– 205 ಅಡಿ ಅಗಲ, 630 ಅಡಿ ಉದ್ದದ ತ್ರಿವರ್ಣ ಧ್ವಜ ಪ್ರದರ್ಶನ
– ಗಮನ ಸೆಳೆದ ಸೈನಿಕ ವೇಷಧಾರಿಯಾಗಿ ಕೈಯಲ್ಲಿ ಬಂದೂಕು ಹಿಡಿದ ಮೋದಿ ಕಟೌಟ್
ಬೆಂಗಳೂರು: ಆಪರೇಷನ್ ಸಿಂಧೂರ (Operation Sindoor) ಸಕ್ಸಸ್ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ರಾಜ್ಯ ಬಿಜೆಪಿಯಿಂದ (BJP) ಬೃಹತ್ ತಿರಂಗಾ ಯಾತ್ರೆ (Tiranga Yatra) ನಡೆಯಿತು.
ಮಲ್ಲೇಶ್ವರದ ಗುಂಡೂರಾವ್ ಆಟದ ಮೈದಾನದಿಂದ 18ನೇ ಕ್ರಾಸ್ ಆಟದ ಮೈದಾನದ ವರೆಗೆ 1.5 ಕಿ.ಮೀ ಬಿಜೆಪಿ ತಿರಂಗಾ ಯಾತ್ರೆ ನಡೆಸಲಾಯಿತು. ಭಾರತೀಯ ಸೈನಿಕರ ಪರವಾಗಿ ಪಕ್ಷಾತೀತವಾಗಿ ನಡೆಸಿದ ಈ ತಿರಂಗಾ ಯಾತ್ರೆಯಲ್ಲಿ ಸಾವಿರಾರು ಜನ ರಾಷ್ಟ್ರಧ್ವಜ ಹಿಡಿದು ಭಾಗವಹಿಸುವ ಮೂಲಕ ದೇಶಾಭಿಮಾನ ಮೆರೆದರು. ಇದನ್ನೂ ಓದಿ: ಪಾಕ್ ಧ್ವಜ, ಸರಕುಗಳ ಮಾರಾಟ ನಿಲ್ಲಿಸುವಂತೆ ಇ-ಕಾಮರ್ಸ್ ಕಂಪನಿಗಳಿಗೆ ಕೇಂದ್ರ ವಾರ್ನಿಂಗ್
ತಿರಂಗಾ ಯಾತ್ರೆ ವೇಳೆ 9 ಅಡಿ ಅಗಲ, 1,500 ಅಡಿ ಉದ್ದದ ರಾಷ್ಟ್ರಧ್ವಜದ ಮೆರವಣಿಗೆ ನಡೆಸಲಾಯಿತು. ಮಲ್ಲೇಶ್ವರದ 18 ನೇ ಕ್ರಾಸ್ ಆಟದ ಮೈದಾನ ಮುಟ್ಟಿದ ಬಳಿಕ 205 ಅಡಿ ಅಗಲ, 630 ಅಡಿ ಉದ್ದದ ಮತ್ತೊಂದು ಬೃಹತ್ ರಾಷ್ಟ್ರಧ್ವಜದ ಪ್ರದರ್ಶನ ನಡೆಯಿತು. ಈ ಧ್ವಜದ ಸುತ್ತಲೂ ಮೆರವಣಿಗೆ ನಡೆಸಿದ ಅತೀ ಉದ್ದದ ರಾಷ್ಟ್ರಧ್ವಜ ಹಿಡಿದು ನಿಂತ ವಿದ್ಯಾರ್ಥಿಗಳ ಪರೇಡ್ ಬಹಳ ಆಕರ್ಷಣೀಯವಾಗಿತ್ತು.
ಪ್ರಚಾರ ವಾಹನಕ್ಕೆ ಅಳವಡಿಸಿದ್ದ ಸೈನಿಕ ವೇಷಧಾರಿಯಾಗಿ ಕೈಯಲ್ಲಿ ಬಂದೂಕು ಹಿಡಿದು ನಿಂತಿರುವ ಮೋದಿ ಕಟೌಟ್ ಎಲ್ಲರ ಗಮನ ಸೆಳೆಯಿತು. ಬಿಜೆಪಿ ನಾಯಕರಾದ ಬಿಜೆಪಿ ರಾಜ್ಯ ಉಸ್ತುವಾರಿ ರಾಧಾ ಮೋಹನ ದಾಸ್ ಅಗರವಾಲ್, ಅಶೋಕ್, ಅಶ್ವಥ್ ನಾರಾಯಣ್, ಸಿಟಿ ರವಿ, ಮುನಿರತ್ನ, ಬೈರತಿ ಬಸವರಾಜು, ಗೋಪಾಲಯ್ಯ, ಮುನಿಸ್ವಾಮಿ ಮತ್ತಿತರರು ಹೆಜ್ಜೆ ಹಾಕಿದರು. ಮಾಜಿ ಸೈನಿಕರು, ಪ್ರಮುಖ ಗಣ್ಯರು, ವಿದ್ಯಾರ್ಥಿಗಳು, ವಿವಿಧ ಸಂಘಟನೆಗಳ ಸದಸ್ಯರು, ನಾಗರಿಕ ಸಮಿತಿ ಸದಸ್ಯರು, ಸಾರ್ವಜನಿಕರು ಪಾಲ್ಗೊಂಡಿದ್ದರು. ಇದನ್ನೂ ಓದಿ: ಭಾರತ-ಪಾಕ್ ಉದ್ವಿಗ್ನ; ಹಂಪಿ ಮೇಲೆ ವಿಶೇಷ ನಿಗಾವಹಿಸಿದ ಕೇಂದ್ರ, ರಾಜ್ಯ ಸರ್ಕಾರ