ಉರಿಬಿಸಿಲಿನಲ್ಲಿ ಗೋಧಿ ಕಟಾವು ಮಾಡಿ ಮತಯಾಚಿಸಿದ ಹೇಮಾ ಮಾಲಿನಿ

Public TV
2 Min Read

ಲಕ್ನೋ: ಉತ್ತರಪ್ರದೇಶದಲ್ಲಿ ಲೋಕಸಭಾ ಚುನಾವಣಾ (Loksabha Election 2024) ಪ್ರಚಾರದ ಭರಾಟೆ ಜೋರಾಗಿದೆ. ಮತದಾರರನ್ನು ಒಲಿಸಿಕೊಳ್ಳಲು ಅಭ್ಯರ್ಥಿಗಳು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಬಿಜೆಪಿ ಅಭ್ಯರ್ಥಿ ಹಾಗೂ ಸಂಸದೆ ಹೇಮಾ ಮಾಲಿನಿಯವರು (Hema Malini) ಮತಯಾಚನೆ ಮಾಡಿರುವ ವೀಡಿಯೋವೊಂದು ವೈರಲ್‌ ಆಗುತ್ತಿದೆ.

ಬಲದೇವ್ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದ ಹೇಮಾಮಾಲಿನಿ ಅವರು ಉರಿಬಿಸಿಲಿನಲ್ಲಿಯೂ ಕೆಲ ಮಹಿಳೆಯರ ಜೊತೆ  ಗದ್ದೆಯಲ್ಲಿ ಗೋಧಿ ಕೊಯ್ಲು ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ವೀಡಿಯೋದಲ್ಲೇನಿದೆ..?: ಚುನಾವಣಾ ಪ್ರಚಾರದ ವೇಳೆ ಬಲದೇವ್ ಪ್ರದೇಶದ ಹಯಾತ್‌ಪುರ ಗ್ರಾಮದಲ್ಲಿ ಕೆಲ ಮಹಿಳೆಯರು ಬಿಸಿಲಲ್ಲಿ ಗದ್ದೆಯಲ್ಲಿ ಗೋಧಿ ಕೊಯ್ಲು ಮಾಡುತ್ತಿದ್ದರು. ಗೋಧಿ ಕೊಯ್ಲು ಮಾಡುತ್ತಿರುವ ಮಹಿಳೆಯರನ್ನು ನೋಡಿದ ಹೇಮಾ ಮಾಲಿನಿ, ತನ್ನ ಕಾರನ್ನು ನಿಲ್ಲಿಸಿ ಹೊಲಕ್ಕೆ ಇಳಿದಿದ್ದಾರೆ. ಬಳಿಕ ಮಹಿಳೆಯೊಬ್ಬರ ಕೈಯಿಂದ ಕುಡುಗೋಲು ತೆಗೆದುಕೊಂಡು ಗೋಧಿ ಕೊಯ್ಲು ಮಾಡಿದರು. ಇದನ್ನೂ ಓದಿ: ವಿಭಿನ್ನವಾಗಿ ಚುನಾವಣಾ ಪ್ರಚಾರಕ್ಕಿಳಿದ ಪದ್ಮಶ್ರೀ ಪುರಸ್ಕೃತ ಸ್ವತಂತ್ರ ಅಭ್ಯರ್ಥಿ!

ಮಹಿಳೆಯರೊಂದಿಗೆ ಫೋಟೋ: ಹೊಲದಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಶೇಕ್‌ಹ್ಯಾಂಡ್ ಕೊಡುವುದರಿಂದ ಹಿಡಿದು ಅವರ ಜೊತೆ ಕ್ಲಿಕ್ಕಿಸಿಕೊಂಡ ಫೋಟೋಗಳನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಅಲ್ಲದೆ ಕಳೆದ 10 ವರ್ಷಗಳಿಂದ ನಾನು ನಿಯಮಿತವಾಗಿ ಭೇಟಿಯಾಗುತ್ತಿರುವ ರೈತರೊಂದಿಗೆ ಮಾತನಾಡಲು ಇಂದು ನಾನು ಹೊಲಗಳಿಗೆ ಹೋಗಿದ್ದೇನೆ. ಅವರೊಂದಿಗೆ ಕಳೆದ ಸಮಯ ಅತ್ಯಂತ ಖುಷಿ ಕೊಟ್ಟಿತು ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಮಹಿಳೆಯರನ್ನು ಹೇಗೆ ಗೌರವಿಸಬೇಕೆಂಬುದನ್ನು ಮೋದಿ ನೋಡಿ ಕಲಿಯಿರಿ: ಹೇಮಾ ಮಾಲಿನಿ

ಮಥುರಾ ಲೋಕಸಭಾ ಕ್ಷೇತ್ರದಿಂದ ಹೇಮಾ ಮಾಲಿನಿ ಅವರನ್ನು ಬಿಜೆಪಿ ಸತತ ಮೂರನೇ ಬಾರಿಗೆ ಕಣಕ್ಕಿಳಿಸಿದೆ. 1991 ರಿಂದ 1999 ರವರೆಗೆ ನಾಲ್ಕು ಬಾರಿ ಬಿಜೆಪಿ ಮಥುರಾದಿಂದ ಗೆದ್ದಿದೆ. 2004ರಲ್ಲಿ ಮಥುರಾ ಕ್ಷೇತ್ರ ಕಾಂಗ್ರೆಸ್ ಪಾಲಾಯಿತು. 2009 ರಲ್ಲಿ, ಆರ್‌ಎಲ್‌ಡಿಯ ಜಯಂತ್ ಚೌಧರಿ ಮಥುರಾದಿಂದ ಸಂಸದರಾದರು. 2014ರಲ್ಲಿ ಬಿಜೆಪಿ ಹೇಮಾ ಮಾಲಿನಿ ಅವರನ್ನು ಕಣಕ್ಕಿಳಿಸಿ ಗೆದ್ದಿತ್ತು. 2019 ರ ಚುನಾವಣೆಯಲ್ಲಿ, ಹೇಮಾ ಅವರ ಪತಿ ನಟ ಧರ್ಮೇಂದ್ರ ಕೂಡ ಅವರ ಪರವಾಗಿ ಪ್ರಚಾರ ಮಾಡಿದರು.

Share This Article