ಕರ್ನಾಟಕದಲ್ಲಿ ಬಿಜೆಪಿ ಅತಿದೊಡ್ಡ ಪಕ್ಷ; ಉತ್ತರದಿಂದ ದಕ್ಷಿಣ ಭಾರತಕ್ಕೆ ವಿಸ್ತರಣೆಯಾಗ್ತಿದೆ – ಮೋದಿ

Public TV
2 Min Read

ನವದೆಹಲಿ: ಉತ್ತರದಿಂದ ದಕ್ಷಿಣ ಭಾರತಕ್ಕೆ ಬಿಜೆಪಿ ವಿಸ್ತರಣೆಯಾಗುತ್ತಿದೆ. ಕರ್ನಾಟಕದಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ನೂತನವಾಗಿ ನಿರ್ಮಿಸಿರುವ ಬಿಜೆಪಿ ಕೇಂದ್ರ ಕಚೇರಿಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ದೇಶದಲ್ಲಿ ಕುಟುಂಬ ನಡೆಸುತ್ತಿರುವ ರಾಜಕೀಯ ಪಕ್ಷಗಳ ನಡುವೆ ಬಿಜೆಪಿ ಈಗ ಪ್ಯಾನ್-ಇಂಡಿಯಾ ಪಕ್ಷವಾಗಿದೆ. ಬಿಜೆಪಿಯು ವಿಶ್ವದ ಅತಿದೊಡ್ಡ, ಅತ್ಯಂತ ಭವಿಷ್ಯದ ಪಕ್ಷವಾಗಿದೆ. ಅದರ ಏಕೈಕ ಗುರಿ ಆಧುನಿಕ ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ಮಾಡುವುದು. ಯುಪಿಎ 2004-14ರ ಆಡಳಿತದಲ್ಲಿ ಪಿಎಂಎಲ್‌ಎ ಅಡಿಯಲ್ಲಿ 5,000 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿತ್ತು. ಬಿಜೆಪಿಯ 9 ವರ್ಷಗಳ ಸರ್ಕಾರದ ಅವಧಿಯಲ್ಲಿ 1.10 ಲಕ್ಷ ಕೋಟಿ ವಶಪಡಿಸಿಕೊಂಡಿದೆ. ಸುಳ್ಳು ಆರೋಪಗಳಿಂದ ಭ್ರಷ್ಟಾಚಾರದ ಮೇಲಿನ ನಮ್ಮ ಕಡಿವಾಣ ನಿಲ್ಲುವುದಿಲ್ಲ. ನಮ್ಮ ಕೆಲಸದಿಂದ ಕೆಲವರು ಕೋಪಗೊಂಡಿದ್ದಾರೆ ಎಂದು ವಿಪಕ್ಷಗಳಿಗೆ ಮೋದಿ ಟಾಂಗ್‌ ಕೊಟ್ಟರು.

ಬಿಜೆಪಿ ಇಂದು ಮೊದಲ ಸ್ಥಾನದಲ್ಲಿದೆ. ತೆಲಂಗಾಣದಲ್ಲಿ ಬಿಜೆಪಿಯೊಂದೇ ಭರವಸೆಯಾಗಿದೆ. ಆಂದ್ರಪ್ರದೇಶದದಲ್ಲಿ ಬಿಜೆಪಿ ಮೇಲೆ ವಿಶ್ವಾಸ ಹೆಚ್ಚುತಿದೆ. ತಮಿಳುನಾಡು, ಕೇರಳದಲ್ಲಿ ಪ್ರತಿ ಬೂತ್‌ನಲ್ಲಿ ಬಿಜೆಪಿ ಬಲಿಷ್ಠವಾಗುತ್ತಿದೆ. ಏಕ್ ಭಾರತ್ ಶ್ರೇಷ್ಠ ಭಾರತ್ ಪರಿಕಲ್ಪನೆ ನಮ್ಮನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿದೆ ಎಂದರು.

