ಡೆಹ್ರಾಡೂನ್: ಉತ್ತರಾಖಂಡ ಚುನಾವಣೆ ಹಿನ್ನೆಲೆಯಲ್ಲಿ ಸೇನಾಪಡೆಗಳ ಮಾಜಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರ ಸಹೋದರ ನಿವೃತ್ತ ಕರ್ನಲ್ ವಿಜಯ್ ರಾವತ್ ಬುಧವಾರ ಬಿಜೆಪಿ ಸೇರಿದ್ದಾರೆ.
ಈ ವೇಳೆ ಮಾತನಾಡಿದ ವಿಜಯ್ ರಾವತ್, ನಮ್ಮ ತಂದೆ (ಜನರಲ್ ಲಕ್ಷ್ಮಣ್ ಸಿಂಗ್ ರಾವತ್) ಸೇನೆಯಿಂದ ನಿವೃತ್ತರಾದ ನಂತರ ಬಿಜೆಪಿ ಸೇರಿದ್ದರು. ಈಗ ಆ ಅವಕಾಶ ನನಗೆ ಸಿಕ್ಕಿದೆ. ಪ್ರಧಾನಿ ಮೋದಿ ಅವರ ದೂರದೃಷ್ಟಿ ವಿಶಿಷ್ಟವಾದದ್ದು. ಅವರ ಪ್ರತಿ ಕಾರ್ಯವೂ ದೇಶದ ಉನ್ನತಿ ಉದ್ದೇಶದಿಂದ ಕೂಡಿದೆ. ನಾನು ಬಿಜೆಪಿ ಸೇರಲು ಮೋದಿ ಅವರ ಕಾರ್ಯವೇ ಪ್ರೇರಣೆಯಾಗಿದೆ. ಉತ್ತರಾಖಂಡ ಅಭಿವೃದ್ಧಿ ಯೋಜನೆಯೂ ದೂರದೃಷ್ಟಿಯಿಂದ ಕೂಡಿದೆ ಎಂದು ಶ್ಲಾಘಿಸಿದ್ದಾರೆ. ಇದನ್ನೂ ಓದಿ: UP Election- 30 ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ
ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮಾತನಾಡಿ, ಕರ್ನಲ್ ವಿಜಯ್ ರಾವತ್ ಅವರಿಗೆ ಬಿಜೆಪಿಗೆ ಸ್ವಾಗತ. ಜನರಲ್ ಬಿಪಿನ್ ರಾವತ್ ಅವರು ಉತ್ತರಾಖಂಡ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ಸಹೋದರ ಬಿಜೆಪಿ ಸೇರಿದ್ದಕ್ಕೆ ಅಭಿನಂದನೆ ಸಲ್ಲಿಸುತ್ತೇವೆ. ನಾನು ಕೂಡ ಸೈನಿಕರೊಬ್ಬರ ಮಗ ಎಂದು ಹೇಳಿಕೊಳ್ಳಲು ಹೆಮ್ಮೆ ಇದೆ. ಬಿಪಿನ್ ರಾವತ್ ಅವರ ನಿಧನದಿಂದ ಖಾಲಿತನ ಕಾಡುತ್ತಿದೆ. ಆದರೆ ಈಗ ಅವರ ಸಹೋದರ ನಮ್ಮ ಜೊತೆಗಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕರ್ನಲ್ ವಿಜಯ್ ರಾವತ್ ಪುತ್ರ ಕೂಡ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಕುಟುಂಬದ ಮೂರು ತಲೆಮಾರು ಸೇನೆಯಲ್ಲಿ ದುಡಿದಿದೆ ಎಂದು ಹೊಗಳಿದ್ದಾರೆ. ಇದನ್ನೂ ಓದಿ: ಎಸ್‌ಪಿ ಮುಖ್ಯಸ್ಥ ಮುಲಾಯಂ ಸಿಂಗ್ ಸೊಸೆ, ಅಖಿಲೇಶ್ ಯಾದವ್ ನಾದಿನಿ ಬಿಜೆಪಿ ಸೇರ್ಪಡೆ
ಜನರಲ್ ಬಿಪಿನ್ ರಾವತ್ ಅವರು ಉತ್ತರಾಖಂಡ ಮೂಲದವರು. ಇತ್ತೀಚೆಗೆ ತಮಿಳುನಾಡಿನಲ್ಲಿ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಬಿಪಿನ್ ರಾವತ್, ಪತ್ನಿ ಹಾಗೂ 12 ಮಂದಿ ಸಾವನ್ನಪ್ಪಿದ್ದರು.