ಸಾರಿಗೆ ನೌಕರರ ವೇತನ ಪರಿಷ್ಕರಣೆಯಾಗದೇ ಇರಲು ಬಿಜೆಪಿ ಕಾರಣವಂತೆ: ಏನಿದು ಆದೇಶ ಗೊಂದಲ?

Public TV
2 Min Read

– ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ವೇತನ ಪರಿಷ್ಕರಣೆ
– ಬಿಜೆಪಿ ಸರ್ಕಾರ ಪ್ರತ್ಯೇಕ ನಿಧಿ ಹಂಚಿಕೆ ಮಾಡಿಲ್ಲ

ಬೆಂಗಳೂರು: ಸಾರಿಗೆ ನೌಕರರ ವೇತನ ಪರಿಷ್ಕರಣೆಯಾಗದೇ (Salary Hike) ಇರಲು ಬಿಜೆಪಿ ಸರ್ಕಾರದ ಆದೇಶವೇ ಕಾರಣ ಎಂದು ಎಂದು ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ದೂರಿದ್ದಾರೆ.

ಸಾರಿಗೆ ನಿಗಮಗಳ ಆರ್ಥಿಕ ಪರಿಸ್ಥಿತಿ ನೋಡಿಕೊಂಡು ಜಾರಿ ಮಾಡಬಹುದು ಅಂತಾ ಆದೇಶದಲ್ಲಿ ಇದೆ. ಬಿಜೆಪಿ (BJP) ಸರ್ಕಾರದ ಆದೇಶದಿಂದ ಹಿಂಬಾಕಿ ತಡವಾಗಿದೆ ಎಂದು ಹೇಳಿದ್ದಾರೆ.

ಏನಿದು ಆದೇಶ ಗೊಂದಲ?
ಪ್ರತಿ 4 ವರ್ಷಗಳಿಗೊಮ್ಮೆ ಸಾರಿಗೆ ನೌಕರರ ವೇತನ ಪರಿಷ್ಕರಣೆ ನಡೆಯುತ್ತದೆ. ಈ ಹಿಂದೆ 2012-2016ರ ವರೆಗೆ ವೇತನ ಹೆಚ್ಚಳ ಮಾಡಿದಾಗ 2012ರಿಂದ ಜಾರಿಗೆ ಬರುವುದಾಗಿ, 2016-2020ರ ವರೆಗೆ ವೇತನ ಹೆಚ್ಚಳ ಮಾಡಿದಾಗ 2016ರಿಂದ ಜಾರಿಗೆ ಬರುವಂತೆ ಎಂದು ಸರ್ಕಾರದ ಆದೇಶದಲ್ಲಿ ಉಲ್ಲೇಖವಾಗಿತ್ತು.

2023ರ ಆದೇಶದಲ್ಲಿ 2023ರ ಮಾರ್ಚ್ 1ರಿಂದ ಜಾರಿಗೆ ಬರುವಂತೆ ಎಂದು ಉಲ್ಲೇಖಿಸಿದೆ. ಈ ಆದೇಶದಲ್ಲಿ 2020 ರಿಂದ ಎಂದು ಉಲ್ಲೇಖ ಮಾಡಿಲ್ಲ. ಈ ಆದೇಶದ ಅನ್ವಯ ಮುಂದಿನ 4 ವರ್ಷ ಅಂದರೆ 2027 ರವರೆಗೆ ವೇತನ ಪರಿಷ್ಕರಣೆ ಮಾಡಲು ಸಾಧ್ಯವಿಲ್ಲ. ಆದೇಶದಲ್ಲಿ ಎಲ್ಲಿಯೂ ಸ್ಪಷ್ಟವಾಗಿ 2020 ರಿಂದಲೇ ಜಾರಿಗೆ ಬರುವಂತೆ ಎಂದು ಉಲ್ಲೇಖ ಮಾಡದ ಕಾರಣ ವೇತನ ಪರಿಷ್ಕರಣೆ ಮಾಡಲು ಸಾಧ್ಯವಿಲ್ಲ ಎಂಬ ವಾದವನ್ನು ಕಾಂಗ್ರೆಸ್‌ ಸರ್ಕಾರ ಮುಂದಿಟ್ಟಿದೆ. ಇದನ್ನೂ ಓದಿ: ಟೆಕ್ಕಿಗಳಿಗೆ ಗುಡ್‌ನ್ಯೂಸ್‌ – ಆ.10ರಂದು ಯೆಲ್ಲೋ ಲೈನ್ ಉದ್ಘಾಟಿಸಲಿದ್ದಾರೆ ಮೋದಿ

ಪ್ರತ್ಯೇಕ ನಿಧಿ ಇಲ್ಲ
2020 ರಿಂದ‌ ಅನ್ವಯವಾಗುವಂತಿದ್ದರೆ ಇದಕ್ಕಾಗಿ‌ ಯಾವುದೇ ಪ್ರತ್ಯೇಕ ನಿಧಿಯನ್ನು ಹಿಂದಿನ ಸರ್ಕಾರ ಹಂಚಿಕೆ‌ ಮಾಡಿಲ್ಲ. ಈ‌ ಹಿಂದಿನ ಸರ್ಕಾರದ ಆದೇಶವನ್ನು ಮಾರ್ಪಾಡಿಸಲು ಸಾಧ್ಯವಿಲ್ಲ. 2023 ರಿಂದ 2027 ರವರೆಗೆ ನಾಲ್ಕು ವರ್ಷಗಳ ಅವಧಿಯವರೆಗೂ ಬಿಜೆಪಿ ಸರ್ಕಾರದ ಆದೇಶ‌ ಅನ್ವಯವಾಗುತ್ತದೆ. ಯಾವುದೇ ನಿಧಿಯನ್ನು ಮೀಸಲಿಡದ ಕಾರಣ 2027 ರಿಂದಲೇ ಮುಂದಿನ ವೇತನ‌ ಪರಿಷ್ಕರಣೆ ಜಾರಿಯಾಗಲು ಸಾಧ್ಯ ಎಂಬ ನಿಲುವಿಗೆ ಸರ್ಕಾರ ಬಲವಾಗಿ ಅಂಟಿಕೊಂಡಿದೆ.

