ರಾಮನ ಸ್ಮರಣೆ ಎಲ್ಲಿರುವುದೋ ಅಲ್ಲಿ ಹನುಮನಿರುವನು..ಹನುಮನ ಸ್ಮರಣೆ ಎಲ್ಲಿರುವುದೋ ಅಲ್ಲಿ ರಾಮನಿರುವನು

Public TV
2 Min Read

ರಾಮನ ಸ್ಮರಣೆ ಎಲ್ಲಿರುವುದೋ ಅಲ್ಲಿ ಹನುಮನಿರುವನು..ಹನುಮನ ಸ್ಮರಣೆ ಎಲ್ಲಿರುವುದೋ ಅಲ್ಲಿ ರಾಮನಿರುವನು..ಹೀಗೆ ರಾಮ ಮತ್ತು ಹನುಮ ಇಬ್ಬರು ಒಬ್ಬರನ್ನೊಬ್ಬರು ಬಿಟ್ಟಿರಲಾರದಂತಹ ಆಪ್ತಮಿತ್ರರು, ಗುರು ಶಿಷ್ಯರು. ರಾಮನನ್ನ ಪೂಜಿಸುವುವರು ಹನುಮಂತನನ್ನ ಪೂಜಿಸುತ್ತಾರೆ. ಹನುಮಂತನನ್ನ ಪೂಜಿಸುವವರು ರಾಮನನ್ನ ಪೂಜಿಸೇ ಪೂಜಿಸುತ್ತಾರೆ. ಆದ್ರೆ, ರಾಮ ಹುಟ್ಟಿದ್ದು ಅಯೋಧ್ಯೆ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ. ಆದ್ರೆ, ಹನುಮಂತ ಹುಟ್ಟಿದ್ದು ಎಲ್ಲಿ ಅನ್ನೋದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಕೆಲವರಿಗೆ ಗೊಂದಲಗಳು ಇವೆ.

ಆಂಜನೇಯ ಹುಟ್ಟಿದ್ದು ಕರ್ನಾಟಕದಲ್ಲಿ. ಅಂಜನಾದ್ರಿ ಪರ್ವತದಲ್ಲಿ ಅಂಜನಾದೇವಿ ಹನುಮಂತನಿಗೆ ಜನ್ಮ ನೀಡುತ್ತಾಳೆ. ರಾಮಾಯಣದ ಕಿಷ್ಕಿಂಧಾಕಾಂಡದಲ್ಲಿ ಇದರ ಉಲ್ಲೇಖವಿದೆ. ‘ಕಿಷ್ಕಿಂಧೆ’ ಎಂದರೆ ನಮ್ಮ ರಾಜ್ಯದ ಹಂಪೆಯ ಪ್ರದೇಶ. ಅಪ್ಸರೆಯಾಗಿದ್ದ ಅಂಜನಾ ಋಷಿಮುನಿಗಳ ಶಾಪದಿಂದ ಭೂಮಿಯ ಮೇಲೆ ವಾನರ ಕುಲದಲ್ಲಿ ಜನ್ಮತಾಳಬೇಕಾಯ್ತು. ಆದ್ರೆ, ಗಂಡು ಮಗುವಿಗೆ ಜನ್ಮ ಕೊಟ್ಟರೇ ಮಾತ್ರ ಅವಳ ಶಾಪ ವಿಮೋಚನೆಯಾಗುವಂತಿತ್ತು. ಈ ಸಂದರ್ಭದಲ್ಲಿ ಕೇಸರಿಯೊಂದಿಗೆ ಅಂಜನಾದೇವಿಯ ಮದುವೆಯಾಗುತ್ತೆ. ಆದ್ರೆ, ಅವಳ ಶಾಪ ವಿಮೋಚನೆ ಆಗುವುದಕ್ಕೆ ಗಂಡು ಮಗ ಜನಿಸಬೇಕಿತ್ತು. ಹಾಗಾಗಿ ಶಿವನ ಆರಾಧನೆ ಮಾಡಿ ವರ ಪಡೆದುಕೊಳ್ಳುತ್ತಾಳೆ. ಅದಾದ ಬಳಿಕ ಅತ್ಯಂತ ಬಲಶಾಲಿ ಆಂಜನೇಯನಿಗೆ ಅಂಜನಾದೇವಿ ಜನ್ಮ ನೀಡುತ್ತಾಳೆ. ಹನುಮನ ಜನ್ಮ ಬಗ್ಗೆ ಹಲವು ರೀತಿಯ ಕಥೆಗಳನ್ನ ಹೇಳಲಾಗುತ್ತೆ. ಒಂದು ಕಥೆಯ ಪ್ರಕಾರ ವಾಯುದೇವನೊಂದಿ ಮೋಹಿಸಿ ಅಂಜನಾದೇವಿ ವಾಯುಪುತ್ರನಿಗೆ ಜನ್ಮ ನೀಡಿದಳೆಂದು. ಇನ್ನೊಂದು ಕಥೆಯ ಪ್ರಕಾರ, ಪುತ್ರ ಕಾಮೇಷ್ಠಿಯಾಗ ಮಾಡಿ ಅದರ ಪ್ರಸಾದವನ್ನ ದಾಶ್ರತನು ತನ್ನ ಪತ್ನಿಯರಿಗೆ ನೀಡುವಾಗ ಕಾಗೆಯೊಂದು ಸ್ವಲ್ಪ ಭಾಗ ಕಿತ್ತುಕೊಂಡು ಹೋಗುತ್ತೆ. ಅದನ್ನ ತಪಸ್ಸು ಮಾಡುತ್ತಿದ್ದ ಅಂಜನಾದೇವಿಯ ಕೈಯಲ್ಲಿ ಬೀಳುವಂತೆ ವಾಯುದೇವ ಮಾಡುತ್ತಾನೆ. ಆಗ ಅಂಜನಾದೇವಿ ಗರ್ಭವತಿಯಾಗಿ ಆಂಜನೇಯನಿಗೆ ಅಂಜನಾದ್ರಿ ಬೆಟ್ಟದ ಮೇಲೆ ಜನ್ಮ ನೀಡುತ್ತಾಳೆ.

