ಬಿಹಾರ ವಿಧಾನಸಭಾ ಚುನಾವಣೆಗೆ ಮುಹೂರ್ತ ಫಿಕ್ಸ್‌ – ನ.6, 11ರಂದು ಮತದಾನ, ನ.14ಕ್ಕೆ ಫಲಿತಾಂಶ

Public TV
2 Min Read

ನವದೆಹಲಿ: ಕೊನೆಗೂ ಬಿಹಾರ ವಿಧಾನಸಭಾ ಚುನಾವಣೆಗೆ (Bihar Assembly Elections) ಕೇಂದ್ರ ಚುನಾವಣಾ ಆಯೋಗ (Election Commission) ದಿನಾಂಕ ಘೋಷಣೆ ಮಾಡಿದೆ. ಈ ಬಾರಿ 2 ಹಂತಗಳಲ್ಲಿ ಮತದಾನ ನಡೆಯಲಿದೆ.

ನವೆಂಬರ್‌ 6ರ ಗುರುವಾರ ಮೊದಲ ಹಂತ, ನವೆಂಬರ್‌ 11ರ ಮಂಗಳವಾರ 2ನೇ ಹಂತದಲ್ಲಿ ಒಟ್ಟು 243 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ನವೆಂಬರ್‌ 14 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ (Gyanesh Kumar) ತಿಳಿಸಿದ್ದಾರೆ.

ಮೊದಲ ಹಂತದಲ್ಲಿ 121 ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಅಕ್ಟೋಬರ್‌ 10 ರಂದು ಗೆಜೆಟ್‌ ಅಧಿಸೂಚನೆ ಪ್ರಕಟವಾಗಲಿದೆ. ಅದೇ ರೀತಿ 2ನೇ ಹಂತದಲ್ಲಿ 122 ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಅಕ್ಟೋಬರ್‌ 13ರಂದು ಅಧಿಸೂಚನೆ ಪ್ರಕಟಿಸಲಾಗುತ್ತದೆ.

ಮೊದಲ ಹಂತದ ಮತದಾನ ನಡೆಯಲಿರುವ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಅ.17 ಕೊನೆಯ ದಿನವಾಗಿದ್ದು, 2ನೇ ಹಂತದ ಕ್ಷೇತ್ರಗಳಿಗೆ ಅ.21 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಅಕ್ಟೋಬರ್‌ 18‌ ಮತ್ತು ಅಕ್ಟೋಬರ್‌ 21 ರಂದು ಕ್ರಮವಾಗಿ ಮೊದಲ ಮತ್ತು 2ನೇ ಹಂತದ ಕ್ಷೇತ್ರಗಳಿಗೆ ಸಲ್ಲಿಸಿರುವ ಅಭ್ಯರ್ಥಿಗಳ ನಾಮಪತ್ರ ಪರಿಶೀಲನೆ ನಡೆಲಿದೆ. ಅಕ್ಟೋಬರ್‌ 20 ಹಾಗೂ ಅ.23 ಕ್ರಮವಾಗಿ ನಾಮಪತ್ರ ಹಿಂಪಡೆಯಲು ಕೊನೆಯದಿನವಾಗಿದೆ. ನವೆಂಬರ್‌ 6ರಂದು ಚುನಾವಣೆ ನಡೆಯಲಿದೆ. ನವೆಂಬರ್‌ 14ರಂದು ಫಲಿತಾಂಶ ಪ್ರಕಟವಾಗಲಿದ್ದು, ಯಾರು ಅಧಿಕಾರದ ಗದ್ದುಗೆ ಹಿಡಿಯಲಿದ್ದಾರೆ ಎಂದು ತಿಳಿಯಲಿದೆ.

ಬಿಹಾರದಲ್ಲಿರುವ 243 ವಿಧಾನಸಭಾ ಕ್ಷೇತ್ರಗಳ ಪೈಕಿ 203 ಸಾಮಾನ್ಯ ಕ್ಷೇತ್ರಗಳಾಗಿದ್ದು, 2 ಎಸ್ಟಿ ಹಾಗೂ 38 ಎಸ್ಸಿ ಮೀಸಲು ಕ್ಷೇತ್ರಗಳಾಗಿವೆ. ಬಿಹಾರದಲ್ಲಿ ಒಟ್ಟು 7.43 ಕೋಟಿ ಮತದಾರರು ಇದ್ದಾರೆ. ಈ ಪೈಕಿ 3.92 ಕೋಟಿ ಪುರುಷ ಮತದಾರರು, 3.50 ಕೋಟಿ ಮಹಿಳಾ ಮತದಾರರು, 1,725 ತೃತೀಯಲಿಂಗಿ ಮತದಾರರಿದ್ದಾರೆ, 14.01 ಲಕ್ಷ ಫಸ್ಟ್‌ ಟೈಮ್‌ ವೋಟರ್ಸ್‌ ಇದ್ದಾರೆ. ಒಟ್ಟು 90,712 ಬೂತ್‌ಗಳನ್ನ ನಿರ್ಮಾಣ ಮಾಡಲಾಗಿದ್ದು, ನಗರದಲ್ಲಿ 13,911 ಹಾಗೂ ಗ್ರಾಮೀಣ ಭಾಗದಲ್ಲಿ 76,801 ಬೂತ್‌ಗಳಿರಲಿವೆ. ಎಲ್ಲಾ ಬೂತ್‌ಗಳಲ್ಲೂ ವೆಬ್‌ಕ್ಯಾಸ್ಟಿಂಗ್‌ ವ್ಯವಸ್ಥೆ ಮಾಡಲಾಗಿದೆ.

