ಕೊರೊನಾ ನಿರ್ವಹಣೆ- ಮೋದಿಯನ್ನ ಹೊಗಳಿದ ಬಿಲ್ ಗೇಟ್ಸ್

Public TV
1 Min Read

ನವದೆಹಲಿ: ವಿಶ್ವಾದ್ಯಂತ ಕೊರೊನಾ ವೈರಸ್‍ಗೆ ಭಾರೀ ಪ್ರಮಾಣದ ಸಾವು-ನೋವು ಸಂಭವಿಸಿದೆ. ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಎರಡನೇ ದೇಶವಾಗಿರುವ ಭಾರತದಲ್ಲಿ ಕೋವಿಡ್-19 ಹೆಚ್ಚಾಗಿ ಹರಡದಂತೆ ತಡೆಯಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಶ್ರಮಿಸಿದೆ. ಇದಕ್ಕೆ ಮೈಕ್ರೋಸಾಫ್ಟ್ ಸಹ ಸ್ಥಾಪಕ, ಜಗತ್ತಿನ ಶ್ರೀಮಂತ ಉದ್ಯಮಿ ಬಿಲ್ ಗೇಟ್ಸ್ ಪತ್ರ ಬರೆದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹೆಮ್ಮಾರಿ ಕೊರೊನಾ ವೈರಸ್‍ನಿಂದ ದೇಶದ ಜನರನ್ನು ಪಾರು ಮಾಡಲು ಪ್ರಧಾನಿ ಮೋದಿ ಇಡೀ ಭಾರತವನ್ನೇ ಲಾಕ್‍ಡೌನ್ ಮಾಡಿರುವುದು ಸ್ವಾಗತಾರ್ಹ. ಇದರಿಂದಾಗಿ ಭಾರತದಲ್ಲಿ ಸೋಂಕಿತರ ಪತ್ತೆ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಬಿಲ್ ಗೇಟ್ಸ್ ಶ್ಲಾಘಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನಾಯಕತ್ವಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಬಿಲ್ ಗೇಟ್ಸ್, ”ಕೊರೊನಾ ಸೃಷ್ಟಿಸಿದ ಸಂಕಷ್ಟದ ವೇಳೆ ಭಾರತದಲ್ಲಿ ನಿಮ್ಮ ನಾಯಕತ್ವದಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ಸ್ವಾಗತಿಸುತ್ತೇವೆ. ದೇಶದಲ್ಲಿ ಕೊರೊನಾ ಹರಡಲು ಕಾರಣವಾದ ಹಾಟ್‍ಸ್ಪಾಟ್‍ಗಳನ್ನು ಗುರುತಿಸುವುದು, ಸೋಂಕಿತರನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡುವುದು, ರೋಗಿಗಳೊಂದಿಗೆ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ಹೊಂದಿದ್ದ ವ್ಯಕ್ತಿಗಳಿಗೆ 14 ದಿನಗಳ ಕಾಲ ಹೋಮ್ ಕ್ವಾರಂಟೈನ್ ಕಡ್ಡಾಯ ಮಾಡಿರುವುದು ಕೊರೊನಾ ವೈರಸ್ ಕಡಿಮೆಯಾಗಲು ಕಾರಣವಾಗಿದೆ. ಇದು ದೇಶದ ಜನರ ಆರೋಗ್ಯವನ್ನು ಕಾಪಾಡಲು ಸಹಕಾರಿಯಾಗಲಿದೆ” ಎಂದು ಪತ್ರದ ಮೂಲಕ ತಿಳಿಸಿದ್ದಾರೆ.

ಇಂತಹ ಪರಿಸ್ಥಿತಿಯಲ್ಲಿ ಡಿಜಿಟಲ್ ಮಾಧ್ಯಮಗಳನ್ನು ಬಳಸಿಕೊಂಡ ಬಗ್ಗೆಯೂ ಬಿಲ್ ಗೇಟ್ಸ್, ಅವರು ಪ್ರಧಾನಿ ಮೋದಿ ಅವರನ್ನು ಹೊಗಳಿದ್ದಾರೆ. ”ನೀವು ಕೊರೊನಾ ವಿರುದ್ಧದ ಹೋರಾಟದಲ್ಲಿ ಡಿಟಿಜಿಲ್ ಮೀಡಿಯಾಗೂ ಮೊದಲ ಆದ್ಯತೆ ನೀಡಿದ್ದೀರಿ. ಕೊರೊನಾ ಸೋಂಕಿತರನ್ನು ಪತ್ತೆ ಹಚ್ಚಲು ಆರೋಗ್ಯ ಸೇತು ಆ್ಯಪ್ ಸಿದ್ಧಪಡಿಸಿದ್ದೀರಿ. ನಿಮ್ಮ ಸರ್ಕಾರದ ನಿರ್ಧಾರದಿಂದ ತುಂಬಾ ಸಂತೋಷಗೊಂಡಿರುವೆ” ಎಂದು ಹೇಳಿದ್ದಾರೆ.

”ಎಲ್ಲಾ ಭಾರತೀಯರಿಗೆ ಸಾಕಷ್ಟು ಸಾಮಾಜಿಕ ರಕ್ಷಣೆಯನ್ನು ಖಾತ್ರಿಪಡಿಸಿದ್ದೀರಿ. ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಂಡಿರುವುದಕ್ಕೆ ನನ್ನದೊಂದು ಸಲಾಮ್” ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *