ಕಡೇ ಕ್ಷಣದ ಬದಲಾವಣೆ ಮಧ್ಯೆ ಟಿಕೆಟ್ ಘೋಷಣೆ – ಹೈಡ್ರಾಮಾ ಮೂಲಕ ಕಮಲ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

Public TV
3 Min Read

ಬೆಂಗಳೂರು: ವಿಧಾನಪರಿಷತ್ ಏಳು ಸ್ಥಾನಗಳಿಗೆ ನಡೆಯುವ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಹೈಡ್ರಾಮವೇ ನಡೆದಿದೆ. ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಇಂದು ಬೆಳಗ್ಗೆ 11 ರವರೆಗೂ ಅಭ್ಯರ್ಥಿಗಳ ಲಿಸ್ಟ್ ಪ್ರಕಟ ಆಗಿರಲೇ ಇಲ್ಲ. ಕೊನೆಗೆ ಲಿಸ್ಟ್ ಪ್ರಕಟವಾದಾಗ ನಡೆದಿದ್ದು, ಮತ್ತೊಂದು ಹೈಡ್ರಾಮಾ.

ಅಳೆದು ತೂಗಿ ಸಾಕಷ್ಟು ಲೆಕ್ಕಾಚಾರಗಳೊಂದಿಗೆ ಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದೆ. ಮಾಜಿ ಸಚಿವ ಲಕ್ಷ್ಮಣ ಸವದಿ, ಎಸ್‍ಸಿ ಮೋರ್ಚಾ ಅಧ್ಯಕ್ಷ ಚಲವಾದಿ ನಾರಾಯಣ್ ಸ್ವಾಮಿ, ರಾಜ್ಯ ಕಾರ್ಯದರ್ಶಿ ಎಸ್.ಕೇಶವ್ ಪ್ರಸಾದ್ ಹಾಗೂ ಕೊಪ್ಪಳದ ಬಿಜೆಪಿ ಮುಖಂಡೆ ಹೇಮಲತಾ ನಾಯಕ್‍ಗೆ ಬಿಜೆಪಿ ಪರಿಷತ್ ಟಿಕೆಟ್ ನೀಡಿದೆ. ಈ ನಾಲ್ವರ ಪೈಕಿ ಲಕ್ಷ್ಮಣ ಸವದಿ ಮತ್ತು ಹೇಮಲತಾ ನಾಯಕ್‍ಗೆ ಕೊನೆಯ ಕ್ಷಣದಲ್ಲಿ ಟಿಕೆಟ್ ಘೋಷಣೆ ಮಾಡಲಾಯ್ತು. ಇದನ್ನೂ ಓದಿ: ಜಿಲ್ಲಾಧಿಕಾರಿ ಸಭೆಗೆ ಗೈರಾದ ತಾಲೂಕು ವೈದ್ಯಾಧಿಕಾರಿಗಳು ಅಮಾನತು

ಬೆಳಗ್ಗೆ 11ಕ್ಕೆ ಬಿಜೆಪಿ ಟಿಕೆಟ್ ಘೋಷಣೆ ಆಯ್ತು. ಬಳಿಕ ಹೇಮಲತಾ ನಾಯಕ್ ಹೊರತುಪಡಿಸಿ ಉಳಿದ ಮೂವರು ಅಭ್ಯರ್ಥಿಗಳು ಬಿಜೆಪಿ ಕಚೇರಿಗೆ ಆಗಮಿಸಿ ಪಕ್ಷದ ರಾಜ್ಯಾಧ್ಯಕ್ಷರಿಂದ ಬಿ ಫಾರಂ ಪಡೆದುಕೊಂಡ್ರು. ಹೇಮಲತಾ ನಾಯಕ್ ಆಯ್ಕೆ ಕೊನೆಯ ಕ್ಷಣದಲ್ಲಿ ಆದ ಹಿನ್ನೆಲೆಯಲ್ಲಿ ಅವರು ಕೊಪ್ಪಳದಿಂದ ಬೆಂಗಳೂರಿಗೆ ಬರುವಲ್ಲಿ ತಡವಾಯ್ತು. ಅಷ್ಟರಲ್ಲಾಗಲೇ ಉಳಿದ ಮೂವರು ಅಭ್ಯರ್ಥಿಗಳು ವಿಧಾನಸೌಧದಲ್ಲಿ ನಾಮಪತ್ರ ಸಲ್ಲಿಸಿದ್ರು.

