ಬಿಎಸ್‍ವೈ-ಎಚ್‍ಡಿಕೆ ನಡುವೆ ಒಳ ಒಪ್ಪಂದ: ಸಿದ್ದರಾಮಯ್ಯ ಆರೋಪ

Public TV
2 Min Read

ಬೆಳಗಾವಿ: ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಅವರು ಬಿಜೆಪಿ ಸರ್ಕಾರದ ಬಗ್ಗೆ ಮೃದು ಧೋರಣೆ ತೋರುತ್ತಿದ್ದಾರೆ. ಇದನ್ನು ಗಮನಿಸಿದರೆ ಕುಮಾರಸ್ವಾಮಿ ಹಾಗೂ ಸಿಎಂ ಬಿ.ಎಸ್.ಯಡಿಯೂರಪ್ಪ ಒಳ ಒಪ್ಪಂದ ಮಾಡಿಕೊಂಡಂತಿದೆ ಎಂದು ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ನಗರದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಜೆಡಿಎಸ್‍ನ ಅನೇಕ ಶಾಸಕರು ಬಿಜೆಪಿ ಸೇರಲು ಮುಂದಾಗಿದ್ದಾರೆ. ಹೀಗಾಗಿ ಬಿಜೆಪಿ ಸರ್ಕಾರ ಬೀಳಲು ನಾನು ಬಿಡುವುದಿಲ್ಲ. ನಾವು ಬೆಂಬಲ ಕೊಡುತ್ತೇವೆ ಅಂತ ಹೇಳುತ್ತಿದ್ದಾರೆ. ಸರ್ಕಾರ ಬೀಳಿಸುವ ಅಭ್ಯಾಸ ಇರುವುದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ಕುಟುಂಬಕ್ಕೆ ಹೊರತು ನಮಗಲ್ಲ ಎಂದು ಗುಡುಗಿದರು.

ಇತ್ತ ಟ್ವಿಟ್ಟರ್ ನಲ್ಲಿಯೂ ಕಿಡಿಕಾರಿರುವ ಸಿದ್ದರಾಮಯ್ಯ, ಕುಮಾರಸ್ವಾಮಿಯವರಿಗೆ 14 ತಿಂಗಳು ನಾನು ಆಡಳಿತ ನಡೆಸಲು ಬಿಡಲಾಗದಷ್ಟು ತೊಂದರೆ ಕೊಟ್ಟಿದ್ದರೆ ಮೊದಲ ದಿನವೇ ಅವರು ರಾಜೀನಾಮೆ ಕೊಟ್ಟುಬಿಡಬಹುದಿತ್ತು. 14 ತಿಂಗಳು ಆಡಳಿತ ನಡೆಸಿ ಈಗ ರಾಜಕೀಯ ದುರುದ್ದೇಶಕ್ಕೆ ಇಲ್ಲಸಲ್ಲದ ಆರೋಪ ಮಾಡುವುದು ಸರಿಯಲ್ಲ. ಸರ್ಕಾರ ಬೀಳಿಸುವುದರಲ್ಲಿ ಯಾರು ನಿಪುಣರು ಎಂದು ಅವರವರ ಇತಿಹಾಸವೇ ಹೇಳುತ್ತದೆ ಎಂದು ಬರೆದುಕೊಂಡಿದ್ದಾರೆ.

ಬಿಜೆಪಿ ಸರ್ಕಾರ ಬೀಳಿಸಲ್ಲ ಅನ್ನೋ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿಕೆಯ ಹಿಂದೆ ರಾಜಕೀಯ ಲೆಕ್ಕಾಚಾರವಿದೆ. ಆ ಲೆಕ್ಕಾಚಾರದಿಂದಲೇ ಹೆಚ್‍ಡಿಕೆಯವರು ಬಿಜೆಪಿಗೆ ಬೆಂಬಲ ಎಂದು ಹೇಳುತ್ತಿದ್ದಾರೆ ಎಂದು ಇಂದು ಬೆಳಗ್ಗೆ ಪಬ್ಲಿಕ್ ಟಿವಿ ವರದಿಯನ್ನು ಬಿತ್ತರಿಸಿತ್ತು.

ಹೆಚ್‍ಡಿಕೆ ಲೆಕ್ಕಾಚಾರವೇನು?
ಆಪರೇಷನ್ ಕಮಲದಿಂದ ಪಕ್ಷವನ್ನು ಪಾರು ಮಾಡುವುದು. ಬಿಜೆಪಿಗೆ ಜಿಗಿಯಲು ಸಜ್ಜಾಗಿರೋ ಶಾಸಕರನ್ನು ಉಳಿಸಿಕೊಳ್ಳುವುದು. ಸಾಫ್ಟ್ ಕಾರ್ನರ್ ತೋರಿಸಿದರೆ ಆಪರೇಷನ್‍ಗೆ ಬಿಜೆಪಿ ಕೈ ಹಾಕಲ್ಲ ಅನ್ನೋ ನಂಬಿಕೆ ಹಾಗೂ ತಮ್ಮ ಶಾಸಕರ ಕ್ಷೇತ್ರಗಳಿಗೆ ಸರ್ಕಾರದಿಂದ ಅನುದಾನ ಕೊಡಿಸೋದು ಹೆಚ್‍ಡಿಕೆ ಲೆಕ್ಕಾಚಾರವಾಗಿದೆ.

ತಮ್ಮ ವಿರುದ್ಧದ ಫೋನ್ ಟ್ಯಾಪಿಂಗ್ ಕೇಸ್ ತನಿಖೆ ಪ್ರಗತಿಯಲ್ಲಿದೆ. ಹೀಗಾಗಿ ಬಿಜೆಪಿ ಮೇಲೆ ದಾಳಿ ಮಾಡಿದರೆ ಡಿಕೆಶಿ ಸ್ಥಿತಿ ಎದುರಾಗಬಹುದು. ಅಲ್ಲದೆ ಭವಿಷ್ಯದಲ್ಲಿ ರಾಜಕೀಯವಾಗಿ ಕಷ್ಟ ಆಗಬಹುದು ಅನ್ನೋ ಭಯಯ ಹೆಚ್‍ಡಿಕೆಗೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಈಗ ಸಾಫ್ಟ್ ಕಾರ್ನರ್ ತೋರಿಸಿದರೆ ಮುಂದೆ ಅನುಕೂಲವಾಗನಹುದು ಎಂಬ ಲೆಕ್ಕಾಚಾರ ಕೂಡ ಹೆಚ್‍ಡಿಕೆಯವರದ್ದಾಗಿದೆ.

ಕಾಂಗ್ರೆಸ್ ಕೈಕೊಟ್ಟ ಮೇಲೆ ಜೆಡಿಎಸ್ ಪರಿಸ್ಥಿತಿ ಕಷ್ಟವಾಗಿದೆ. ಹೀಗೆ ಮುಂದುವರಿದರೆ ಜೆಡಿಎಸ್ ಭವಿಷ್ಯಕ್ಕೆ ಸಮಸ್ಯೆ ಆಗಬಹುದು. ಹೀಗಾಗಿ ಬಿಜೆಪಿ ಜೊತೆ ದೋಸ್ತಿಗೆ ಬಾಗಿಲು ಓಪನ್ ಮಾಡೋದು ಸೂಕ್ತ. ಉಪ ಚುನಾವಣೆಯಲ್ಲಿ ಬಿಜೆಪಿಗೆ ಪರೋಕ್ಷ ಬೆಂಬಲ ನೀಡುವುದು. ಈ ಮೂಲಕ ಕೇಂದ್ರ ಕಮಲ ನಾಯಕರ ಮನಸ್ಸು ಗೆಲ್ಲುವುದು. ಕಮಲ ಬೆಂಬಲಿಸಿ ಜೆಡಿಎಸ್ ಪಕ್ಷ ಉಳಿಸಿಕೊಳ್ಳೋದು ಹೆಚ್‍ಡಿಕೆ ಪ್ಲಾನ್ ಆಗಿದೆ.

Share This Article
Leave a Comment

Leave a Reply

Your email address will not be published. Required fields are marked *