ಜಗಳವಾಡುತ್ತ ಬೈಕ್‌ ಚಾಲನೆ – ವಿದ್ಯುತ್‌ ಕಂಬಕ್ಕೆ ಡಿಕ್ಕಿಯಾಗಿ ಯುವತಿ ಸಾವು, ಯುವಕನ ಸ್ಥಿತಿ ಗಂಭೀರ

1 Min Read

ದಾವಣಗೆರೆ: ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಬೈಕ್ (Bike) ಡಿಕ್ಕಿಯಾದ (Accident) ಪರಿಣಾಮ ಅದರಲ್ಲಿದ್ದ ಯುವತಿ ಸಾವನ್ನಪ್ಪಿ, ಯುವಕ ಗಂಭೀರವಾಗಿ ಗಾಯಗೊಂಡ ಘಟನೆ ದಾವಣಗೆರೆಯ (Davanagere) ಹೊರ ವಲಯದ ಮಿಟ್ಲಕಟ್ಟೆ ಗ್ರಾಮದ ಬಳಿ ನಡೆದಿದೆ.

ಮೃತ ಯುವತಿಯನ್ನು ಪ್ರಿಯಾ (21) ಹಾಗೂ ಗಾಯಗೊಂಡ ಯುವಕನನ್ನು ಯೋಗೇಶ್ ಎಂದು ಗುರುತಿಸಲಾಗಿದೆ. ಇಬ್ಬರು ದಾವಣಗೆರೆ ನಿವಾಸಿಗಳಾಗಿದ್ದು, ಕಾಲೇಜು ಮುಗಿಸಿ ಡಾಬಾವೊಂದಕ್ಕೆ ಸ್ನೇಹಿತರ ಜೊತೆ ಊಟಕ್ಕೆ ಹೋಗಿದ್ದರು. ಊಟ ಮುಗಿಸಿ ವಾಪಸ್ಸಾಗುವ ವೇಳೆ ಈ ಅಪಘಾತ ನಡೆದಿದೆ. ಇದನ್ನೂ ಓದಿ: ಬೆಂಗಳೂರಲ್ಲಿ 7 ಕೋಟಿ ದರೋಡೆ ಕೇಸ್ – ಚೆನ್ನೈನಲ್ಲಿ ಆರೋಪಿಗಳನ್ನು ಹಿಡಿದು 6.3 ಕೋಟಿ ವಶಕ್ಕೆ

ಅಪಘಾತಕ್ಕೂ ಮುನ್ನ ಇಬ್ಬರ ನಡುವೆ ಜಗಳ
ಪ್ರಿಯಾ ಹಾಗೂ ಯೋಗೇಶ್ ನಡುವೆ ಡಾಬಾದಲ್ಲೇ ಗಲಾಟೆ ನಡೆದಿತ್ತು. ಇನ್ನೂ ಇಬ್ಬರ ಜಗಳ ಸಿಸಿ ಕ್ಯಾಮೆರಾದಲ್ಲಿ ಸಹ ಸೆರೆಯಾಗಿದೆ. ಜಗಳವಾಡಿ ಪ್ರಿಯಾ ಹಾಗೂ ಆಕೆಯ ಸ್ನೇಹಿತೆ ಒಂದು ಬೈಕ್‌ನಲ್ಲಿ ಹೋಗುತ್ತಿದ್ದರು. ಈ ವೇಳೆ, ಬುಲೆಟ್ ಬೈಕ್‌ನಲ್ಲಿ ಯುವತಿಯರನ್ನು ಹಿಂಬಾಲಿಸಿ ಹೊರಟ ಯೋಗೇಶ್, ನಡು ರಸ್ತೆಯಲ್ಲಿ ನಿಲ್ಲಿಸಿ ಪ್ರಿಯಾಳನ್ನು ತನ್ನ ಬೈಕ್‌ನಲ್ಲಿ ಕೂರಿಸಿಕೊಂಡು ಬಂದಿದ್ದ. ಆಗಲೂ ಜಗಳವಾಡುತ್ತಾ ಅಜಾಗರೂಕತೆಯಿಂದ ಬೈಕ್‌ ಚಲಾಯಿಸಿದ್ದು, ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಗಂಭೀರವಾಗಿ ಗಾಯಗೊಂಡ ಯುವಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವಕನ ವಿರುದ್ಧ ಯುವತಿ ಕುಟುಂಬಸ್ಥರು ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇದನ್ನೂ ಓದಿ: ಶಿವಮೊಗ್ಗ ಜೈಲಿಗೆ ಬಾಳೆಗೊನೆಯಲ್ಲಿ ಗಾಂಜಾ ಪೂರೈಕೆ!

Share This Article