ವಿಶ್ವಾಸಮತ ಯಾಚನೆಗೂ ಮುನ್ನವೇ ವಿಜಯೋತ್ಸವಕ್ಕೆ ಬಿಜೆಪಿ, ಬಿಎಸ್‍ವೈ ಕರೆ!

Public TV
2 Min Read

ಬೆಂಗಳೂರು: ಬಿಜೆಪಿಗೆ ಸಂಖ್ಯಾಬಲ 104 ಇದ್ದರೂ ಬಿಜೆಪಿ ನಾಯಕರು ಮಾತ್ರ ನಾಳೆ ಗೆಲುವು ನಮ್ಮದೇ ಎಂಬ ಆತ್ಮವಿಶ್ವಾಸದಲ್ಲಿದ್ದಾರೆ. ಅಲ್ಲದೆ ನಾಳೆ ವಿಜಯೋತ್ಸವಕ್ಕೆ ಸಿದ್ಧರಾಗಿ ಎಂದು ಕೂಡಾ ಹೇಳಿಕೊಂಡಿದ್ದಾರೆ. ಬೆಳಗ್ಗೆ ಯಡಿಯೂರಪ್ಪ ಸೇರಿದಂತೆ ಕೇಂದ್ರ ನಾಯಕರು ಬಹುಮತ ಸಾಬೀತಿಗೆ ನಾವು ಸಿದ್ಧ. ನೂರಕ್ಕೆ ನೂರರಷ್ಟು ನಾವು ಬಹುಮತ ಸಾಬೀತು ಪಡಿಸುತ್ತೇವೆ ಎಂದು ಹೇಳಿದ್ದಾರೆ. ಇನ್ನೊಂದೆಡೆ ರಾತ್ರಿ 7.45ಕ್ಕೆ ಶಾಂಗ್ರಿಲಾ ಹೋಟೆಲ್ ಗೆ ಆಗಮಿಸಿದ ಬಿ.ಎಸ್.ಯಡಿಯೂರಪ್ಪ, ನಾಳೆ ಬಹುಮತ ಸಾಬೀತುಪಡಿಸುತ್ತೇನೆ. ಇದರ ಬಗ್ಗೆ ಯಾವುದೇ ಅನುಮಾನ ಬೇಡ. ನಾಳೆ ವಿಜಯೋತ್ಸವಕ್ಕೆ ಸಿದ್ಧರಾಗಿ. ಬಹುಮತ ಸಾಬೀತಾದ ಬಳಿಕ ಅಲ್ಲೇ ರೈತರ ಸಾಲ ಮನ್ನಾ ಮಾಡುತ್ತೇನೆ ಎಂದು ಹೇಳಿದ್ದಾರೆ.

ಸಂಜೆ 5.30ಕ್ಕೆ ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರು ಟ್ವೀಟ್ ಮಾಡಿ, ನಾಳೆ ಸಂಜೆ 4 ಗಂಟೆಗೆ ವಿಜಯೋತ್ಸವಕ್ಕೆ ಸಿದ್ಧರಾಗಿ ಎಂದು ಕಮಲದ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ. ನಾಳೆ ವಿಧಾನಸೌಧದ ಒಳಗೆ ಬಹುಮತ ಸಾಬೀತು ಪಡಿಸುತ್ತಿದ್ದಂತೆ ಕಾರ್ಕಳ ಕ್ಷೇತ್ರದಾದ್ಯಂತ ಸಂಭ್ರಮಾಚರಣೆ ಮಾಡಿ ಎಂದೂ ಹೇಳಿದ್ದಾರೆ. ಕಾರ್ಯಕರ್ತರಿಗೆ ಫೋನ್ ಕರೆ ಕೂಡಾ ಮಾಡಿದ ಶಾಸಕ ಸುನಿಲ್, ಕ್ಷೇತ್ರದ ಜನತೆ ಸಿದ್ಧರಾಗಿ ಅಂತ ಹೇಳಿದ್ದಾರೆ. ಕಾರ್ಕಳದ ಎಲ್ಲಾ ಜಂಕ್ಷನ್ ಗಳಲ್ಲಿ ಸಿಹಿ ಹಂಚಿ, ಪಟಾಕಿ ಸಿಡಿಸುವಂತೆ ಸೂಚನೆ ನೀಡಿದ್ದಾರಂತೆ. ನಾಳೆ ಬಿಜೆಪಿ ಬೆಂಗಳೂರಿನ ವಿಧಾನಸೌಧದಲ್ಲಿ ಬಹುಮತ ಸಾಬೀತುಪಡಿಸುವ ವಿಶ್ವಾಸವನ್ನು ಟ್ವೀಟ್ ಮೂಲಕ ಸುನಿಲ್ ಕುಮಾರ್ ವ್ಯಕ್ತಪಡಿಸಿದ್ದಾರೆ. ಶಾಸಕರ ಟ್ವೀಟನ್ನು ಹಲವಾರು ಮಂದಿ ರಿಟ್ವೀಟ್ ಮಾಡಿದ್ದಾರೆ. ತಾವು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿ ಕ್ಷೇತ್ರಕ್ಕೆ ಬರಬೇಕು ಎಂದಿದ್ದಾರೆ.

