ಬಿಜೆಪಿ ಶಾಸಕಾಂಗ ಪಕ್ಷದ ಸಭೆ- ಮೂಲ ಶಾಸಕರಿಂದ ಅಸಮಾಧಾನದ ಹೊಗೆ ಏಳುತ್ತಾ?

Public TV
2 Min Read

ಬೆಂಗಳೂರು: ಸುಮಾರು ಐದಾರು ತಿಂಗಳ ಬಳಿಕ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಇಂದು ನಡೆಯುತ್ತಿದೆ. ಬೆಂಗಳೂರಿನ ಖಾಸಗಿ ಹೊಟೇಲಿನಲ್ಲಿ ಸಂಜೆ 7 ಗಂಟೆಗೆ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯನ್ನು ಕರೆಯಲಾಗಿದೆ. ಇಂದಿನ ಬಿಜೆಪಿ ಶಾಸಕಾಂಗ ಪಕ್ಷದ ಸಭೆಗಾಗಿಯೇ ಪಕ್ಷದ ಹಲವು ಶಾಸಕರು ಕಾದು ಕೂತಿದ್ದಾರೆ. ಬಿಜೆಪಿ ಸರ್ಕಾರ ರಚನೆಯಾದಾಗಿನಿಂದ ಇಲ್ಲಿಯವರೆಗೆ ಪಕ್ಷ ಮತ್ತು ಸರ್ಕಾರದಲ್ಲಿ ನಡೆದ ವಿದ್ಯಮಾನಗಳ ಕುರಿತು ಇಂದಿನ ಸಭೆಯಲ್ಲಿ ಪಕ್ಷದ ಮೂಲ ಶಾಸಕರು ಮಾತಾಡಲು ತಯಾರಿ ಮಾಡಿಕೊಂಡಿದ್ದಾರೆ. ಇಂದಿನ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಹಲವು ಪಕ್ಷದ ಮೂಲ ಶಾಸಕರು ಹಲವು ವಿಚಾರಗಳನ್ನು ಪ್ರಸ್ತಾಪಿಸಿ ಅಸಮಾಧಾನ ವ್ಯಕ್ತಪಡಿಸಲಿದ್ದಾರೆ ಎನ್ನಲಾಗಿದೆ.

