‘ಉಗ್ರ’ ಎಂದು ಘೋಷಿಸಲು ಅನುಮತಿ ನೀಡೋ ಮಸೂದೆ ಲೋಕಸಭೆಯಲ್ಲಿ ಪಾಸ್

Public TV
2 Min Read

ನವದೆಹಲಿ: ಭಯೋತ್ಪಾದಕ ಎಂದು ಘೋಷಿಸಲು ಅನುಮತಿ ನೀಡುವ ಕಾನೂನು ಬಾಹಿರ ಚಟುವಟಿಕೆ(ತಡೆ) ತಿದ್ದುಪಡಿ ಮಸೂದೆ- 2019 ಲೋಕಸಭೆಯಲ್ಲಿ ಪಾಸ್ ಆಗಿದೆ.

ಭಯೋತ್ಪಾದನೆ ವಿರುದ್ಧ ಇನ್ನಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಲು ಅನುವು ಮಾಡಿಕೊಡುವ ಮಸೂದೆಯ ಪರವಾಗಿ ಲೋಕಸಭೆಯಲ್ಲಿ 287 ಮತ ಬಂದಿದ್ದು, ಈ ಮೂಲಕ ಮಸೂದೆ ಅಂಗೀಕಾರವಾಗಿದೆ.

ಮಸೂದೆಯ ಬಗ್ಗೆ ಸುದೀರ್ಘ ಚರ್ಚೆ ವೇಳೆ ಅಮಿತ್ ಶಾ, ಭಯೋತ್ಪಾದನೆ ಬಗ್ಗೆ ಸರ್ಕಾರ ಶೂನ್ಯ ಸಹನೆ ನೀತಿ ಅನುಸರಿಸುತ್ತಿದೆ ಎಂದರು. ಅಲ್ಲದೆ ಈ ವಿಚಾರವಾಗಿ ಯಾವುದೇ ರೀತಿಯ ರಾಜಕಾರಣ ಮಾಡುವುದಿಲ್ಲ. ಭಯೋತ್ಪಾದನೆ ಮತ್ತು ಕಾನೂನು ಬಾಹಿರ ಚಟುವಟಿಕೆಗಳನ್ನು ನಿಗ್ರಹಿಸಲು ಎನ್‍ಡಿಎ ಸರಕಾರ ಕಠಿಣ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಿದೆ ಎಂದು ತಿಳಿಸಿದರು.

ಭಯೋತ್ಪಾದನೆ ಎಂಬುದು ಒಂದು ಸಂಸ್ಥೆಯಲ್ಲ, ಅದು ಒಬ್ಬ ವ್ಯಕ್ತಿಯ ಮನಸ್ಥಿತಿ. ಆದರಿಂದ ಭಯೋತ್ಪಾದನೆಯನ್ನು ಮಟ್ಟಹಾಕಬೇಕಿದೆ. ವ್ಯಕ್ತಿಯೊಬ್ಬನನ್ನು ಭಯೋತ್ಪಾದಕನೆಂದು ಘೋಷಿಸುವ ಕಾನೂನು ಅಗತ್ಯವಿದೆ. ವಿಶ್ವಸಂಸ್ಥೆ, ಅಮೆರಿಕ, ಪಾಕಿಸ್ತಾನ, ಚೀನಾ ಇಸ್ರೇಲ್, ಐರೋಪ್ಯ ಒಕ್ಕೂಟ, ಹೀಗೆ ಪ್ರತಿಯೊಂದು ದೇಶಗಳು ಇಂತಹ ಕಾನೂನು ಹೊಂದಿವೆ. ಆದ್ದರಿಂದ ನಮಗೂ ಈ ಕಾನೂನಿನ ಅಗತ್ಯವಿದೆ. ನಾವು ಉಗ್ರ ಸಂಘಟನೆಯನ್ನು ಬ್ಯಾನ್ ಮಾಡಿದರೆ, ಉಗ್ರರು ಸುಲಭವಾಗಿ ಇನ್ನೊಂದು ಸಂಘಟನೆಯನ್ನು ಕಟ್ಟುತ್ತಾರೆ ಎಂದು ಅಮಿತ್ ಶಾ ನುಡಿದರು.

