ಬಿಎಸ್‍ವೈ V/S ಬಿಎಲ್‍ಎಸ್- ವರದಿ ರೂಪಿಸಲು ನೂತನ ಕಾರ್ಯದರ್ಶಿಯನ್ನು ನೇಮಿಸಿದ ಹೈಕಮಾಂಡ್

Public TV
2 Min Read

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ಬಿಎಲ್ ಸಂತೋಷ್ ನಡುವಿನ ಮುಸುಕಿನ ಗುದ್ದಾಟ ವಿಚಾರಕ್ಕೆ ಸಂಬಂಧಿಸಿದಂತೆ ನಿಷ್ಪಕ್ಷಪಾತ ವರದಿ ಕಳುಹಿಸಿಕೊಡುವಂತೆ ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಶಿವಪ್ರಕಾಶ್ ಯಾದವ್ ಅವರನ್ನು ಬಿಜೆಪಿ ಹೈಕಮಾಂಡ್ ನೇಮಿಸಿದೆ.

ಬಿಜೆಪಿ ಅಧ್ಯಕ್ಷರ ಗಮನಕ್ಕೆ ತರದೆ ರಾಜ್ಯ ಬಿಜೆಪಿ ಸ್ಥಿತಿ ವರದಿ ತರಿಸಿಕೊಳ್ಳಲು ಬಿಜೆಪಿ ಹೈಕಮಾಂಡ್ ಮುಂದಾಗಿದೆ. ವಾಸ್ತವ ಪರಿಸ್ಥಿತಿ ಬಗ್ಗೆ ವರದಿ ನೀಡಲು ಹೈಕಮಾಂಡ್ ಶಿವಪ್ರಕಾಶ್ ಅವರನ್ನು ನೇಮಕ ಮಾಡಿದೆ. ಹೀಗಾಗಿ ಇಂದಿನಿಂದ ಶಿವಪ್ರಕಾಶ್ ಯಾದವ್ ಮೂರು ದಿನಗಳ ರಾಜ್ಯ ಪ್ರವಾಸ ನಡೆಸಿ ವರದಿ ತಯಾರಿಸಲಿದ್ದಾರೆ ಎಂಬುದಾಗಿ ಬಿಜೆಪಿ ಮೂಲಗಳಿಂದ ತಿಳಿದುಬಂದಿದೆ.

ಸಂತೋಷ್ 2018 ರ ವಿಧಾನಸಭೆ ಚುನಾವಣೆ ಹಿನ್ನೆಲೆ ವಾಸ್ತವ ಪರಿಸ್ಥಿತಿ ಬಗ್ಗೆ ಈಗಾಗಲೇ ವರದಿ ನೀಡಿದ್ದಾರೆ. ಆದರೆ ಸಂತೋಷ್ ರ ಕಾರ್ಯವೈಖರಿ ಬಗ್ಗೆ ಕೆಲವರು ಅಸಮಧಾನ ವ್ಯಕ್ತಪಡಿಸಿದ್ದರಿಂದ ಎಲ್ಲರೂ ಒಪ್ಪುವ ಸಂಘಟನಾ ಕಾರ್ಯದರ್ಶಿಯಿಂದ ವರದಿ ತರಿಸಿಕೊಳ್ಳಲು ಹೈಕಮಾಂಡ್ ಮುಂದಾಗಿದೆ. ಒಟ್ಟಿನಲ್ಲಿ ಬಿಜೆಪಿ ಹೈಕಮಾಂಡ್‍ಗೆ ಈಗಾಗಲೇ ಸಂತೋಷ್ ವರದಿ ನೀಡಿದ್ರು ಮತ್ತೊಂದು ವರದಿ ತರಿಸಿಕೊಳ್ಳುವ ಹೈಕಮಾಂಡ್ ಪ್ರಯತ್ನ ನಡೆಸುತ್ತಿದೆ.

ಶಿವಪ್ರಕಾಶ್ ಅವರ ನೇತೃತ್ವದಲ್ಲಿ ಅಕ್ಟೋಬರ್ 22ರಂದು ಮಂಗಳೂರು, 23 ರಂದು ಮೈಸೂರು ವಿಭಾಗ, ಹಾಗೂ 24 ರಂದು ಬೆಂಗಳೂರು ವಿಭಾಗದ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಬಿಜೆಪಿಯ ಎಲ್ಲ ಮೋರ್ಚಾಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಭಾಗಿಯಾಗಲಿದ್ದು, ಈ ಸಭೆಯಲ್ಲಿ ಸಂಪೂರ್ಣವಾಗಿ ಚುನಾವಣೆ ಸಿದ್ಧತೆಯ ಕುರಿತು ಮಾಹಿತಿ ಸಂಗ್ರಹಿಸಲಿದ್ದಾರೆ.

ಯಾರು ಈ ಬಿಎಲ್ ಸಂತೋಷ್?: ಬಿಜೆಪಿ ಹಾಗೂ ಸಂಘ ಪರಿವಾರದ ಮಂದಿ ಇವರನ್ನು ಸಂತೋಷ್ ಜಿ ಎಂದೇ ಗೌರವಿಸುತ್ತಾರೆ. ಸದ್ಯ ಇವರು ಬಿಜೆಪಿಯ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ. ಇದರ ಜತೆಗೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಕಮಲ ಪಕ್ಷದ ಸಂಘಟನೆಯ ಹೊಣೆ ಇವರ ಮೇಲಿದೆ. ಆರ್ ಎಸ್‍ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಜೊತೆ ಇವರಿಗೆ ನಿಕಟ ಸಂಬಂಧವಿದೆ.

ಸಂತೋಷ್ ಮೂಲತಃ ಉಡುಪಿ ಜಿಲ್ಲೆಯ ಹಿರಿಯಡ್ಕ ನಿವಾಸಿ. ಸಾಧಾರಣ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಸಂತೋಷ್ ಎಂಜಿನಿಯರಿಂಗ್ ಪದವೀಧರರಾಗಿದ್ದಾರೆ. ಕೇಶವ ಬಲಿರಾಂ ಹೆಡಗೇವಾರ್ ಅವರ ಆದರ್ಶ, ಆಶಯಗಳನ್ನು ಮೈಗೂಡಿಸಿಕೊಂಡು ಬಂದಿರುವ ಇವರು ಸಂಘದ ಅಪ್ಪಟ ಕಾರ್ಯಕರ್ತರ ಜೀವನ ಶೈಲಿ ರೂಢಿಸಿಕೊಂಡಿದ್ದಾರೆ.

ದಾವಣಗೆರೆಯ ಬಿಡಿಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಇ ಮುಗಿಸುತ್ತಲೇ ಪೂರ್ಣಾವಧಿ ಪ್ರಚಾರಕರಾಗಿ ತಮ್ಮ ಜೀವನ ಆರಂಭಿಸಿದರು. ಬಳಿಕ ಮೈಸೂರು ನಗರದ ಪ್ರಚಾರಕರಾಗಿ ಕೆಲಸ ಮಾಡಿ, ಸಂಘವನ್ನು ಕಟ್ಟಿ ಬೆಳೆಸಿದ್ದರು. ಸಂಘ ಪರಿವಾರದ ಗರಡಿಮನೆಯಂತಿರುವ ಶಿವಮೊಗ್ಗ ಜಿಲ್ಲಾ ಪ್ರಚಾರಕರಾಗಿಯೂ ಕೆಲಸ ಮಾಡಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *