ಲೋಕಸಭಾ ಚುನಾವಣೆ – ಮಹಾರಾಷ್ಟ್ರದಲ್ಲಿ ಶಿವಸೇನೆ, ಬಿಜೆಪಿ ಮೈತ್ರಿ ಅಧಿಕೃತ

Public TV
2 Min Read

– ಉದ್ಧವ್ ಠಾಕ್ರೆ ಜೊತೆ ಅಮಿತ್ ಶಾ ಮಾತುಕತೆ ಯಶಸ್ವಿ
– 25 ರಲ್ಲಿ ಬಿಜೆಪಿ, 23ರಲ್ಲಿ ಶಿವಸೇನೆ ಸ್ಪರ್ಧೆ
– ಲೋಕಸಭಾ ಜೊತೆಗೆ ವಿಧಾನಸಭಾ ಚುನಾವಣೆಗೂ ಸೀಟ್ ಹಂಚಿಕೆ

ಮುಂಬೈ: ಲೋಕಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಶಿವಸೇನೆ ಮೈತ್ರಿ ಅಧಿಕೃತವಾಗಿದೆ. ಲೋಕಸಭಾ ಚುನಾವಣೆಗೆ ಪ್ರತ್ಯೇಕವಾಗಿ ಸ್ಪರ್ಧಿಸಲು ಸಿದ್ಧ ಎಂದು ಹೇಳಿಕೆ ನೀಡುತ್ತಿದ್ದ ಬೆನ್ನಲ್ಲೇ ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಜೊತೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮೈತ್ರಿ ಮಾತುಕತೆ ನಡೆಸಿದ್ದಾರೆ.

ಲೋಕಸಭಾ ಚುನಾವಣೆಯ ಸಮಯದಲ್ಲೇ ವಿಧಾನಸಭಾ ಚುನಾವಣೆಯ ಮಾತುಕತೆ ನಡೆದು ಸೀಟ್ ಹಂಚಿಕೆಯಾಗಿದೆ. ಮಹಾರಾಷ್ಟ್ರದ 48 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 25ರಲ್ಲಿ ಹಾಗೂ ಶಿವಸೇನೆ 23ರಲ್ಲಿ ಸ್ಪರ್ಧೆ ನಡೆಸಲಿವೆ. 2014ರಲ್ಲಿ ಬಿಜೆಪಿ 26, ಶಿವಸೇನೆ 22 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. 2019ರ ವಿಧಾನಸಭಾ ಚುನಾವಣೆಯ 288 ಕ್ಷೇತ್ರಗಳ ಪೈಕಿ ಬಿಜೆಪಿ 145 ಹಾಗೂ ಶಿವಸೇನೆ 143 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿವೆ ಎಂದು ಮೂಲಗಳು ಮಾಹಿತಿ ಮಾಡಿವೆ.

ಬಿಜೆಪಿ ಹಾಗೂ ಶಿವಸೇನೆ ಕಳೆದ ಮೂರು ದಶಕಗಳಿಂದ ಮೈತ್ರಿಯಾಗಿ ಚುನಾವಣೆ ಎದುರಿಸಿದ್ದವು. ಆದರೆ 2014ರ ವಿಧಾನಸಭೆ ಚುನಾವಣೆಯಲ್ಲಿ ಸೀಟು ಸಂಚಿಕೆಯಲ್ಲಿ ಉಂಟಾದ ಭಿನ್ನಮತದಿಂದಾಗಿ ಎರಡು ಪಕ್ಷಗಳು ಪ್ರತ್ಯೇಕವಾಗಿ ಚುನಾವಣೆ ಎದುರಿಸಬೇಕಾಯಿತು. ಇದರಿಂದಾಗಿ ಬಿಜೆಪಿ ಹಾಗೂ ಅದರ ಮಿತ್ರಪಕ್ಷಗಳು 123 ಸ್ಥಾನ ಗೆದ್ದರೆ, ಶಿವಸೇನೆ ಕೇವಲ 63 ಕ್ಷೇತ್ರವನ್ನು ಗೆದ್ದುಕೊಂಡಿತ್ತು. ಯಾವುದೇ ಪಕ್ಷಕ್ಕೆ ಬಹುಮತ ಸಿಗದ ಕಾರಣ ಹೈಕಮಾಂಡ್ ಬಿಜೆಪಿ, ಶಿವಸೇನೆ ಮೈತ್ರಿಗೆ ಅನುಮತಿ ನೀಡಿತ್ತು.

ಪ್ರಧಾನಿ ಮೋದಿ ಮೈತ್ರಿ ಧರ್ಮ ಪಾಲಿಸುತ್ತಿಲ್ಲ. ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುತ್ತೇವೆ ಎಂದು ಶಿವಸೇನೆ ನಾಯಕರು ಕೆಲವು ತಿಂಗಳುಗಳಿಂದ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರು. ಆದರೆ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು, ಲೋಕಸಭೆ ಚುನಾವಣೆಯನ್ನು ಶಿವಸೇನೆ ಜೊತೆಗೆ ಎದುರಿಸುತ್ತೇವೆ ಎಂದು ಹೇಳುತ್ತಿದ್ದರು.

ರಾಷ್ಟ್ರ ರಾಜಕಾರಣದಲ್ಲಿ ಮಹಾಘಟಬಂಧನ್ ನಡೆಯುತ್ತಿದ್ದು, ಉತ್ತರ ಪ್ರದೇಶದಲ್ಲಿ ಪರಸ್ಪರ ವಿರೋಧಿಗಳಾದ ಎಸ್‍ಪಿ ಮತ್ತು ಬಿಎಸ್‍ಪಿ ಮೈತ್ರಿ ಮಾಡಿಕೊಂಡಿದೆ. ದೇಶದ ಉಳಿದ ಕಡೆಗಳಲ್ಲೂ ಕಾಂಗ್ರೆಸ್ ಸ್ಥಳೀಯ ಪಕ್ಷಗಳ ಜೊತೆ ಮೈತ್ರಿ ಮಾತುಕತೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಿದರೆ ರಾಷ್ಟ್ರಮಟ್ಟದಲ್ಲಿ ನಮಗೆ ಹೊಡೆತ ನೀಡಬಹುದು ಎನ್ನುವುದನ್ನು ಅರಿತ ಬಿಜೆಪಿ ಹೈಕಮಾಂಡ್ ಮಹಾರಾಷ್ಟ್ರದಲ್ಲಿ ಮೈತ್ರಿಗೆ ಒಪ್ಪಿಗೆ ನೀಡಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *