ಸೊರೊಸ್‌ ಜೊತೆ ಕೈಜೋಡಿಸಿರುವ ರಾಹುಲ್‌ ದೇಶದ್ರೋಹಿ: ಸಂಬಿತ್‌ ಪಾತ್ರ ಕಿಡಿ

Public TV
3 Min Read

ನವದೆಹಲಿ: ಭಾರತದ ಆರ್ಥಿಕತೆಯನ್ನು (Indian Economy) ಅಸ್ಥಿರಗೊಳಿಸಲು ಅಮೆರಿಕ ಮೂಲದ ಉದ್ಯಮಿ ಜಾರ್ಜ್‌ ಸೊರೊಸ್‌ (George Soros) ಮುಂದಾಗಿದ್ದು, ಅವರ ಜೊತೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ (Rahul Gandhi) ಕೈಜೋಡಿಸಿದ್ದಾರೆ. ಭಾರತದ ವಿರುದ್ಧ ಪಿತೂರಿ ನಡೆಸುತ್ತಿರುವ ವ್ಯಕ್ತಿಗಳಿಗೆ ಬೆಂಬಲ ನೀಡುತ್ತಿರುವ ರಾಹುಲ್‌ ಗಾಂಧಿ ದೇಶದ್ರೋಹಿ (Traitor) ಎಂದು ಬಿಜೆಪಿ ಸಂಸದ ಸಂಬಿತ್‌ ಪಾತ್ರ (Sambit Patra) ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಫ್ರೆಂಚ್ ಪತ್ರಿಕೆ ಮೀಡಿಯಾಪಾರ್ಟ್ ಡಿಸೆಂಬರ್ 2 ರಂದು ತನಿಖಾ ಪತ್ರಿಕೋದ್ಯಮ ನಡೆಸುತ್ತಿರುವ OCCRP (Organized Crime and Corruption Reporting Project) ಮತ್ತು ಅಮೆರಿಕ ಸರ್ಕಾರದ ನಡುವಿನ ಸಂಬಂಧದ ಬಗ್ಗೆ ವರದಿ ಪ್ರಕಟಿಸಿದ ನಂತರ ಸಂಬಿತ್‌ ಪಾತ್ರ ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು.

OCCRP ಸಂಸ್ಥೆಗೆ ಜಾರ್ಜ್‌ ಸೊರೊಸ್‌ ಹಣವನ್ನು ನೀಡುತ್ತಾರೆ. ಈ OCCRP ಭಾರತದ ಆರ್ಥಿಕತೆಗೆ ಸಂಬಂಧಿಸಿದಂತೆ ಸುಳ್ಳು ವರದಿಗಳನ್ನು ಪ್ರಕಟಿಸುತ್ತದೆ. OCCRP ವರದಿ ಪ್ರಕಟಿಸಿದ ನಂತರ ಇಲ್ಲಿ ರಾಹುಲ್‌ ಗಾಂಧಿ ಅಳಲು ಆರಂಭಿಸುತ್ತಾರೆ. ಜಾರ್ಜ್‌ ಸೊರೊಸ್‌ ಮತ್ತು ರಾಹುಲ್‌ ಗಾಂಧಿ ದೇಹಗಳು ಬೇರೆ ಬೇರೆಯಾದರೂ ಆತ್ಮ ಮಾತ್ರ ಒಂದೇ. ಸೊರೊಸ್‌ ಅವರ ಕಾರ್ಯಸೂಚಿಯನ್ನು ಪೂರೈಸಲು ರಾಹುಲ್‌ ಗಾಂಧಿ ಬಯಸುತ್ತಾರೆ. ಇವರಿಬ್ಬರು ದೇಶದ ಹಿತಾಸಕ್ತಿಗೆ ಧಕ್ಕೆ ತರಲು ಬಯಸುತ್ತಾರೆ ಎಂದು ದೂರಿದರು. ಇದನ್ನೂ ಓದಿ: ಹಿಂಡನ್‌ಬರ್ಗ್‌ನಲ್ಲಿ ಸೊರೊಸ್ ಮುಖ್ಯ ಹೂಡಿಕೆದಾರ, ವಿದೇಶದಿಂದ ಭಾರತದ ವಿರುದ್ಧ ಪಿತೂರಿ: ರವಿಶಂಕರ್‌ ಪ್ರಸಾದ್

OCCRP ಜಾಗತಿಕ ಮಾಧ್ಯಮ ಸಂಸ್ಥೆಯಾಗಿದ್ದು ಆ ಸಂಸ್ಥೆ ಪ್ರಕಟಿಸುವುದನ್ನು ಕೋಟ್ಯಂತರ ಮಂದಿ ಓದುತ್ತಾರೆ. ಸರ್ಕಾರೇತರ ಸಂಸ್ಥೆಯಾದ ಓಪನ್‌ ಸೊಸೈಟಿ ಫೌಂಡೇಶನ್‌ OCCRP ಸಂಸ್ಥೆಗೆ ಭಾರೀ ಪ್ರಮಾಣದಲ್ಲಿ ಧನಸಹಾಯ ನೀಡುತ್ತದೆ. ಓಪನ್‌ ಸೊಸೈಟಿ ಸೊರೊಸ್‌ ಅವರು ಸ್ಥಾಪನೆ ಮಾಡಿದ ಸಂಸ್ಥೆಯಾಗಿದ್ದು ರಾಹುಲ್‌ ಗಾಂಧಿ ದೇಣಿಗೆ ನೀಡುತ್ತಾರೆ. ಹಣ ನೀಡುವ ಜನರ ಹಿತಾಸಕ್ತಿಗೆ ಅನುಗುಣವಾಗಿ ಈ ಸಂಸ್ಥೆಗಳು ಕೆಲಸ ಮಾಡುತ್ತವೆ ಎಂದು ದೂರಿದರು.

ಲೋಕಸಭೆಯ ವಿರೋಧ ಪಕ್ಷದ ನಾಯಕನನ್ನು ದೇಶದ್ರೋಹಿ ಎಂದು ಕರೆಯಲು ನನಗೆ ಯಾವುದೇ ಹಿಂಜರಿಕೆ ಇಲ್ಲ. ರಾಷ್ಟ್ರೀಯ ಹಿತಾಸಕ್ತಿಗಳಿಗೆ ಧಕ್ಕೆ ತರುವ ವಿಷಯಗಳನ್ನು ರಾಹುಲ್‌ ಗಾಂಧಿ ಆಗಾಗ ಪ್ರಸ್ತಾಪಿಸುತ್ತಾರೆ. ಭಾರತ ವಿರೋಧಿ ಭಾವನೆಗಳನ್ನು ಹೊಂದಿರುವ ವ್ಯಕ್ತಿಗಳು ಮತ್ತು ಗುಂಪುಗಳಿಂದ ರಾಹುಲ್‌ ಗಾಂಧಿ ಮೆಚ್ಚುಗೆಯನ್ನು ಗಳಿಸುತ್ತಾರೆ.

ಈ OCCRP ಬಗ್ಗೆ ಹಲವು ಪ್ರಶ್ನೆಗಳು ಏಳುತ್ತದೆ. ಏಕೆಂದರೆ ಇದರ 70% ನಿಧಿ ಒಂದೇ ಮೂಲದಿಂದ ಬರುತ್ತದೆ. OCCRP ಜಾರ್ಜ್ ಸೊರೊಸ್ ಮತ್ತು ಅಮೆರಿಕಾದ ಹಿತಾಸಕ್ತಿಗೆ ಅನುಗುಗಣವಾಗಿ ಕೆಲಸ ಮಾಡುತ್ತದೆ ಎಂದು ಕಿಡಿಕಾರಿದರು.

 

Share This Article