ಮುಖ್ಯವಾಗಿ ಸಭೆಯಲ್ಲಿ ಸಚಿವ ಸ್ಥಾನ ವಂಚಿತ ಆಕಾಂಕ್ಷಿ ಶಾಸಕರ ಅಸಮಾಧಾನ ಸ್ಫೋಟವಾಗಲಿದೆ ಎನ್ನಲಾಗಿದೆ. ಕೊನೆ ಗಳಿಗೆಯಲ್ಲಿ ಪಕ್ಷದ ಮೂಲ ಶಾಸಕರಿಗೆ ಸಚಿವ ಸ್ಥಾನ ತಪ್ಪಿದ್ದರಿಂದ ಸಚಿವ ಸ್ಥಾನ ವಂಚಿತ ಹಲವು ಹಿರಿಯ ಮೂಲ ಶಾಸಕರು ಗರಂ ಆಗಿದ್ದಾರೆ. ಆರೇಳು ಬಾರಿ ಗೆದ್ದರೂ ಸಚಿವ ಸ್ಥಾನ ಸಿಗದ ಬಗ್ಗೆ ಹಲವರು ಬೇಸರ ವ್ಯಕ್ತಪಡಿಸಲಿದ್ದಾರೆ. ಸೋತ ಸಿ.ಪಿ ಯೋಗೀಶ್ವರ್ ಗೆ ಸಚಿವ ಸ್ಥಾನ ಕೊಡಲು ಮುಂದಾಗಿದ್ದ ವಿಷಯಕ್ಕೂ ಅಸಮಾಧಾನ ವ್ಯಕ್ತವಾಗಲಿದೆ ಎನ್ನಲಾಗಿದೆ. ಗೆದ್ದವರಿಗಿಂತ ಸೋತವರೇ ಮುಖ್ಯವಾದರೇ? ಈಗಾಗಲೇ ಚುನಾವಣೆಯಲ್ಲಿ ಸೋತಿದ್ದ ಲಕ್ಷ್ಮಣ್ ಸವದಿಯನ್ನು ಹೈಕಮಾಂಡ್ ಆದೇಶದ ಮೇರೆಗೆ ಸಚಿವ ಸ್ಥಾನ ಕೊಟ್ಟು ಡಿಸಿಎಂ ಸಹ ಮಾಡಲಾಗಿದೆ. ಈಗ ಸೋತಂತಹ ಸಿ.ಪಿ ಯೋಗೀಶ್ವರ್‍ಗೂ ಸಚಿವ ಸ್ಥಾನ ಕೊಟ್ಟರೆ ಗೆದ್ದವರು ಎಲ್ಲಿ ಹೋಗಬೇಕು? ಎಂಬಿತ್ಯಾದಿಯಾಗಿ ಆಕಾಂಕ್ಷಿಗಳು ದನಿ ಎತ್ತಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇದರ ಜೊತೆಗೆ ಪಕ್ಷದ ಮೂಲ ಶಾಸಕರಿಗೆ ನಿಗಮ ಮಂಡಳಿ ಕೊಡದಿರುವ ಬಗ್ಗೆಯೂ ಕೆಲವು ಮೂಲ ಶಾಸಕರು ಬೇಸರ ವ್ಯಕ್ತಪಡಿಸಲಿದ್ದಾರಂತೆ. ಮೂಲ ಬಿಜೆಪಿಗರಿಗೆ ಪ್ರಭಾವಿ ನಿಗಮಮಂಡಳಿ ಕೊಡಬೇಕೆಂಬ ಒತ್ತಾಯವೂ ಸಭೆಯಲ್ಲಿ ಕೇಳಿಬರಲಿದೆ. ಇಂದಿನ ಸಭೆಯಲ್ಲಿ ಶಾಸಕರ ಕ್ಷೇತ್ರಗಳಿಗೆ ಅನುದಾನ ಬಿಡುಗಡೆಯಾಗದ ವಿಚಾರವೂ ಸಾಕಷ್ಟು ಬಿಸಿ-ಬಿಸಿ ಚರ್ಚೆಗೆ ವೇದಿಕೆಯಾಗಲಿದೆ ಎನ್ನಲಾಗಿದೆ. ಮೂಲ ಶಾಸಕರ ಕ್ಷೇತ್ರಗಳಿಗೆ ಇನ್ನೂ ಬಿಡುಗಡೆ ಆಗದ ಅನುದಾನ ವಿಚಾರಕ್ಕೂ ಜಟಾಪಟಿ ನಡೆಯಲಿದೆ. ಕ್ಷೇತ್ರಗಳಿಗೆ ಅನುದಾನ ವಿಚಾರದಲ್ಲಿ ಪಕ್ಷದ ಮೂಲ ಶಾಸಕರನ್ನು ಕಡೆಗಣನೆ ಮಾಡಲಾಗಿದೆ ಎಂಬ ಅಸಮಾಧಾನ ಈಗಾಗಲೇ ಪಕ್ಷದಲ್ಲಿ ಎದ್ದಿದೆ. ಈ ನಿಟ್ಟಿನಲ್ಲಿ ಇಂದಿನ ಸಭೆಯಲ್ಲಿ ಹಲವು ಶಾಸಕರು ಬೇಗುದಿ ತೋಡಿಕೊಳ್ಳುವ ನಿರೀಕ್ಷೆ ಇದೆ. ವಲಸಿಗ ಸಚಿವರು, ಸೋತವರ ಕ್ಷೇತ್ರಗಳಿಗೆ ಭರಪೂರ ಅನುದಾನಕ್ಕೆ ಮೂಲ ಶಾಸಕರಿಂದ ವಿರೋಧ ವ್ಯಕ್ತವಾಗಿದ್ದು, ನಮ್ಮ ಕ್ಷೇತ್ರಗಳಿಗೂ ಅನುದಾನ ಕೊಡುವಂತೆ ಮೂಲ ಬಿಜೆಪಿ ಶಾಸಕರು ಸಭೆಯಲ್ಲಿ ಪಟ್ಟು ಹಿಡಿಯಲಿದ್ದಾರೆ ಎನ್ನಲಾಗಿದೆ.

ಒಟ್ಟಿನಲ್ಲಿ ಇಂದಿನ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿಎಂ ಯಡಿಯೂರಪ್ಪ ಇಕ್ಕಟ್ಟಿನಲ್ಲಿ ಸಿಲುಕುವುದಂತೂ ಖಂಡಿತವಾಗಿದೆ. ಇಂದಿನ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರನ್ನು ಹೇಗೆ ಸಮಾಧಾನ ಮಾಡಬೇಕೆಂಬ ಗೊಂದಲ, ಟೆನ್ಷನ್ ನಲ್ಲಿ ಸಿಎಂ ಯಡಿಯೂರಪ್ಪ ಇದ್ದಾರಂತೆ.

Share This Article
Leave a Comment

Leave a Reply

Your email address will not be published. Required fields are marked *