ಇನ್ನೊಂದೆಡೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು ಟ್ವೀಟ್ ಮಾಡಿ, ಮಾಧ್ಯಮಗಳೇ ನಾಳೆಯಿಂದ ಯಾರು ಮುಖ್ಯಮಂತ್ರಿ ಎಂದು ನೀವು ಎಷ್ಟು ಸಾರಿ ಕೇಳಿದರೂ ಕಪ್ಪೂ ನಮ್ದೇ, ಸರ್ಕಾರವೂ ನಮ್ದೇ, ಮುಖ್ಯಮಂತ್ರಿಯೂ ನಮ್ ಯಡಿಯೂರಪ್ಪನವರೇ ಎಂದು ಹೇಳಿದ್ದಾರೆ.

ಆರ್ ಎಸ್‍ಎಸ್ ಮುಖಂಡ ಬಿ.ಎಲ್.ಸಂತೋಷ್ ಅವರು, ಓಪನ್ ಆಗಿರಲಿ, ಸೀಕ್ರೆಟ್ ಆಗಿರಲಿ, ಕರ್ನಾಟಕ ವಿಧಾನಸಭೆಯಲ್ಲಿ ಬಿಜೆಪಿ ಬಹುಮತ ಸಾಬೀತುಪಡಿಸಲಿದೆ ಎಂದು ಟ್ವೀಟ್ ಮಾಡಿದ್ದಾರೆ.

ಚಿಕ್ಕಮಗಳೂರು ಶಾಸಕ ಹಾಗೂ ಬಿಜೆಪಿ ಮುಖಂಡ ಸಿ.ಟಿ.ರವಿ, ಕಾಂಗ್ರೆಸ್ ಹಾಗೂ ಬಿಜೆಪಿಗೆ ಅವರೇ ಗೆಲ್ಲುತ್ತಾರೆ ಎಂದು ವಿಶ್ವಾಸವಿರುವುದೇ ಆದರೆ, ಕರ್ನಾಟಕ ರಾಜ್ಯಪಾಲರ ಎಲ್ಲಾ ಕಾನೂನಾತ್ಮಕ ನಿರ್ಧಾರಗಳನ್ನು ವಿರೋಧಿಸುತ್ತಿರೋದ್ಯಾಕೆ.? ಬಿಜೆಪಿ ನಾಳೆ ಗೆಲ್ಲುತ್ತೆ ಎಂಬ ಕಾರಣಕ್ಕಲ್ಲವೇ ವಿರೋಧ ಮಾಡ್ತಿರೋದು ಎಂದು ಟ್ವೀಟ್ ಮಾಡಿದ್ದಾರೆ.

ಕೇಂದ್ರ ಸಚಿವ ಹಾಗೂ ರಾಜ್ಯ ಬಿಜೆಪಿ ಉಸ್ತುವಾರಿ ಪ್ರಕಾಶ್ ಜಾವ್ಡೇಕರ್, ನಾಳೆ ಕರ್ನಾಟಕದಲ್ಲಿ ಬಿಜೆಪಿ ವಿಶ್ವಾಸಮತ ಗೆಲ್ಲಲಿದೆ. ಸದನದಲ್ಲಿ ನಾವು ನಮ್ಮ ಬಹುಮತ ಸಾಬೀತುಪಡಿಸುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ. ಅಲ್ಲದೆ ಹಂಗಾಮಿ ಸ್ಪೀಕರ್ ಆಗಿ ಬೋಪಯ್ಯ ನೇಮಕದ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಿರುವ ಕಾಂಗ್ರೆಸ್ ನಡೆಯನ್ನು ಪ್ರಶ್ನಿಸಿದ್ದಾರೆ. 2008ರಲ್ಲಿ ರಾಜ್ಯಪಾಲ ರಾಮೇಶ್ವರ್ ಠಾಕೂರ್ ಅವರು ಬೋಪಯ್ಯ ಅವರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಕ ಮಾಡಿದ್ದರು. ಇದಕ್ಕೆ ಕಾಂಗ್ರೆಸ್ ಯಾವುದೇ ವಿರೋಧ ವ್ಯಕ್ತಪಡಿಸಿರಲಿಲ್ಲ. ಜಾರ್ಖಂಡ್ ನಲ್ಲಿ ಕಿರಿಯ ಶಾಸಕನನ್ನು ಆಯ್ಕೆ ಮಾಡಿದಾಗ ಕಾಂಗ್ರೆಸ್ ಮುಖಂಡ ಅಭಿಷೇಕ್ ಮನು ಸಿಂಘ್ವಿ ಕೋರ್ಟ್‍ನಲ್ಲಿ ಈ ಬಗ್ಗೆ ಸಮರ್ಥಿಸಿಕೊಂಡಿದ್ದರು. ಆದರೆ ಈಗ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸುತ್ತಿರುವುದೇಕೆ ಎಂದು ಪ್ರಶ್ನಿಸಿದ್ದಾರೆ.

ಒಟ್ಟಿನಲ್ಲಿ ನಾಳೆ ಸಂಜೆಯವರೆಗೆ ಏನೆಲ್ಲ ಬೆಳವಣಿಗೆಗಳು ಆಗಬಹುದು ಎಂಬ ಕುತೂಹಲ ಮತ್ತಷ್ಟು ಜಾಸ್ತಿಯಾಗಿದೆ.

 

 

Share This Article
Leave a Comment

Leave a Reply

Your email address will not be published. Required fields are marked *