40ನೇ ಸಂಸ್ಥಾಪನಾ ದಿನ – ಬಿಜೆಪಿ ಕಾರ್ಯಕರ್ತರಿಗೆ ಮೋದಿಯಿಂದ ಐದು ಟಾಸ್ಕ್

Public TV
2 Min Read

ನವದೆಹಲಿ : ಕೊರೊನಾ ಭೀತಿಯ ನಡುವೆ 40ನೇ ಸಂಸ್ಥಾಪನಾ ದಿನ ಆಚರಿಸುತ್ತಿರುವ ಬಿಜೆಪಿ ಕಾರ್ಯಕರ್ತರಿಗೆ ಪ್ರಧಾನಿ ನರೇಂದ್ರ ಮೋದಿ ಐದು ಕೆಲಸಗಳನ್ನು ಮಾಡುವಂತೆ ಕರೆ ನೀಡಿದ್ದಾರೆ.

ಇಂದು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕೊರೊನಾ ವಿರುದ್ಧ ಹೋರಾಟ ಸುದೀರ್ಘವಾಗಿದೆ. ಇಡೀ ದೇಶ ಒಗ್ಗಟ್ಟಾಗಿ ಕೊರೊನಾ ವಿರುದ್ಧ ಹೋರಾಟ ನಡೆಸುತ್ತಿದೆ. ಪ್ರತಿ ಹಂತದಲ್ಲೂ ಜನರು ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ ಎಂದು ತಿಳಿಸಿದರು.

ಭಾರತದ ಕೋಟಿ ಕೋಟಿ ಜನರಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದ್ದರೂ ಕಡಿಮೆ. ಜನತಾ ಕರ್ಫ್ಯೂ ಭಾರತ ಲಾಕ್ ಡೌನ್ ಗೆ ದೊಡ್ಡ ಬೆಂಬಲ ನೀಡಿದ್ದಾರೆ. ಇಷ್ಟು ದೊಡ್ಡ ದೇಶದಲ್ಲಿ ಜನರು ಸಾಮೂಹಿಕ ಶಕ್ತಿ ಪ್ರದರ್ಶಿಸಿದ್ದಾರೆ. ಬಡವ – ಶ್ರೀಮಂತ, ವಿದ್ಯಾವಂತ – ಅವಿದ್ಯಾವಂತ ಎನ್ನುವ ಯಾವ ಭೇದ – ಭಾವ ಇಲ್ಲದೇ ಎಲ್ಲರೂ ನಿನ್ನೆ ದೀಪ ಬೆಳಗಿ ಕೊರೊನಾ ಹೋರಾಟದಲ್ಲಿ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಈ ಮೂಲಕ 130 ಕೋಟಿ ಜನರು ಸುದೀರ್ಘ ಹೋರಾಟಕ್ಕೆ ಸಿದ್ಧವಾಗಿದ್ದಾರೆ. ಕೊರೊನಾ ವಿರುದ್ಧ ಹೋರಾಟ ನಡೆಸುವುದು ಎಲ್ಲರ ಏಕೈಕ ಸಂಕಲ್ಪವಾಗಿದೆ ಎಂದರು.

ಈ ಸಂಕಷ್ಟ ವೇಳೆ ಬಿಜೆಪಿ ಕಾರ್ಯಕರ್ತರು ಜನರ ಸೇವೆ ಹೆಚ್ಚು ಮಾಡಬೇಕಿದೆ ಎಂದ ಪ್ರಧಾನಿ ಮೋದಿ ಐದು ಕಾರ್ಯಗಳನ್ನು ಮಾಡುವಂತೆ ಕರೆ ನೀಡಿದರು.