ಸೂರ್ಯನನ್ನೆ ನುಂಗಲು ಹೋಗಿದ್ದು:
ಆಂಜನೇಯನು ಬಾಲ್ಯದಲ್ಲಿ ಸೂರ್ಯನನ್ನ ಕೆಂಪು ಹಣ್ಣು ಎಂದು ತಿನ್ನಲು ಹಾರಿ ಹೋಗಿದ್ದು ಇದೆ ಅಂಜನಾದ್ರಿ ಪರ್ವತದಿಂದ. ರಾವಣ ಸೀತೆಯನ್ನ ಅಪಹರಿಸಿದಾಗ, ಸೀತೆಯ ಸುಳಿವುಗಳನ್ನು ಹುಡುಕುತ್ತ ರಾಮ ಲಕ್ಷ್ಮಣರು ಆಗಮಿಸುವ ಸ್ಥಳ ಕಿಷ್ಕಿಂಧೆ. ಈ ಒಂದು ಸ್ಥಳದಲ್ಲಿಯೇ ರಾಮನಿಗೆ ಅವನ ಪರಮ ಭಕ್ತನಾದ ಆಂಜನೇಯನ ಭೇಟಿಯಾಗುತ್ತದೆ.

ಈಗಲೂ ಆಂಜನೇಯನ ದರ್ಶನವಾಗುತ್ತೆ:
ಕೆಲವು ಭಕ್ತರು ಹೇಳುವ ಪ್ರಕಾರ, ಈಗಲೂ ಅಂಜನಾದ್ರಿ ಬೆಟ್ಟದ ಮೇಲೆ ದೊಡ್ಡ ಕೋತಿಯೊಂದಿದೆ. ಅದು ಬೆಳಿಗ್ಗೆ ಮತ್ತು ಸಂಜೆ ದರ್ಶನ ನೀಡುತ್ತೆ. ಅಪರೂಪಕ್ಕೆ ಬಂದು ದರ್ಶನ ಕೊಡುತ್ತೆ. ಅದು ಸಾಕ್ಷಾತ್ ಆಂಜನೇಯನೇ ಅನ್ನೋದು ಭಕ್ತರ ನಂಬಿಕೆ.

ಎಷ್ಟು ದೂರವಿದೆ?
ಬೆಂಗಳೂರಿನಿಂದ 345 ಕಿ.ಮೀ ದೂರವಿದ್ದರೆ ಹಂಪಿಯಿಂದ 18 ಕಿ.ಮೀ., ಗಂಗಾವತಿಯಿಂದ 6 ಕಿಮೀ. ದೂರದಲ್ಲಿ ಅಂಜನಾದ್ರಿ ಪರ್ವತವಿದೆ. ಹಂಪಿಯಿಂದ ಅಂಜನಾದ್ರಿ ಬೆಟ್ಟ ಹತ್ತಿರದಲ್ಲೆ ಇರೋದ್ರಿಂದ 580 ಮೆಟ್ಟಿಲುಗಳನ್ನ ಏರಿ ಅಂಜನಾದ್ರಿ ಬೆಟ್ಟದ ಮೇಲೆ ತಲುಪಿದ ನಂತರ, ಮೆಟ್ಟಿಲು ಏರಿದ ಆಯಾಸವೆಲ್ಲ ಮಾಯವಾಗುತ್ತೆ. ಕಾರಣ, ಅಲ್ಲಿಂದ ಕಾಣುವ ತುಂಗಭದ್ರಾ ನದಿ ಹಾಗೂ ಹಂಪಿಯ ಕೆಲವು ದೇವಾಲಯಗಳು, ಪ್ರಕೃತಿಯ ಸೊಬಗು ಎಲ್ಲವನ್ನೂ ಮರೆಸುತ್ತೆ.

ಅಷ್ಟೇ ಅಲ್ಲದೇ ಇಲ್ಲಿ ಹಲವು ಗುಹೆಗಳು ಇವೆ. ಬೆಟ್ಟದ ಮೇಲೆ ಮಾರುತಿಯ ದೊಡ್ಡ ಸೈನ್ಯ ಕೂಡ ಇದೆ. ಆದ್ರೆ, ಯಾರಿಗೂ ಏನೂ ಮಾಡಲ್ಲ. ಇನ್ನು ಬೆಟ್ಟದ ಮೇಲೆ ಒಂದೇ ಒಂದು ಮರವಿದೆ. ಬೆಟ್ಟದ ಮೇಲೆ ಸೂರ್ಯಾಸ್ತ ನೋಡಿದ್ರೆ ಮನಸ್ಸಿಗೆ ಏನೋ ಆನಂದ ಸಿಗುತ್ತೆ. ನೀವು ಆಂಜನೇಯನ ಭಕ್ತರಾಗಿದ್ದರೇ ಮೊದಲು ಅಂಜನಾದ್ರಿ ಬೆಟ್ಟಕ್ಕೆ ಹೋಗಿ ಅಂಜನಾದೇವಿ, ಹಾಗೂ ಆಂಜನೇಯನ ದರ್ಶನ ಪಡೆಯಿರಿ. 

– ಅರುಣ್ ಬಡಿಗೇರ್

Share This Article
Leave a Comment

Leave a Reply

Your email address will not be published. Required fields are marked *