ಕೆರೆಗಳ ಬಫರ್ ಝೋನ್ ಕಡಿಮೆ ಮಾಡೋ ವಿಧೇಯಕ ವಿಧಾನ ಪರಿಷತ್‌ನಲ್ಲಿ ಪಾಸ್

Public TV
3 Min Read

ಬೆಂಗಳೂರು: ಕೆರೆಗಳ ವಿಸ್ತೀರ್ಣ ಅನುಗುಣವಾಗಿ ಬಫರ್ ಝೋನ್ (Buffer Zone Of Lakes) ನಿಗದಿಗೊಳಿಸುವ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ತಿದ್ದುಪಡಿ ಕಾಯ್ದೆಗೆ (Karnataka Lake Conservation and Development Authority Amendment Act) ವಿರೋಧ ಪಕ್ಷದ ಸದಸ್ಯರ ಸಭಾತ್ಯಾಗ ನಡುವೆಯೂ ವಿಧೇಯಕ ವಿಧಾನ ಪರಿಷತ್‌ನಲ್ಲಿ (Legislative Council)  ಪಾಸ್ ಆಗಿದೆ.

ವಿಧೇಯಕ ಮಂಡಿಸಿ ಮಾತನಾಡಿದ ಸಣ್ಣ ನೀರಾವರಿ ಇಲಾಖೆ ಸಚಿವ ಎನ್‌ಎಸ್ ಬೋಸರಾಜು, ರಾಜ್ಯದ ಕೆರೆಗಳ ಬಫರ್ ಝೋನ್ 30 ಮೀಟರ್ ನಿಗದಿ ಮಾಡಲಾಗಿತ್ತು. ಇದೀಗ ಕೆರೆಗಳ ಅನುಗುಣವಾಗಿ ಬಫರ್ ಜೋನ್ ನಿಗದಿಪಡಿಸಲಾಗುತ್ತಿದೆ. 5 ಗುಂಟೆವರೆಗೆ 0 ಮೀಟರ್, 5 ಗುಂಟೆಯಿಂದ 1 ಎಕರೆಯವರೆಗೆ 3 ಮೀಟರ್, 1-10 ಎಕರೆಯವರೆಗೆ 6 ಮೀಟರ್, 10-25 ಎಕರೆಯವರೆಗೆ 12 ಮೀಟರ್, 25 -100 ಎಕರೆಯವರೆಗೆ 24 ಮೀಟರ್ ಮತ್ತು 100 ಎಕರೆಗಿಂತ ದೊಡ್ಡದಾದ ಕೆರೆಗಳಿಗೆ 30 ಮೀಟರ್ ಬಫರ್ ವಲಯ ನಿಗದಿ ಮಾಡಲಾಗಿದೆ. ಬಫರ್ ಝೋನ್‌ಗಳಲ್ಲಿ ರಸ್ತೆ, ಸೇತುವೆ ಸೇರಿದಂತೆ ಮೂಲಸೌಕರ್ಯ ಅಭಿವೃದ್ದಿಪಡಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು. ಇದನ್ನೂ ಓದಿ: ಅವೈಜ್ಞಾನಿಕ ಗ್ಯಾರಂಟಿಗಳಿಂದ ರಾಜ್ಯದ ಆದಾಯ ಖೋತಾ: ಪ್ರಹ್ಲಾದ್ ಜೋಶಿ ಆರೋಪ

ಇದಕ್ಕೆ ಬಿಜೆಪಿ ಸದಸ್ಯರು ವಿರೋಧ ಮಾಡಿದರು. ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಇಂದು ವೇಗವಾಗಿ ಬೆಂಗಳೂರು ಬೆಳೆಯುತ್ತಿದೆ. ಜನಸಂಖ್ಯೆ ಅನುಗುಣವಾಗಿ ಮೂಲಸೌಕರ್ಯ ಅಭಿವೃದ್ಧಿಯಾಗುತ್ತಿಲ್ಲ. ಕೆರೆ ಸಂರಕ್ಷಣೆ ಕಾಯ್ದೆಗೆ ತಿದ್ದುಪಡಿಯಿಂದ ಬಫರ್ ವಲಯದ ಗಾತ್ರ ಕಡಿಮೆಯಾಗುವುದರಿಂದ ಕೆರೆಗಳ ನಾಶವಾಗುವ ಸಾಧ್ಯತೆಯಿದೆ. ಬೆಂಗಳೂರು ನಗರದಲ್ಲಿ ಮಳೆ ಬಂದರೆ ಮನೆಗಳಿಗೆ ನೀರು ನುಗ್ಗುತ್ತಿದೆ. ಕೆರ ಪ್ರದೇಶ ಅತಿಕ್ರಮಿಸಿದ ಪರಿಣಾಮ ರಸ್ತೆ ಹಾಗೂ ಮನೆಗಳಿಗೆ ನೀರು ನುಗ್ಗುತ್ತಿದೆ. ರಾಜಕಾಲುವೆ ತೆರವು ವಿಚಾರದಲ್ಲಿ ಎಲ್ಲಾ ಸರ್ಕಾರಗಳು ವಿಫಲವಾಗಿವೆ ಎಂಬುದನ್ನ ಒಪ್ಪಿಕೊಳ್ಳಬೇಕಾಗಿದೆ ಎಂದರು. ಇದನ್ನೂ ಓದಿ: ದೇವೇಗೌಡರನ್ನು ಭೇಟಿಯಾದ ಎನ್‌ಡಿಎ ಉಪ ರಾಷ್ಟ್ರಪತಿ ಅಭ್ಯರ್ಥಿ