1. ನಮ್ಮ ನಡುವೆ ಯಾವುದೇ ಬಡವರು ಹಸಿದುಕೊಂಡು ಇರಬಾರದು. ಈ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ನಿರಂತರವಾಗಿ ಬಡವರಿಗೆ ಪಡಿತರ ವಿತರಣೆ ಮಾಡಬೇಕು. ಅಗತ್ಯ ಎನಿಸಿದಲ್ಲಿ ಇತರೇ ಸಂಘ ಸಂಸ್ಥೆಗಳ ಜೊತೆ ಸೇರಿ ಸಹಾಯ ಮಾಡಬೇಕು.

2. ಕೊರೊನಾ ಎನ್ನುವ ಸಾಂಕ್ರಾಮಿಕ ಖಾಯಿಲೆಯಿಂದ ಪಾರಾಗಲು ಮಾಸ್ಕ್ ಅವಶ್ಯಕವಾಗಿದ್ದು, ಒಬ್ಬ ಕಾರ್ಯಕರ್ತ ಐದು ಜನರಿಗೆ ಮಾಸ್ಕ್ ನೀಡಬೇಕು. ಕುಟುಂಬಸ್ಥರು ಗೆಳೆಯರಿಗೆ ವಿತರಣೆ ನೀಡಬೇಕು.

3. ಬಿಜೆಪಿ ಕಾರ್ಯಕರ್ತರು ತಮ್ಮ ಮತ ಕ್ಷೇತದಲ್ಲಿ ಧನ್ಯವಾದ ಅಭಿಯಾನ ನಡೆಸಬೇಕು. ಕೊರೊನಾ ವಿರುದ್ಧ ಹೋರಾಟ ನಡೆಸುತ್ತಿರುವ ವೈದ್ಯರು, ನರ್ಸ್, ಪೊಲೀಸ್, ಪೌರ ಕಾರ್ಮಿಕರು ಸೇರಿ ತುರ್ತು ಸೇವೆಯಲ್ಲಿರರುವರಿಗೆ ಧನ್ಯವಾದ ಪತ್ರ ಬರೆದು ಕೃತಜ್ಞತೆ ಸಲ್ಲಿಸಬೇಕು.

4. ಕೊರೊನಾ ವೈರಸ್ ಬಗ್ಗೆ ಕಾರ್ಯಕರ್ತರು ಜಾಗೃತಿ ಮೂಡಿಸಬೇಕು. ಒಬ್ಬ ಕಾರ್ಯಕರ್ತ ಆರೋಗ್ಯ ಸೇತು ಆ್ಯಪ್‍ನ್ನು 40 ಜನರ ಮೊಬೈಲ್ ನಲ್ಲಿ ಇನ್ ಸ್ಟಾಲ್ ಮಾಡಿಸಬೇಕು. ಕೊರೊನಾ ವಿರುದ್ಧ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾಹಿತಿ ನೀಡಬೇಕು.

5. ಕೊರೊನಾ ಸಂಕಷ್ಟ ವಿರುದ್ಧ ಹೋರಾಟ ನಡೆಸಲು ಆರ್ಥಿಕವಾಗಿಯೂ ನಾವು ಬಲಿಷ್ಠವಾಗಬೇಕು. ಹೀಗಾಗಿ ಪಿಎಂ ಕೇರ್ಸ್ ನಿಧಿ ಹೆಚ್ಚಿಸಲು ಬಿಜೆಪಿ ಕಾರ್ಯಕರ್ತರು ಪ್ರಯತ್ನ ಮಾಡಬೇಕು. ಬಿಜೆಪಿಯ ಒಬ್ಬ ಕಾರ್ಯಕರ್ತ 40 ಜನರಿಂದ ಪಿಎಂ ಕೇರ್ಸ್ ನಿಧಿಗೆ ಧನ ಸಹಾಯ ಮಾಡಿಸಲು ಪ್ರೇರೇಪಿಸಬೇಕು.

ಸಾಮಾಜಿಕ ಅಂತರ, ಮಾಸ್ಕ್ ಮತ್ತು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಸಹಾಯ ಕಾರ್ಯದಲ್ಲಿ ಭಾಗವಹಿಸಬೇಕು ಎಂದು ಮೋದಿ ಮನವಿ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *