– ರಸ್ತೆಯಲ್ಲಿ ಬಿದ್ದು ನರಳಾಡುತ್ತಲೇ ಮಗಳಿಗೆ ಫೋನ್ ಕರೆ ಮಾಡಿದ್ದ ವ್ಯಕ್ತಿ
ಬೀದರ್: ಮಕರ ಸಂಕ್ರಾಂತಿ ನಿಮಿತ್ತ ಗಾಳಿಪಟ ಹಾರಿಸಿದ ವೇಳೆ ನಿಷೇಧಿತ ಚೀನಿ ಮಾಂಜಾ ದಾರಕ್ಕೆ ಸಿಲುಕಿ ವ್ಯಕ್ತಿಯೊಬ್ಬ ನರಳಾಡಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಬೀದರ್ ಜಿಲ್ಲೆಯ ಚಿಟಗುಪ್ಪ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 65ರ ನಿರ್ಣಾ ಕ್ರಾಸ್ ಬಳಿ ಸಂಭವಿಸಿದೆ.
ಮಗಳನ್ನು ಕರೆದುಕೊಂಡು ಬರಲು ವ್ಯಕ್ತಿ ಬೈಕ್ ಮೇಲೆ ಹೋಗುತ್ತಿದ್ದಾಗ ಚೀನಿ ಮಾಂಜಾ ದಾರಕ್ಕೆ ಕತ್ತು ಸಿಲುಕಿ ಸ್ಥಳದಲ್ಲೇ ವ್ಯಕ್ತಿ ದುರಂತ ಅಂತ್ಯ ಕಂಡಿದ್ದಾರೆ. ಬೈಕ್ ಮೇಲೆ ವೇಗವಾಗಿ ಹೋಗುತ್ತಿದ್ದಾಗ ಕಣ್ಣಿಗೆ ಕಾಣಿಸದ ಚೀನಿ ಮಂಜಾ ದಾರ ಕುತ್ತಿಗೆಗೆ ಸಿಲುಕಿ ವ್ಯಕ್ತಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಅರೆಬರೆ ಕಾಮಗಾರಿ ಮಾಡಿದ್ದ ಚರಂಡಿಯಲ್ಲಿ ಬಿದ್ದು ವೃದ್ಧೆ ಸಾವು
ಬೀದರ್ ತಾಲ್ಲೂಕಿನ ಬೊಂಬಳಗಿ ಗ್ರಾಮದ 48 ವರ್ಷದ ಸಂಜುಕುಮಾರ್ ಸಾವನ್ನಪ್ಪಿದ ದುರ್ದೈವಿ. ಸಂಕ್ರಾಂತಿಯಂದೇ ಚೀನಿ ದಾರದಿಂದ ವ್ಯಕ್ತಿ ಮೃತಪಟ್ಟಿದ್ದು, ಮನ್ನಾಏಖ್ಖೇಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಗಾಳಿಪಟದ ದಾರದಿಂದ ಆಳವಾದ ಗಾಯವಾಗಿ, ಹೊಸಮನಿ ಅವರಿಗೆ ರಕ್ತಸ್ರಾವವಾಯಿತು. ಬೈಕ್ನಿಂದ ಕುಸಿದು ಬಿದ್ದ ಅವರು ಹೇಗೋ ತಮ್ಮ ಮಗಳ ಸಂಖ್ಯೆಗೆ ಕರೆ ಮಾಡಿದ್ದಾರೆ. ರಕ್ತದ ಮಡುವಿನಲ್ಲಿದ್ದ ಹೊಸಮನಿ ತಮ್ಮ ಮಗಳ ಸಂಖ್ಯೆಗೆ ಕರೆ ಮಾಡಲು ಪ್ರಯತ್ನಿಸುತ್ತಿರುವುದನ್ನು ಮನಕಲಕುವ ವೀಡಿಯೊ ತೋರಿಸುತ್ತದೆ. ಇದನ್ನೂ ಓದಿ: ಹೃದಯಾಘಾತದಿಂದ ಬಿಎಸ್ಎಫ್ ಯೋಧ ಸಾವು
ಈಗಾಗಲೇ ಈ ಬಗ್ಗೆ ಜಾಗೃತಿ ಮೂಡಿಸಿದ್ದು, ಚೀನಿ ಮಾಂಜಾ ದಾರವನ್ನು ಮಾರಾಟ ಮಾಡದಂತೆ ಎಲ್ಲರಿಗೂ ಎಚ್ಚರಿಕೆ ನೀಡಲಾಗಿದೆ. ಆದರೂ, ಕೆಲವು ಕಡೆ ಈ ನಿಷೇಧಿತ ಚೀನಿ ಮಾಂಜಾ ದಾರ ಮಾರಾಟ ಮಾಡಲಾಗುತ್ತಿದೆ. ಅಂಥವರ ಮೇಲೆ ಅತ್ಯಂತ ಕಠಿಣ ಕಾನೂನು ಕ್ರಮ ಜರಗಿಸಲಾಗುವುದು ಎಂದು ಬೀದರ್ನಲ್ಲಿ ಎಸ್ಪಿ ಪ್ರದೀಪ್ ಗುಂಟಿ ತಿಳಿಸಿದ್ದಾರೆ.

