮದಿನದಂದೇ ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಮಕ್ಕಳನ್ನು ಕಂಡರೆ ಬಹಳ ಪ್ರೀತಿಯಿದ್ದ ಅವರು ಇಂದಿನ ಮಕ್ಕಳೇ ಭವಿಷ್ಯದ ಪ್ರಜೆಗಳು ಎಂದು ಅರ್ಥೈಸಿಕೊಂಡಿದ್ದರು. ಆದ್ದರಿಂದ ಚಾಚಾ ನೆಹರು ಎಂದೇ ಅವರನ್ನು ಕರೆಯಲಾಗುತ್ತಿತ್ತು. ಆದರೆ ಇಂದಿನ ಬಿಜೆಪಿಯವರಿಗೆ ಗಾಂಧಿ ಹಾಗೂ ನೆಹರು ಅವರನ್ನು ತೆಗಳುವುದೇ ಕೆಲಸವಾಗಿದೆ ಎಂದರು. ಇದನ್ನೂ ಓದಿ: ಜವಾಹರಲಾಲ್ ನೆಹರು ಆಧುನಿಕ ಭಾರತದ ನಿರ್ಮಾತೃ: ಸಿದ್ದರಾಮಯ್ಯ

ವಿದ್ಯಾರ್ಥಿ ದೆಸೆಯಲ್ಲಿದ್ದಾಗಲೇ ದೇಶ ಪ್ರೇಮ ಹಾಗೂ ಸ್ವಾತಂತ್ರ‍್ಯ ಪ್ರೇಮವನ್ನು ಬೆಳೆಸಿಕೊಂಡಿದ್ದರು. ಬ್ರಿಟಿಷರ ವಿರುದ್ಧ ಹೋರಾಡುವ ಮನೋಭಾವ ಬೆಳೆಸಿಕೊಂಡು ಮಹಾತ್ಮ ಗಾಂಧಿಯವರ ನೆಚ್ಚಿನ ಶಿಷ್ಯರಾಗಿ ಸ್ವಾತಂತ್ರ‍್ಯ ಹೋರಾಟದಲ್ಲಿ ಪಾಲ್ಗೊಳ್ಳುತ್ತಾರೆ. ಸುಮಾರು 9 ವರ್ಷಗಳ ಕಾಲ ಕಾರಾಗೃಹದಲ್ಲಿದ್ದು, ದೇಶಕ್ಕಾಗಿ ಬಹಳಷ್ಟು ತ್ಯಾಗ, ಬಲಿದಾನಗಳನ್ನು ಮಾಡಿದ್ದಾರೆ. ದೇಶಕ್ಕೆ ಸ್ವಾತಂತ್ರ‍್ಯ ಲಭಿಸಿದಾಗ ದೇಶದ ಬಜೆಟ್ ಗಾತ್ರ 197 ಕೋಟಿ ರೂ.ಗಳು ಮಾತ್ರ ಇತ್ತು. ಎರಡು, ಮೂರು ವರ್ಷಗಳ ನಂತರ 4 ಅಂಕಿಗಳ ಹಂತಕ್ಕೆ ತಲುಪಿತು ಎಂದು ಹೇಳಿದರು.

ಕೃಷಿ, ನೀರಾವರಿ, ಕೈಗಾರಿಕೆಗಳಲ್ಲಿ ಆಸಕ್ತಿ ಹೊಂದಿದ್ದ ನೆಹರೂ ಅವರು ದೇಶವನ್ನು ವೈಜ್ಞಾನಿಕವಾಗಿ, ವೈಚಾರಿಕವಾಗಿ ಬೆಳೆಸುವ ಪ್ರಯತ್ನ ಮಾಡಿದರು. ಪಂಚವಾರ್ಷಿಕ ಯೋಜನೆಗಳ ಮೂಲಕ ದೇಶ ಕಟ್ಟುವ ಕೆಲಸವನ್ನು ಮಾಡಿದರು. ದೇಶದಲ್ಲಿ ಅನೇಕ ಕೈಗಾರಿಕೆಗಳಾಗಿದ್ದರೆ, ಅಣೆಕಟ್ಟುಗಳಾಗಿದ್ದರೆ, ಕೃಷಿಯಲ್ಲಿ ಸ್ವಾವಲಂಬಿಗಳಾಗಿದ್ದರೆ ಅದಕ್ಕೆ ನೆಹರು ಅವರು ಕಾರಣ ಎಂದು ಸ್ಮರಿಸಬೇಕು. ಸುದೀರ್ಘ ಹದಿನೇಳು ವರ್ಷಗಳ ಕಾಲ ಈ ದೇಶದ ಪ್ರಧಾನಿಗಳಾಗಿದ್ದವರು ಎಂದು ಸ್ಮರಿಸಿದರು.ಇದನ್ನೂ ಓದಿ: ‘ನಿಮೋ’ ಆಡಳಿತವನ್ನು ಬಿಹಾರದ ಜನ ಒಪ್ಪಿದ್ದಾರೆ: ಸುನಿಲ್ ಕುಮಾರ್

