ನವದೆಹಲಿ: ರೌಡಿಶೀಟರ್ ಬಿಕ್ಲು ಶಿವು ಕೊಲೆ ಪ್ರಕರಣದಲ್ಲಿ (Biklu Shivu Case) ಮಾಜಿ ಸಚಿವ ಬೈರತಿ ಬಸವರಾಜ್ಗೆ (Byrati Basavaraj) ಸುಪ್ರೀಂ ಕೋರ್ಟ್ (Supreme Court) ತಾತ್ಕಾಲಿಕ ರಿಲೀಫ್ ನೀಡಿದೆ.
ಬಂಧನ ಭೀತಿಯಲ್ಲಿದ್ದ ಬೈರತಿ ಬಸವರಾಜ್ ಅವರಿಗೆ ಹೈಕೋರ್ಟ್ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ಜಾಮೀನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ ಮು.ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ದ್ವಿ ಸದಸ್ಯ ಪೀಠ, ಮಧ್ಯಂತರ ರಕ್ಷಣೆ ಮುಂದುವರಿಸಿ, ಏ.15ಕ್ಕೆ ಅರ್ಜಿ ವಿಚಾರಣೆ ಮುಂದೂಡಿದೆ. ಅಲ್ಲದೇ ಪ್ರತಿಕ್ರಿಯೆ ನೀಡುವಂತೆ ಬೈರತಿ ಬಸವರಾಜ್ಗೆ ನೋಟಿಸ್ ಜಾರಿ ಮಾಡಿದೆ. ಇದನ್ನೂ ಓದಿ: ಬೈರತಿ ಬಸವರಾಜ್ ವಿರುದ್ಧ ಕೊಲೆ ಕೇಸ್; ಸರ್ಕಾರದ ವಿರುದ್ಧ ಮುಗಿಬಿದ್ದ ಕೇಸರಿ ನಾಯಕರು
ಬೈರತಿ ಬಸವರಾಜ್ಗೆ ಸದ್ಯಕ್ಕೆ ಸುಪ್ರೀಂಕೋರ್ಟ್ನಿಂದ ನಿರಾಳ ಸಿಕ್ಕಂತಾಗಿದೆ. ನಿರೀಕ್ಷಣಾ ಜಾಮೀನು ಈ ಪ್ರಕರಣಕ್ಕೆ ಸೀಮಿತವಾಗಿದೆ, ಇತರೆ ಪ್ರಕರಣಗಳಲ್ಲಿ ಹೈಕೋರ್ಟ್ ಆದೇಶ ಅನ್ವಯವಾಗಲ್ಲ. ಈ ಆದೇಶವನ್ನು ಮೇಲ್ಪಂಕ್ತಿಯಾಗಿ ಬಳಕೆ ಮಾಡದಂತೆಯೂ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.
ರೌಡಿಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬೈರತಿ ಬಸವರಾಜ್ 5ನೇ ಆರೋಪಿಯಾಗಿದ್ದಾರೆ. ಈಗಾಗಲೇ ಈ ಪ್ರಕರಣದಲ್ಲಿ 15 ಜನ ಆರೋಪಿಗಳು ಅರೆಸ್ಟ್ ಆಗಿದ್ದು, ಇವರಲ್ಲಿ ಹಲವರು ಬೈರತಿ ಬಸವರಾಜ್ಗೆ ಆಪ್ತರು ಎನ್ನಲಾಗಿದೆ. ಆರೋಪಿಗಳ ವಿಚಾರಣೆಯಲ್ಲಿ ಸಿಕ್ಕ ಮಾಹಿತಿ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಏನಿದು ಪ್ರಕರಣ?
ಜುಲೈ 15ರಂದು ಬಿಕ್ಲು ಶಿವನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ಶಿವ ಅವರ ತಾಯಿ ವಿಜಯಲಕ್ಷ್ಮಿ ಅವರು ನೀಡಿದ ದೂರು ಆಧರಿಸಿ ಕೆ.ಆರ್.ಪುರ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜ್ ಸೇರಿದಂತೆ ಐವರ ವಿರುದ್ಧ ಭಾರತಿನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಬೈರತಿ ಬಸವರಾಜ್ ಅವರನ್ನು ಭಾರತಿನಗರ ಠಾಣೆಯ ಪೊಲೀಸರು ಎರಡು ಬಾರಿ ವಿಚಾರಣೆ ನಡೆಸಿದ್ದರು. 15 ಆರೋಪಿಗಳನ್ನು ಬಂಧಿಸಿದ್ದರು. ಅದಾದ ಮೇಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಸರ್ಕಾರ ವಹಿಸಿತ್ತು. ಇದನ್ನೂ ಓದಿ: ರೌಡಿಶೀಟರ್ ಬಿಕ್ಲು ಶಿವ ಕೊಲೆ ಕೇಸ್ – ನನಗೂ ಬೈರತಿ ಬಸವರಾಜ್ಗೂ ಸಂಬಂಧವಿಲ್ಲ ಎಂದ ಎ1 ಜಗ್ಗ

