ಬಿಜೆಪಿ ಅವಧಿಯ ವಿವಿಗಳಿಗೆ ಕೊಕ್; ಸರ್ಕಾರದ ನಡೆ ಅವಿವೇಕದ ಪರಮಾವಧಿ: ವಿಜಯೇಂದ್ರ

Public TV
2 Min Read

ಬೆಂಗಳೂರು: ಕಾಂಗ್ರೆಸ್ ಸರ್ಕಾರ (Congress Government) ಜ್ಞಾನ ಗಂಗೆಯ ಆಲಯಗಳನ್ನು ಬರಿದು ಮಾಡಿ ಅಕ್ಷರ ದೀವಿಗೆಯನ್ನು ನಂದಿಸಲು ಹೊರಟಿದೆ. ಇದು ಅವಿವೇಕದ ಪರಮಾವಧಿ ಎಂದು ಬಿಜೆಪಿ ( BJP) ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (B Y Vijayendra) ಟೀಕಿಸಿದರು.

9 ವಿಶ್ವವಿದ್ಯಾನಿಲಯಗಳಿಗೆ(Universities) ಬೀಗ ಜಡಿಯಲು ಹೊರಟಿರುವ ಸರ್ಕಾರದ ನಡೆಯನ್ನು ಖಂಡಿಸಿ ಎಕ್ಸ್ನಲ್ಲಿ ವಿಜಯೇಂದ್ರ ಪೋಸ್ಟ್ ಹಂಚಿಕೊಂಡಿದ್ದಾರೆ. ಬಡ ಹಾಗೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಪಾಲಿನ ಶಿಕ್ಷಣ ಭಾಗ್ಯ ಕಸಿಯಲು ಹೊರಟಿರುವ ಕಾಂಗ್ರೆಸ್ ಸರ್ಕಾರದ ನಿರ್ಧಾರ ಅವಿವೇಕತನದ ಪರಮಾವಧಿಯಾಗಿದೆ. ಶಿಕ್ಷಣದ ದೂರದೃಷ್ಟಿ ಹಾಗೂ ಉನ್ನತ ಶಿಕ್ಷಣದ ಹಕ್ಕು ಪ್ರತಿಯೊಬ್ಬ ವಿದ್ಯಾರ್ಥಿಗೆ ಸರಳವಾಗಿ, ಸುಲಭವಾಗಿ ದೊರೆಯಬೇಕು ಎಂಬ ಮಹತ್ವದ ಉದ್ದೇಶದಿಂದ 9 ವಿಶ್ವವಿದ್ಯಾನಿಲಯಗಳನ್ನು ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ತಂದಿತ್ತು. ಇವುಗಳ ಅಭಿವೃದ್ಧಿಗಾಗಿ ಮೀಸಲಿರಿಸಬೇಕಾಗಿದ್ದ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ವಿನಿಯೋಗಿಸಿಕೊಳ್ಳುವ ಕಾರಣಕ್ಕಾಗಿ ವಿವಿಗಳನ್ನು ಮುಚ್ಚಲು ಹೊರಟಿರುವ ಕಾಂಗ್ರೆಸ್ ಸರ್ಕಾರದ ನಿರ್ಧಾರ ಶಿಕ್ಷಣ ಹಾಗೂ ಅಭಿವೃದ್ಧಿ ವಿರೋಧಿಯ ಧೋರಣೆಯನ್ನು ಸಾಕ್ಷಿಕರಿಸುತ್ತಿದೆ ಎಂದು ವಿಜಯೇಂದ್ರ ಆರೋಪಿಸಿದರು. ಇದನ್ನೂ ಓದಿ : ದರ ಏರಿಕೆ ಎಫೆಕ್ಟ್ – ವೀಕೆಂಡ್‌ನಲ್ಲಿಯೂ ನಮ್ಮ ಮೆಟ್ರೋ ಖಾಲಿ ಖಾಲಿ

ಇತಿಹಾಸದಿಂದಲೂ ದಕ್ಷಿಣ ಭಾರತದಲ್ಲಿ `ಕರ್ನಾಟಕ ರಾಜ್ಯ ಶಿಕ್ಷಣದ ಕಾಶಿ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅದಕ್ಕೆ ಹಿನ್ನಡೆಯುಂಟು ಮಾಡುವ ನಿರ್ಧಾರಗಳನ್ನು ಈ ಹಿಂದಿನ ಯಾವ ಸರ್ಕಾರಗಳೂ ಕೈಗೊಂಡಿರಲಿಲ್ಲ. ಆದರೆ ಈ ಕಾಂಗ್ರೆಸ್ ಸರ್ಕಾರ ಇಂಥಾ ನಿರ್ಧಾರ ಕೈಗೊಂಡಿರುವುದು ನಿಜಕ್ಕೂ ಖಂಡನೀಯ ಕ್ರಮವಾಗಿದೆ ಎಂದು ಗುಡುಗಿದರು. ಇದನ್ನೂ ಓದಿ : ಎಲಾನ್‌ ಮಸ್ಕ್‌ ಅವರ 13ನೇ ಮಗುವಿಗೆ ಜನ್ಮ ನೀಡಿದ್ದೇನೆ: ಆಶ್ಲೇ ಹೇಳಿಕೆಗೆ ಮೌನ ಮುರಿದ ಮಸ್ಕ್‌

ಇನ್ನು ಬಿಜೆಪಿ ಸರ್ಕಾರದ ಅವಧಿಯಲ್ಲಿ ಪದವಿ ಹಾಗೂ ಸ್ನಾತಕೋತ್ತರ ಶಿಕ್ಷಣ ಪಡೆಯಲು ಸಂಕಷ್ಟ ಎದುರಿಸುತ್ತಿದ್ದ ವಿವಿಧ ಪ್ರದೇಶಗಳ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ತೆರೆಯಲಾಗಿದ್ದ ಹಾಸನ, ಚಾಮರಾಜನಗರ, ಹಾವೇರಿ, ಕೊಡಗು, ಕೊಪ್ಪಳ, ಬಾಗಲಕೋಟೆ, ಮಂಡ್ಯ, ಮಹಾರಾಣಿ ಕ್ಲಸ್ಟರ್, ನೃಪತುಂಗ ಸೇರಿದಂತೆ ಇತರ ಹಿಂದುಳಿದ ಪ್ರದೇಶಗಳ ವಿಶ್ವವಿದ್ಯಾನಿಲಯಗಳನ್ನು ಮುಚ್ಚಿಸಲು ಹೊರಟಿರುವ ಕಾಂಗ್ರೆಸ್ ಸರ್ಕಾರದ ಕ್ರಮದ ಹಿಂದಿನ ಯೋಚನೆ ಶಿಕ್ಷಣ ವಿರೋಧಿ ನೀತಿಯ ವಿಕೃತ ನಡೆಯಾಗಿದೆ. ಈ ಕೂಡಲೇ ಸರ್ಕಾರ ತನ್ನ ಈ ನಿರ್ಧಾರವನ್ನು ಕೈ ಬಿಟ್ಟು ಈ 9 ವಿಶ್ವವಿದ್ಯಾನಿಲಯಗಳ ಅಸ್ತಿತ್ವವನ್ನು ಉಳಿಸಿ ಅಭಿವೃದ್ಧಿಗೆ ಸೂಕ್ತ ಅನುದಾನ ಬಿಡುಗಡೆ ಮಾಡಲಿ ಎಂದು ಒತ್ತಾಯಿಸಿದರು.

Share This Article