2020ರಲ್ಲಿ ಏನಾಗಿತ್ತು?
ಕೋವಿಡ್‌ ಲಾಕ್‌ಡೌನ್‌ ಕಾರಣದಿಂದ 2020 ರಲ್ಲಿ ಕೆಲ ತಿಂಗಳು ಬಸ್ಸುಗಳ ಸಂಚಾರವನ್ನು ಬಂದ್‌ ಮಾಡಲಾಗಿತ್ತು. ನಂತರ ಸೇವೆ ಆರಂಭಗೊಂಡಿದ್ದರೂ ಜನ ಕಡಿಮೆ ಪ್ರಮಾಣದಲ್ಲಿ ಸಂಚರಿಸುತ್ತಿದ್ದರು. ಕೋವಿಡ್ ಸಮಯದಲ್ಲಿ ಪೂರ್ಣ/ ಅಪೂರ್ಣ ಪ್ರಮಾಣದಲ್ಲಿ ಬಸ್ಸುಗಳ ಕಾರ್ಯಾಚರಣೆ ಸ್ಥಗಿತಗೊಂಡಿದ್ದರಿಂದ ಸಾರಿಗೆ ಇಲಾಖೆ ಮುಳುಗುವ ಹಂತದಲ್ಲಿತ್ತು.

ಈ ಕಠಿಣ ಪರಿಸ್ಥಿತಿಯಲ್ಲಿ ನಾಲ್ಕು ಸಾರಿಗೆ ಸಂಸ್ಥೆಗಳ‌ ಸಿಬ್ಬಂದಿ ವೇತನ‌ ಹಾಗೂ ಇತರೇ ಭತ್ಯೆಗಳನ್ನು ಸರ್ಕಾರ ಪಾವತಿ ಮಾಡಿತ್ತು. ಆದರೆ ಸಂಬಳವನ್ನು ಪರಿಷ್ಕರಣೆ ಮಾಡುವ ನಿರ್ಧಾರ ಕೈಗೊಂಡಿರಲಿಲ್ಲ. ಕೋವಿಡ್‌ ನಂತರ ಬಸ್ಸುಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆ ಇಳಿದ ಬಳಿಕ 2023 ರಲ್ಲಿ ಬಿಜೆಪಿ ಸರ್ಕಾರ ವೇತನ ಪರಿಷ್ಕರಣೆ ಮಾಡಿತ್ತು.

ನೌಕರರ ವಾದ ಏನು?
ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಇರಲಿಲ್ಲ ಮತ್ತು ಕಡಿಮೆ ಸಂಖ್ಯೆಯಲ್ಲಿ ಮಹಿಳೆಯರು ಪ್ರಯಾಣ ಮಾಡುತ್ತಿದ್ದರು. ಆದರೆ ಈಗ ಬಸ್ಸುಗಳಲ್ಲಿ ಭಾರೀ ಸಂಖ್ಯೆಯಲ್ಲಿ ಮಹಿಳೆಯರು ಪ್ರಯಾಣಿಸುತ್ತಿದ್ದಾರೆ. ಮಹಿಳೆಯರಿಗೆ ಉಚಿತ ಟಿಕೆಟ್‌ ನೀಡಿದ್ದರೂ ನಿರ್ವಾಹಕರು ಟಿಕೆಟ್‌ ಹರಿಯುತ್ತಾರೆ. ಉಚಿತ ಟಿಕೆಟ್‌ ಹಣವನ್ನು ಸರ್ಕಾರ ಸಾರಿಗೆ ಸಂಸ್ಥೆಗಳಿಗೆ ಪಾವತಿ ಮಾಡಬೇಕು.

ಶಕ್ತಿ ಯೋಜನೆಯಡಿ ಉಚಿತ ಬಸ್ ಪ್ರಯಾಣದ ಮಹಿಳಾ ಫಲಾನುಭವಿಗಳ ಸಂಖ್ಯೆ 500 ಕೋಟಿ ದಾಟಿ ಮೈಲಿಗಲ್ಲು ಸ್ಥಾಪಿಸಿದೆ. ಪ್ರಯಾಣಿಕರ ಸಂಖ್ಯೆ ಹೆಚ್ಚಳದಿಂದ ಆದಾಯವೂ ಜಾಸ್ತಿಯಾಗಿದೆ. ಆದಾಯ ಜಾಸ್ತಿಯಾಗಿರುವ ಕಾರಣ ಸರ್ಕಾರ ಸಂಬಳ ಏರಿಕೆ ಮಾಡಲೇಬೇಕು ಎಂದು ಆಗ್ರಹಿಸುತ್ತಿದ್ದಾರೆ.

 

Share This Article