ಒಟ್ಟಾರೆ 90,712 ಬೂತ್‌ ಮಟ್ಟದ ಅಧಿಕಾರಿಗಳು, 243 ಇಆರ್‌ಓ (ಮತದಾರರ ನೋಂದಣಾಧಿಕಾರಿ), 38 ಡಿಇಒ (ಜಿಲ್ಲಾ ಚುನಾವಣಾ ಅಧಿಕಾರಿ) ಬಳಿಕ ಮುಖ್ಯ ಚುನಾವಣಾ ಆಯುಕ್ತರು ಕರ್ತವ್ಯದಲ್ಲಿ ಇರಲಿದ್ದದಾರೆ. ಮತದಾರರಿಗೆ ಯಾವುದೇ ಗೊಂದಲಗಳಿದ್ದರೂ 1950 ಸಹಾಯವಾಣಿಗೆ ಕರೆ ಮಾಡಿ ಪರಿಹಾರ ಕಂಡುಕೊಳ್ಳಬಹುದಾಗಿದೆ.

ಈ ಬಾರಿ ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್‌ಕುಮಾರ್‌ (Nitish Kumar) ನೇತೃತ್ವದ ಎನ್‌ಡಿಎ (NDA) ಮತ್ತು ಆರ್‌ಜೆಡಿ (RJD) ನೇತೃತ್ವದ ಮಹಾಘಟಬಂಧನ್ ಮಧ್ಯೆ ನೇರ ಸ್ಪರ್ಧೆ ಏರ್ಪಟ್ಟಿದೆ. ಎನ್‌ಡಿಎ ಪ್ರಸ್ತುತ 131 ಸ್ಥಾನಗಳನ್ನು ಹೊಂದಿದ್ದರೆ ವಿರೋಧ ಪಕ್ಷ 111 ಸ್ಥಾನಗಳನ್ನು ಹೊಂದಿದೆ. ಇನ್ನುಳಿದಂತೆ ಬಿಜೆಪಿ 80, ಜೆಡಿ(ಯು) 45, ಎಚ್‌ಎಎಂ(ಎಸ್) 4 ಮತ್ತು ಇಬ್ಬರು ಸ್ವತಂತ್ರರು ಎನ್‌ಡಿಎಗೆ ಬಲ ನೀಡಿದರೆ ಆರ್‌ಜೆಡಿ 77, ಕಾಂಗ್ರೆಸ್ 19, ಸಿಪಿಐ(ಎಂಎಲ್) 11, ಸಿಪಿಐ(ಎಂ) 2 ಮತ್ತು ಸಿಪಿಐ 2 ಸ್ಥಾನ ಹೊಂದಿದೆ.

ಕೋವಿಡ್-19 ಸಾಂಕ್ರಾಮಿಕ ರೋಗದ ನಡುವೆ ಬಿಹಾರದಲ್ಲಿ 2020ರ ವಿಧಾನಸಭಾ ಚುನಾವಣೆ ಮೂರು ಹಂತಗಳಲ್ಲಿ ನಡೆದಿತ್ತು. ಎನ್‌ಡಿಎ ಜಯಗಳಿಸಿದ ಬಳಿಕ ನಿತೀಶ್‌ ಕುಮಾರ್‌ ಮುಖ್ಯಮಂತ್ರಿಯಾಗಿದ್ದರು. ಹೀಗಿದ್ದರೂ 2022 ರಲ್ಲಿ ನಿತೀಶ್‌ ಕುಮಾರ್‌ ಎನ್‌ಡಿಎ ತೊರೆದು ಆರ್‌ಜೆಡಿ ನೇತೃತ್ವದ ‘ಮಹಾಘಟಬಂಧನ್’ ಜೊತೆ ಸೇರಿ ಸರ್ಕಾರ ರಚಿಸಿದ್ದರು. 2024ರಲ್ಲಿ ಮತ್ತೆ ನಿತೀಶ್‌ ಕುಮಾರ್‌ ಮಹಾಘಟಬಂಧನ್ ಜೊತೆಗಿನ ಸಂಬಂಧ ಕಡಿದುಕೊಂಡು ಎನ್‌ಡಿಎ ಜೊತೆಗೆ ಕೈಜೋಡಿಸಿ ಅಧಿಕಾರಕ್ಕೆ ಏರಿದ್ದರು.

Share This Article