ಕೊಪ್ಪಳದಿಂದ ತುಮಕೂರಿಗೆ ಬಂದಿದ್ದ ಹೇಮಲತಾ ನಾಯಕ್‍ಗೆ ಬೆಂಗಳೂರಿಗೆ ಬರಲು ಬಿಜೆಪಿ ಕಚೇರಿಯಿಂದ ಹೆಲಿಕಾಪ್ಟರ್ ವ್ಯವಸ್ಥೆ ಮಾಡಲಾಗಿತ್ತು. ನಾಮಪತ್ರಕ್ಕೆ ಮುಕ್ಕಾಲು ಗಂಟೆ ಇದೆ ಅನ್ನುವಾಗ ನಗರದ ಜಕ್ಕೂರಿಗೆ ಹೆಲಿಕಾಪ್ಟರ್‍ನಲ್ಲಿ ಬಂದಿಳಿದ ಹೇಮಲತಾ ನಾಯಕ್, ಅಲ್ಲಿಂದ ಎಸ್ಕಾರ್ಟ್ ವಾಹನದ ಸೌಕರ್ಯದೊಂದಿಗೆ ವಿಧಾನಸೌಧಕ್ಕೆ ವೇಗವಾಗಿ ಬಂದು ನಾಮಪತ್ರ ಸಲ್ಲಿಸಬೇಕಾಯ್ತು. ಹೇಮಲತಾ ನಾಯಕ್‍ಗೆ ಹೆಲಿಕಾಪ್ಟರ್ ಮತ್ತು ಎಸ್ಕಾರ್ಟ್ ವ್ಯವಸ್ಥೆ ಒದಗಿಸಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

HEMALATHA

ಆದರೆ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಯಲ್ಲಿ ಈ ಬಾರಿ ಶಿಸ್ತಿನ ಪಕ್ಷ ಬಿಜೆಪಿಯಲ್ಲಿ ಗೊಂದಲಕಾರಿ ಸನ್ನಿವೇಶಗಳು ನಡೆದವು. ಜೂನ್ 3 ರಂದು ನಡೆಯಲಿರುವ ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ನಾಲ್ಕು ಸ್ಥಾನ ಗೆಲ್ಲುವ ಅವಕಾಶ ಇದೆ. ಆದ್ರೆ ಈ ನಾಲ್ಕು ಸ್ಥಾನಗಳಿಗೆ ಟಿಕೆಟ್ ಪಟ್ಟಿ ಘೋಷಣೆ ಮಾಡಲು ಈ ಸಲ ಬಿಜೆಪಿಯಲ್ಲಿ ಸಾಕಷ್ಟು ವಿಳಂಬ ಆಯ್ತು. ನಾಮಪತ್ರ ಸಲ್ಲಿಸಲು ಇಂದೇ ಕೊನೆಯ ದಿನ ಆಗಿದ್ರೂ ಇಂದು ಬೆಳಗ್ಗೆ 11 ಗಂಟೆವರೆಗೂ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ ಆಗಿರ್ಲಿಲ್ಲ. ಕೊನೆಗೆ ಬೆಳಗ್ಗೆ 11 ಗಂಟೆಗೆ ಅಂತೂ ಪಟ್ಟಿ ಪ್ರಕಟ ಆದಾಗ ಹಲವರಿಗೆ ಶಾಕ್ ಕಾದಿತ್ತು.