ಬಿಜೆಪಿಗೆ ಗಾಂಧಿ ಹಾಗೂ ನೆಹರು ಅವರನ್ನು ತೆಗಳುವುದೇ ಕೆಲಸ. ದೇಶದ ಸ್ವಾತಂತ್ರ‍್ಯ ಹೋರಾಟದಲ್ಲಿ ಬಿಜೆಪಿಯ ಪಾತ್ರವೇ ಇಲ್ಲ. ಮಹಾತ್ಮ ಗಾಂಧಿ, ನೆಹರು ಅವರು ದೇಶಕ್ಕೆ ಸ್ವಾತಂತ್ರ‍್ಯ ತಂದುಕೊಟ್ಟವರು. ಅವರನ್ನು ತೆಗಳಿ, ಇಲ್ಲದ ಆರೋಪಗಳನ್ನು ಹೊರಿಸುವುದೇ ಅವರ ಕೆಲಸ. ನರೇಂದ್ರ ಮೋದಿ, ಬಿಜೆಪಿ, ಆರ್‌ಎಸ್‌ಎಸ್‌ನವರು ಗಾಂಧಿ ಮತ್ತು ನೆಹರು ಅವರನ್ನು ಹೀಯಾಳಿಸುವುದನ್ನೇ ಉದ್ಯೋಗ ಮಾಡಿಕೊಂಡಿದ್ದಾರೆ ಅಂತ ಕಿಡಿಕಾರಿದರು.

ಇನ್ನೂ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ ಆವರಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ, ಶ್ರೀ ಬಿ.ಎಸ್.ವಿಶ್ವನಾಥ್‌ರವರ ಪುತ್ತಳಿಯನ್ನು ಅನಾವರಣಗೊಳಿಸಿ ಮಾತನಾಡಿದ ಅವರು, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಶ್ರೀ ಬಿ.ಎಸ್.ವಿಶ್ವನಾಥ್ ಅವರು ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸಹಕಾರಿ ಮುಖಂಡರು. ವಿವಿಧ ಸಹಕಾರ ಸಂಘಗಳಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದವರು. ಸಹಕಾರ ಕ್ಷೇತ್ರದಲ್ಲಿ ಅಪ್ರತಿಮ ಕೊಡುಗೆ ನೀಡಿರುವ ಬಿ.ಎಸ್.ವಿಶ್ವನಾಥ್ ಅವರ ಪ್ರತಿಮೆಯನ್ನು ಇಂದು ಅತ್ಯಂತ ಸಂತೋಷದಿಂದ ಅನಾವರಣಗೊಳಿಸಲಾಗಿದೆ ಎಂದರು.

ಇಂದಿನ ಯುವಪೀಳಿಗೆ ಸಹಕಾರ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು. ಬಿ.ಎಸ್.ವಿಶ್ವನಾಥ್ ಅವರ ಆದರ್ಶಗಳನ್ನು ಎಲ್ಲರೂ ಪಾಲಿಸಬೇಕು ಅಂತ ಕರೆ ನೀಡಿದರು. ಸಹಕಾರಿ ಧುರೀಣರಾದ ಜಿ.ಟಿ.ದೇವೇಗೌಡರು, ಸೋಮಶೇಖರ್, ಷಡಕ್ಷರಿ, ರೇವಣ್ಣನವರು ಸೇರಿದಂತೆ ಎಲ್ಲ ಸಹಕಾರಿಗಳನ್ನು ಅಭಿನಂದಿಸಿದ ಮುಖ್ಯಮಂತ್ರಿಗಳು, ಅವರ ಕುಟುಂಬ ವರ್ಗದವರಿಗೆ ಶುಭಕೋರಿದರು.ಇದನ್ನೂ ಓದಿ: ‘ನಿಮೋ’ ಆಡಳಿತವನ್ನು ಬಿಹಾರದ ಜನ ಒಪ್ಪಿದ್ದಾರೆ: ಸುನಿಲ್ ಕುಮಾರ್

Share This Article