ಬೆಂಗಳೂರು: ರಾಜ್ಯ ಸರ್ಕಾರ ಕಳಿಸಿದ್ದ ದ್ವೇಷ ಭಾಷಣ ಮಸೂದೆಗೆ ರಾಜ್ಯಪಾಲರು ಇನ್ನೂ ಸಹಿ ಹಾಕದೇ ತಡೆ ಹಿಡಿದಿದ್ದಾರೆ. ಈ ಬೆನ್ನಲ್ಲೇ ರಾಜ್ಯ ಬಿಜೆಪಿ (BJP) ನಾಯಕರು ಮಸೂದೆಗೆ ಸಹಿ ಹಾಕದೇ ತಿರಸ್ಕರಿಸುವಂತೆ ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ.
ಬಿಜೆಪಿ ನಾಯಕರ ನಿಯೋಗ ಲೋಕಭವನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ಅವರನ್ನು ಭೇಟಿಯಾಗಿ ಯಾವುದೇ ಕಾರಣಕ್ಕೂ ಜನತೆಯ ವಾಕ್ ಸ್ವಾತಂತ್ರ್ಯ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ-2025ಕ್ಕೆ ಸಹಿ ಹಾಕದೆ ತಡೆಹಿಡಿಯಬೇಕು. ಇಲ್ಲವೇ ರಾಷ್ಟ್ರಪತಿಗಳ ಅಂಗಳಕ್ಕೆ ಮಸೂದೆಯನ್ನು ಕಳಿಸಬೇಕು ಎಂದು ಎಂದು ಮನವಿ ಮಾಡಿತು. ಈ ಸಂಬಂಧ ಆರು ಪುಟಗಳ ಮನವಿಯನ್ನು ಬಿಜೆಪಿ ನಾಯಕರು ರಾಜ್ಯಪಾಲರಿಗೆ ನೀಡಿದ್ದಾರೆ. ಇದನ್ನೂ ಓದಿ: G Ram G ಕಾಯ್ದೆ | ಕಾಂಗ್ರೆಸ್ ಹೋರಾಟ ನಿಲ್ಲಲ್ಲ, ಇಲ್ಲಿಗೆ ಬಿಡಲ್ಲ – ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ
ಪ್ರಜಾಪ್ರಭುತ್ವದ ಆಶಯಗಳೇ ಬುಡಮೇಲು
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಸರ್ಕಾರ ಪೊಲೀಸ್ ವ್ಯವಸ್ಥೆಯನ್ನೇ ಹಾಳು ಮಾಡಿದೆ ಎಂದು ರಾಜ್ಯಪಾಲರಿಗೆ ಬಿಜೆಪಿ ದೂರು ಕೊಟ್ಟಿದೆ. ಇಂದು ರಾಜ್ಯಪಾಲರನ್ನು ಭೇಟಿ ಮಾಡಿದ ಬಿಜೆಪಿ ನಿಯೋಗ, ಕಾನೂನು ಸುವ್ಯವಸ್ಥೆ ಕೆಡಿಸಿದ ಇತ್ತೀಚಿನ ಘಟನೆಗಳ ವಿವರ ಕೊಟ್ಟು, ಹಲವು ಪ್ರಕರಣಗಳಲ್ಲಿ ಪೊಲೀಸರೇ ಶಾಮೀಲಾಗಿದ್ದಾರೆ. ಹುಬ್ಬಳ್ಳಿಯಲ್ಲಿ ಬಿಜೆಪಿಯ ಮಹಿಳಾ ಕಾರ್ಯಕರ್ತೆಯನ್ನು ವಿವಸ್ತ್ರಗೊಳಿಸಿ ಪೊಲೀಸರೇ ಹಲ್ಲೆ ಮಾಡಿದ್ದಾರೆ. ವಿಪಕ್ಷ ಮುಖಂಡರು, ಕಾರ್ಯಕರ್ತರ ವಿರುದ್ಧ ಸುಳ್ಳು ಕೇಸ್ ಗಳನ್ನು ದಾಖಲಿಸಿ ಟಾರ್ಗೆಟ್ ಮಾಡಲಾಗ್ತಿದೆ. ಪ್ರಜಾಪ್ರಭುತ್ವದ ಆಶಯಗಳನ್ನೇ ಸರ್ಕಾರ ಬುಡಮೇಲು ಮಾಡ್ತಿದ್ದು, ಕೂಡಲೇ ರಾಜ್ಯಪಾಲರು ಮಧ್ಯಪ್ರವೇಶ ಮಾಡಬೇಕೆಂದು ಬಿಜೆಪಿ ನಾಯಕರು ಮನವಿ ಮಾಡಿದ್ದಾರೆ.
ಬಳ್ಳಾರಿ ಗಲಾಟೆ – ಮಧ್ಯಪ್ರವೇಶಕ್ಕೆ ಒತ್ತಾಯ
ಬಳ್ಳಾರಿ ಬ್ಯಾನರ್ ಗಲಾಟೆ ಹಾಗೂ ಫೈರಿಂಗ್ ಪ್ರಕರಣದಲ್ಲಿ ರಾಜ್ಯಪಾಲರು ಮಧ್ಯಪ್ರವೇಶಕ್ಕೆ ಬಿಜೆಪಿ ಒತ್ತಾಯಿಸಿದೆ. ಬಳ್ಳಾರಿ ಪ್ರಕರಣದಲ್ಲಿ ಸತ್ಯ ಹೊರಗೆ ಬರಲು ಸಿಬಿಐ ತನಿಖೆಗೆ ಈ ಪ್ರಕರಣ ವಹಿಸುವಂತೆ ಸರ್ಕಾರಕ್ಕೆ ನಿರ್ದೇಶಿಸುವಂತೆ ಮನವಿ ಮಾಡಿದ್ದಾರೆ. ಜತೆಗೆ ಶಾಸಕ ಜನಾರ್ದನ ರೆಡ್ಡಿ ಮತ್ತು ಅವರ ಕುಟುಂಬಕ್ಕೆ ಪ್ರಾಣ ಬೆದರಿಕೆ ಇದ್ದು ಸೂಕ್ತ ಭದ್ರತೆ ಒದಗಿಸುವುದೂ ಸೇರಿದಂತೆ, ಪ್ರಕರಣದಲ್ಲಿ ಅಧಿಕಾರ ದುರ್ಬಳಕೆ, ಅಪಾರಧದ ಸಂಚುಗಳಿರುವ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಸೂಕ್ತ ನಿರ್ದೇಶನ ಕೊಡುವಂತೆಯೂ ಬಿಜೆಪಿ ನಿಯೋಗ ಮನವಿ ಮಾಡಿಕೊಂಡಿದೆ.
ಪ್ರತಿಪಕ್ಷದ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಸಂಸದ ಗೋವಿಂದ ಕಾರಜೋಳ, ಶಾಸಕರಾದ ಎಸ್ ಆರ್ ವಿಶ್ವನಾಥ್ ಮತ್ತಿತರರು ಮತ್ತಿತರರ ನಿಯೋಗದಲ್ಲಿದ್ದರು. ಇದನ್ನೂ ಓದಿ: ಭೂಮಿಯ ಒಳಗೆ ಬೆಲೆ ಬಾಳುವ ವಸ್ತುಗಳು ಸಿಕ್ಕಿದರೆ ಅದು ಸರ್ಕಾರದ ಆಸ್ತಿ: ಹೆಚ್‌ಕೆ ಪಾಟೀಲ್

