ಶಿರಸಿ ತಾಲೂಕಿನ ಬಿಳೂರಲ್ಲಿ ಭರ್ಜರಿ ಕೆರೆ ಬೇಟೆ

1 Min Read

– ವಿವಿಧ ಊರುಗಳಿಂದ ಬಂದ 800ಕ್ಕೂ ಹೆಚ್ಚು ಜನ ಕೆರೆ ಬೇಟೆಯಲ್ಲಿ ಭಾಗಿ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಶಿರಸಿ (Sirsi) ತಾಲೂಕಿನ ಬಿಳೂರು ಗ್ರಾಮದಲ್ಲಿ ಕೆರೆ ಬೇಟೆ (Kere Bete) ಅದ್ಧೂರಿಯಾಗಿ ನಡೆಯಿತು. ದೂರದ ಊರುಗಳಿಂದ 800 ಕ್ಕೂ ಹೆಚ್ಚು ಜನ ಬಿದಿರಿನ ಕಡ್ಡಿಗಳಿಂದ ತಯಾರಿಸಿದ ಕುಣಿಗಳನ್ನು ತೆಗೆದುಕೊಂಡು ಮೀನು ಶಿಕಾರಿಗೆ ಇಳಿದಿದ್ದರು.

ಬಿಳೂರು ಶ್ರೀ ಕಲ್ಲೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದ ನಿಮಿತ್ತ ಈ ಕೆರೆ ಬೇಟೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಪ್ರತಿ ಕುಣಿಗೆ 800 ರೂಪಾಯಿ ಶುಲ್ಕ ನಿಗದಿಪಡಿಸಲಾಗಿತ್ತು. ಮೀನು ಹಿಡಿಯಲು ಭಾಗವಹಿಸಿದ ಮೀನುಗಾರರಲ್ಲಿ ಕೆಲವರಿಗೆ ಉತ್ತಮ ಪ್ರಮಾಣದಲ್ಲಿ ಮೀನು ಸಿಕ್ಕಿದ್ದು, ಇನ್ನೂ ಕೆಲವರಿಗೆ ಕಡಿಮೆ ಪ್ರಮಾಣದಲ್ಲಿ ಸಿಕ್ಕಿರುವುದು ಕಂಡುಬಂತು. ಕೆಲವರಿಗೆ ಮೀನು ಸಿಗದೇ ಹಿಂತಿರುಗಬೇಕಾದ ಪರಿಸ್ಥಿತಿಯೂ ಎದುರಾಯಿತು. ಆದರೂ ಮೀನುಗಾರರು ಯಾವುದೇ ಅಸಮಾಧಾನ ವ್ಯಕ್ತಪಡಿಸದೆ, ದೇವಸ್ಥಾನದ ಜೀರ್ಣೋದ್ಧಾರಕ್ಕೆ ತಮ್ಮ ಸಹಾಯವಾಗಿದೆ ಎಂದು ಸಂತೋಷದೊಂದಿಗೆ ತೆರಳಿದರು. ಇದನ್ನೂ ಓದಿ: ರಂಜಾನ್‌ ಸಂಭ್ರಮ: ಮುಸ್ಲಿಂ ಬಾಂಧವರ ಜೊತೆ ಸಾಮೂಹಿಕ ಪ್ರಾರ್ಥನೆಯಲ್ಲಿ ಸಿಎಂ ಭಾಗಿ

ಕಳೆದ ವರ್ಷ ಇದೇ ಕೆರೆ ಬೇಟೆಯಲ್ಲಿ ಹೆಚ್ಚಿನ ಪ್ರಮಾಣದ ಮೀನು ಸಿಕ್ಕಿದ್ದನ್ನು ಜನ ಸ್ಮರಿಸಿದರು. ಈ ಕಾರ್ಯಕ್ರಮವನ್ನು ಊರಿನ ಮುಖಂಡರು ಹಾಗೂ ಸಾರ್ವಜನಿಕರು ಅತ್ಯಂತ ಅಚ್ಚುಕಟ್ಟಾಗಿ ಆಯೋಜಿಸಿದ್ದು, ಯಾವುದೇ ಅಹಿತಕರ ಘಟನೆಗಳಿಲ್ಲದೇ ಶಾಂತಯುತವಾಗಿ ಮುಕ್ತಾಯಗೊಂಡಿತು. ಒಟ್ಟಾರೆ ಬಿಳೂರಿನ ಕೆರೆ ಬೇಟೆ ಸಂಭ್ರಮವು ಸಂಪ್ರದಾಯ, ಸಹಕಾರ ಮತ್ತು ಭಕ್ತಿಯ ಸಂಕೇತವಾಗಿ ಮತ್ತೊಮ್ಮೆ ಯಶಸ್ವಿಯಾಗಿ ನೆರವೇರಿತು.

Share This Article