ಉಗ್ರರಿಗೆ ಹಣಕಾಸು ನೀಡುವುದು ಅಥವಾ ಉಗ್ರರ ಪರವಾಗಿ ಬರೆಯುವ ವ್ಯಕ್ತಿಗಳನ್ನು ಹಾಗೂ ಉಗ್ರರಿಗೆ ಸಹಾಯ ಮಾಡುವವರನ್ನು ಭಯೋತ್ಪಾದಕರೆಂದೇ ಘೋಷಿಸಲಾಗುವುದು ಎಂದು ವಿಧೇಯಕದಲ್ಲಿ ಉಲ್ಲೇಖಿಸಲಾಗಿದೆ. ನಗರ ನಕ್ಸಲರ ವಿರುದ್ಧ ಯಾವುದೇ ರಿಯಾಯಿತಿ ತೋರುವುದಿಲ್ಲ ಎಂದು ಶಾ ಹೇಳಿದರು. ಹಾಗೆಯೇ ಸಾಮಾಜಿಕ ಕಾರ್ಯಕರ್ತರನ್ನು ನಾವು ವಿರೋಧಿಸುವುದಿಲ್ಲ. ಯಾಕೆಂದರೆ ಅವರಿಂದ ಸಮಾಜದಲ್ಲಿ ಕೆಲ ಒಳ್ಳೆಯ ಕೆಲಸಗಳು ಆಗುತ್ತಿವೆ. ಅವರು ಸಮಾಜಕ್ಕೆ ಹಿತವಲ್ಲದ ಕೆಲಸಗಳ ವಿರುದ್ಧ ಧ್ವನಿ ಎತ್ತುತ್ತಾರೆ ಎಂದು ಹೇಳಿದರು.

ಈ ಸಂಬಂಧ ಕಾನೂನನ್ನು ಯಾರು ಮಾಡಿದ್ದಾರೆ ಎಂದು ಯಾರೂ ಯೋಚಿಸುವುದಿಲ್ಲ. ಆದರೆ ಇರುವ ಕಾನೂನನ್ನೇ ನಾವು ಮತ್ತಷ್ಟು ಬಲಪಡಿಸಲು ಹೊರಟಾಗ ನಮ್ಮನ್ನು ದೂಷಿಸುತ್ತೀರಿ. ವಾಸ್ತವದಲ್ಲಿ ಯುಎಪಿಎ ಕಾನೂನು ತಂದವರು ನೀವೇ. ಆದರೆ ನೀವು ಅಧಿಕಾರದಲ್ಲಿದ್ದಾಗ ತಂದ ಕಾನೂನನ್ನೇ ಈಗ ನಾವು ಮತ್ತಷ್ಟು ಬಲಿಷ್ಠಗೊಳಿಸುತ್ತಿದ್ದೇವೆ ಅಷ್ಟೆ ಎಂದು ಈ ವೇಳೆ ಅಮಿತ್ ಶಾ ಲೋಕಸಭೆಯಲ್ಲಿ ಪ್ರತಿಪಾದಿಸಿದರು.

ಉಗ್ರ ಚಟುವಟಿಕೆ ನಿಗ್ರಹ ವಿಷಯದಲ್ಲಿ ನಾವು ರಾಜಕೀಯವನ್ನು ಮೀರಿ ಕೆಲಸ ಮಾಡಬೇಕು. ಆಗ ಈ ಕಾಯ್ದೆ ನಮ್ಮ ತನಿಖಾ ಸಂಸ್ಥೆಗಳನ್ನು ಉಗ್ರರಿಗಿಂತ ನಾಲ್ಕು ಹೆಜ್ಜೆ ಮುಂದಿರುಸುತ್ತದೆ. ಯಾವ ಸರ್ಕಾರವಿದ್ದರೂ ಕೂಡ ಭಯೋತ್ಪಾದನೆ ವಿರುದ್ಧ ಇರುತ್ತದೆ. ಯಾವ ಪಕ್ಷ ಅಧಿಕಾರದಲ್ಲಿದ್ದರೂ ವ್ಯತ್ಯಾಸವಾಗುವುದಿಲ್ಲ ಎಂದರು.

Share This Article
Leave a Comment

Leave a Reply

Your email address will not be published. Required fields are marked *