ಬಿಜೆಪಿಯ ಅಧಿಕೃತ ಪಟ್ಟಿ ಪ್ರಕಟಕ್ಕೂ ಮುನ್ನವೇ ಮೂವರಿಗೆ ಬಿಜೆಪಿಯ ಪ್ರಮುಖ ನಾಯಕರೊಬ್ಬರಿಂದ ಹಿಂದಿನ ರಾತ್ರಿಯೇ ಕರೆ ಹೋಗಿತ್ತು. ದಾಖಲೆ ರೆಡಿ ಮಾಡ್ಕೊಂಡು ಬೆಜೆಪಿ ಕಚೇರಿಗೆ ಬರುವಂತೆ ಲಿಂಗರಾಜ್ ಪಾಟೀಲ್, ಚಲವಾದಿ ನಾರಾಯಣ ಸ್ವಾಮಿ, ಕೇಶವ ಪ್ರಸಾದ್‍ಗೆ ಆ ನಾಯಕರು ಕರೆ ಮಾಡಿ ತಿಳಿಸಿದ್ರು. ಸಿ.ಮಂಜುಳ ಅವರಿಗೆ ಪಕ್ಷದ ಕಚೇರಿಗೆ ಬರುವಂತೆಯೂ ಸೂಚಿಸಲಾಗಿತ್ತು.

ಈ ನಾಲ್ವರೂ ತಮಗೆ ಟಿಕೆಟ್ ಫಿಕ್ಸ್ ಎಂದು ಖುಷಿಯಿಂದ ಪಕ್ಷದ ಕಚೇರಿಗೆ ಆಗಮಿಸಿದ್ರು. ಆದ್ರೆ ಅಧಿಕೃತವಾಗಿ ಟಿಕೆಟ್ ಪಟ್ಟಿ ಘೋಷಣೆ ಆದಾಗ, ಲಿಂಗರಾಜ್ ಪಾಟೀಲ್ ಮತ್ತು ಸಿ ಮಂಜುಳಾಗೆ ಶಾಕ್ ಕಾದಿತ್ತು. ಇವರಿಬ್ಬರ ಬದಲಾಗಿ ಹಾಲಿ ಎಮ್ಮೆಲ್ಸಿ ಲಕ್ಷ್ಮಣ ಸವದಿ ಮತ್ತು ಎಸ್ಟಿ ನಾಯಕಿ ಹೇಮಲತಾ ನಾಯಕ್‍ಗೆ ಟಿಕೆಟ್ ಘೋಷಣೆ ಮಾಡಲಾಗಿತ್ತು. ಬಿ ವೈ ವಿಜಯೇಂದ್ರಗೆ ಟಿಕೆಟ್ ಕೊಡಲ್ಲ ಎಂದು ಮೊನ್ನೆ ರಾತ್ರಿಯೇ ರಾಜ್ಯ ಬಿಜೆಪಿ ಘಟಕಕ್ಕೆ ಸಂದೇಶ ರವಾನಿಸಲಾಗಿತ್ತು. ಇದನ್ನೂ ಓದಿ: ತನ್ನ ಕಥೆಯನ್ನು ಪಠ್ಯದಿಂದ ಕೈ ಬಿಡಿ: ದೇವನೂರು ಮಹಾದೇವ 

ಒಟ್ಟಿನಲ್ಲಿ ಬಿಜೆಪಿಯಲ್ಲಿ ಪರಿಷತ್ ಟಿಕೆಟ್ ಘೋಷಣೆಯಲ್ಲಿ ನಡೆದ ಹೈಡ್ರಾಮಾ ಎಲ್ಲರ ಗಮನ ಸೆಳೆಯಿತು. ಈ ಸಲ ಹೈಕಮಾಂಡ್‍ನಿಂದಲೂ ನಿಶ್ಚಿತ ನಿರ್ಧಾರ ಹೊರಹೊಮ್ಮದೇ ಗೊಂದಲ ಸೃಷ್ಟಿಯಾಗಿದ್ದು ಚರ್ಚೆ ಹುಟ್ಟಿಸಿದೆ.

Share This Article
Leave a Comment

Leave a Reply

Your email address will not be published. Required fields are marked *