ಕೆರೆ ಸುರಕ್ಷತೆ ಸಂಬಂಧಿಸಿದಂತೆ ಕೆ.ಟಿ.ರಾಮಸ್ವಾಮಿ, ಲಕ್ಷ್ಮಣ್ ರಾವ್, ಯಲ್ಲಪ್ಪ, ಹಾಗೂ ಕೋಳಿವಾಡ ಅವರು ನೀಡಿದ ವರದಿಯನ್ನ ಅಧ್ಯಯನ ನಡೆಸಬೇಕಿದೆ. ಹೀಗಾಗಿ ಇದನ್ನ ಜಂಟಿ ಸದನ ಸಮಿತಿಗೆ ನೀಡಬೇಕಿದೆ ಎಂದು ಆಗ್ರಹಿಸಿದರು. ಸಿ.ಟಿ ರವಿ, ರವಿಕುಮಾರ್ ಸೇರಿ ಬಿಜೆಪಿ ಸದಸ್ಯರು ಬಿಲ್ ವಿರೋಧ ಮಾಡಿ ಜಂಟಿ ಸದನ ಸಮಿತಿ ರಚನೆ ಮಾಡುವಂತೆ ಒತ್ತಾಯ ಮಾಡಿದರು. ಇದನ್ನೂ ಓದಿ: ಪೋಕ್ಸೊ ಪ್ರಕರಣದಲ್ಲಿ ಮಹಿಳೆಗೆ 20 ವರ್ಷ ಜೈಲು

ಬಳಿಕ ಮಾತನಾಡಿದ ಸಚಿವ ಎನ್‌ಎಸ್ ಬೋಸರಾಜು, ಕೆರೆಗಳ ಸಂರಕ್ಷಣೆ ಸರ್ಕಾರದ ಆದ್ಯತೆಯಾಗಿದೆ. ರಾಜ್ಯದಲ್ಲಿ 41,849 ಕೆರೆಗಳಿವೆ. 35,985 ಕೆರೆಗಳ ಸರ್ವೇ ಕಾರ್ಯ ಮುಗಿದಿದ್ದು, 5,687 ಕೆರೆಗಳ ಸರ್ವೇ ಬಾಕಿಯಿದೆ. ಒತ್ತುವರಿಯಾದ 13,644 ಕೆರೆಗಳ ಪೈಕಿ 7,987 ಕೆರೆಗಳಲ್ಲಿ ಒತ್ತುವರಿ ತೆರವುಗೊಳಿಸಲಾಗಿದೆ. 5,687 ಕೆರೆಗಳ ಒತ್ತುವರಿ ತೆರವು ಮಾಡಬೇಕಿದೆ. ಪ್ರತಿ ತಿಂಗಳು ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳು ಸಭೆ ನಡೆಸಿ ತೆರವು ಕಾರ್ಯ ಚುರುಕುಗೊಳಿಸಲಾಗಿದೆ ಎಂದು ವಿವರಿಸಿದರು. ಇದನ್ನೂ ಓದಿ: ವಯನಾಡ್ ಲೋಕಸಭಾ ಕ್ಷೇತ್ರದ ಮೆಪ್ಪಾಡಿಗೆ ಕರ್ನಾಟಕ ಸರ್ಕಾರದಿಂದ 10 ಕೋಟಿ ಹಣ

ಇಂದು ಬೆಂಗಳೂರು ನಗರದಲ್ಲಿರುವ ಕೆರೆಗಳಲ್ಲಿ ಎನ್‌ಜಿಟಿ ಆದೇಶದಂತೆ 30 ಮೀಟರ್ ಬಫರ್ ಜೋನ್ ಇಲ್ಲವಾಗಿದೆ. ಕೆರೆಗಳ ಸಂರಕ್ಷತೆ ಜೊತೆ ಮೂಲಸೌಕರ್ಯ ಅಭಿವೃದ್ಧಿ ಪಡಿಸುವುದು ತಿದ್ದುಪಡಿ ವಿಧೇಯಕದ ಉದ್ದೇಶವಾಗಿದೆ. ಹೀಗಾಗಿ ಮಸೂದೆಯನ್ನ ಅಂಗೀಕರಿಸಬೇಕೆಂದು ಮನವಿ ಮಾಡಿದರು. ತಿದ್ದುಪಡಿ ಕಾಯ್ದೆಗೆ ವಿರೋಧ ಪಕ್ಷದ ಸದಸ್ಯರು ವಿರೋಧಿಸಿ ಸಭಾತ್ಯಾಗ ಮಾಡಿದರು. ಅಂತಿಮವಾಗಿ ವಿಧೇಯಕ ಅಂಗೀಕಾರವಾಯಿತು. ಇದನ್ನೂ ಓದಿ: ಸಿದ್ದರಾಮಯ್ಯ ನಮಗೆ ಸಿಎಂ ಅಲ್ಲ, ನಮಗೆ ಡಿಕೆಶಿಯೇ ಸಿಎಂ: ಅಶೋಕ್‌

Share This Article