ನಮ್ಮಲ್ಲಿ ಸಾಂವಿಧಾನಿಕ ಸಂಸ್ಥೆಗಳ ಭದ್ರ ಬುನಾದಿ ಇದೆ. ಅದಕ್ಕಾಗಿಯೇ ಭಾರತವನ್ನು ತಡೆಯಲು, ಸಾಂವಿಧಾನಿಕ ಸಂಸ್ಥೆಗಳ ಮೇಲೆ ದಾಳಿ ಮಾಡಲಾಗುತ್ತಿದೆ. ಏಜೆನ್ಸಿಗಳು ಕ್ರಮ ಕೈಗೊಂಡಾಗ ದಾಳಿ ಮಾಡಲಾಗುತ್ತಿದೆ. ನ್ಯಾಯಾಲಯಗಳಲ್ಲಿ ಪ್ರಶ್ನೆಗಳನ್ನು ಎತ್ತಲಾಗುತ್ತಿದೆ. ಕೆಲವು ಪಕ್ಷಗಳು ‘ಭ್ರಷ್ಟಾಚಾರಿ ಬಚಾವೋ ಅಭಿಯಾನ’ ಆರಂಭಿಸಿವೆ ಎಂದು ಟೀಕಿಸಿದರು.

ಏಳು ದಶಕಗಳಲ್ಲಿ ಇದೇ ಮೊದಲ ಬಾರಿಗೆ ಭ್ರಷ್ಟರ ವಿರುದ್ಧ ಇಂತಹ ಕ್ರಮ ಕೈಗೊಳ್ಳಲಾಗುತ್ತಿದೆ. ನಾವು ಇಷ್ಟು ಮಾಡಿದರೆ, ಕೆಲವರು ಅಸಮಾಧಾನಗೊಳ್ಳುತ್ತಾರೆ ಮತ್ತು ಕೋಪಗೊಳ್ಳುತ್ತಾರೆ. ಆದರೆ ಅವರ ಸುಳ್ಳು ಆರೋಪಗಳಿಂದ ಭ್ರಷ್ಟಾಚಾರದ ವಿರುದ್ಧದ ಕ್ರಮ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಎಂದು ವಿಪಕ್ಷಗಳ ವಿರುದ್ಧ ಹರಿಹಾಯ್ದರು.

ಬಿಜೆಪಿ ಟಿವಿ ಅಥವಾ ಪತ್ರಿಕೆಗಳಿಂದ ಬಂದ ಪಕ್ಷವಲ್ಲ. ಇದು ಟ್ವಿಟ್ಟರ್ ಹ್ಯಾಂಡಲ್‌ಗಳು ಮತ್ತು ಯುಟ್ಯೂಬ್ ಚಾನೆಲ್‌ಗಳಿಂದಲೂ ಬಂದಿಲ್ಲ. ಬಿಜೆಪಿ ತನ್ನ ಕಾರ್ಯಕರ್ತರ ಶ್ರಮದ ಆಧಾರದ ಮೇಲೆ ಪ್ರಗತಿ ಸಾಧಿಸಿದೆ ಎಂದು ಹೇಳಿದರು.

2 ಲೋಕಸಭಾ ಸ್ಥಾನಗಳೊಂದಿಗೆ ಆರಂಭವಾದ ಪಯಣ ಈಗ 303 ಸ್ಥಾನಗಳಲ್ಲಿದೆ. ಪೂರ್ವದಿಂದ ಪಶ್ಚಿಮಕ್ಕೆ ಮತ್ತು ಉತ್ತರದಿಂದ ದಕ್ಷಿಣಕ್ಕೆ ಬಿಜೆಪಿ ಏಕೈಕ ಪ್ಯಾನ್ ಇಂಡಿಯಾ ಪಕ್ಷವಾಗಿದೆ. ಬಿಜೆಪಿ ಯುವಕರಿಗೆ ಪ್ರಗತಿಗೆ ಅವಕಾಶ ನೀಡಿದೆ. 1984ರಲ್ಲಿ ಆ ಕರಾಳ ಹಂತವನ್ನು ದೇಶ ಎಂದಿಗೂ ಮರೆಯಲು ಸಾಧ್ಯವಿಲ್ಲ. ಆ ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ಐತಿಹಾಸಿಕ ಜನಾದೇಶ ಸಿಕ್ಕಿತು. ಅದು ಭಾವನಾತ್ಮಕವಾಗಿ ತುಂಬಿದ ವಾತಾವರಣವಾಗಿತ್ತು. ಆ ಅಲೆಯಲ್ಲಿ ನಾವು ಸಂಪೂರ್ಣವಾಗಿ ನಾಶವಾಗಿದ್ದೆವು. ಆದರೆ ನಾವು ಖಿನ್ನತೆಗೆ ಒಳಗಾಗಲಿಲ್ಲ, ಇತರರನ್ನು ದೂಷಿಸಲಿಲ್ಲ ಎಂದು ಪರೋಕ್ಷವಾಗಿ ಕಾಂಗ್ರೆಸ್ ಟಾಂಗ್‌ ಕೊಟ್ಟರು.

Share This Article