ಕನಸನ್ನು ನನಸಾಗಿಸಿಕೊಳ್ಳಲು ನ್ಯಾನೋ ಕಾರನ್ನೇ ಹೆಲಿಕಾಪ್ಟರ್ ಮಾಡಿದ

Public TV
1 Min Read

– 7 ಲಕ್ಷ ಖರ್ಚು ಮಾಡಿದ ಸಹೋದರರು

ಪಾಟ್ನಾ: ಬಿಹಾರ ಮೂಲದ 24ರ ಯುವಕನೊಬ್ಬ ತನ್ನ ಕನಸನ್ನು ನನಸು ಮಾಡಿಕೊಳ್ಳಲು ತನ್ನ ನ್ಯಾನೋ ಕಾರನ್ನೇ ಹೆಲಿಕಾಪ್ಟರ್ ಆಗಿ ವಿನ್ಯಾಸಗೊಳಿಸಿ ಎಲ್ಲರ ಗಮನ ಸೆಳೆದಿದ್ದಾನೆ.

ಬಿಹಾರದ ಬನಿಯಾಪುರದ ಸಿಮಾರಿ ಗ್ರಾಮದ ನಿವಾಸಿ ಮಿಥಿಲೇಶ್ ಪ್ರಸಾದ್(24) ಈ ಅಪರೂಪದ ಹೆಲಿಕಾಪ್ಟರ್ ತಯಾರಿಸಿದ್ದಾನೆ. ಮಿಥಿಲೇಶ್ 12ನೇ ತರಗತಿಯವರೆಗೆ ಓದಿದ್ದಾನೆ. ಈತ ವೃತ್ತಿಯಲ್ಲಿ ಪೈಪ್ ಫಿಟ್ಟರ್ ಆಗಿದ್ದು, ತನ್ನ ಬಳಿ ಇದ್ದ ಟಾಟಾ ನ್ಯಾನೋ ಕಾರನ್ನೇ ಹೆಲಿಕಾಪ್ಟರ್ ರೀತಿ ವಿನ್ಯಾಸಗೊಳಿಸಿ ತನ್ನ ಆಸೆ ತೀರಿಸಿಕೊಂಡಿದ್ದಾನೆ.

ಚಿಕ್ಕ ವಯಸ್ಸಿನಿಂದಲೂ ಹೆಲಿಕಾಪ್ಟರ್‍ಗಳನ್ನು ಮಾಡುವ ಕನಸು ಹೊಂದಿದ್ದನು. ಅದು ಹಾರದೆ ಇದ್ದರೂ ಕನಿಷ್ಟ ಹೆಲಿಕಾಪ್ಟರ್ ರೀತಿ ಕಾಣುವಂತೆ ಸಿದ್ಧಪಡಿಸುವುದು ಆತನ ಗುರಿಯಾಗಿತ್ತು.

ಈ ಕಾರು ನೋಡಲು ಹೆಲಿಕಾಪ್ಟರ್ ರೀತಿ ಕಾಣಿಸುತ್ತದೆ ಆದರೆ ಇದು ಹಾರಾಡುವುದಿಲ್ಲ. ಹೆಲಿಕಾಪ್ಟರ್‍ನ ಮೂಲ ವಿನ್ಯಾಸ ಹೇಗೆ ಇರುತ್ತದೋ ಅದೇ ರೀತಿ ಕಾರನ್ನು ಯುವಕ ವಿನ್ಯಾಸಗೊಳಿಸಿದ್ದಾನೆ. ಈ ಅಪರೂಪದ ವಿನ್ಯಾಸವನ್ನು ಪೂರ್ಣಗೊಳಿಸಲು ಮಿಥಿಲೇಶ್ ಮತ್ತು ಅವರ ಸಹೋದರ ಸುಮಾರು ಏಳು ತಿಂಗಳು ತೆಗೆದುಕೊಂಡಿದ್ದಾರೆ. ಅಲ್ಲದೆ ಇದಕ್ಕೆ ಸರಿಸುಮಾರು ಏಳು ಲಕ್ಷ ರೂಪಾಯಿಗಳನ್ನು ಸಹೋದರರು ಖರ್ಚು ಮಾಡಿದ್ದಾರೆ ಎನ್ನಲಾಗಿದೆ.

ಈ ಹೆಲಿಕಾಪ್ಟರ್ ಕಾರು ವಿನ್ಯಾಸದ ಬಗ್ಗೆ ಮಾತನಾಡಿರುವ ಮಿಥಿಲೇಶ್, ‘ ನಾನು ಹೆಲಿಕಾಪ್ಟರ್ ಅನ್ನು ಸ್ವಂತವಾಗಿ ನಿರ್ಮಿಸಿ ಅದರಲ್ಲಿ ಹಾರಾಟ ನಡೆಸಬೇಕೆಂದು ಬಾಲ್ಯದಿಂದಲೂ ಕನಸು ಕಂಡಿದ್ದೆ. ಆದರೆ ನನಗೆ ಬಲವಾದ ಹಿನ್ನೆಲೆ ಇಲ್ಲ ಆದ್ದರಿಂದ ನನ್ನ ಕಾರನ್ನು ಹೆಲಿಕಾಪ್ಟರ್ ರೀತಿ ಕಾಣುವಂತೆ ಮಾಡಿದೆ’ ಎಂದು ಖುಷಿಯನ್ನು ಹಂಚಿಕೊಂಡಿದ್ದಾನೆ.

ಈ ಹೆಲಿಕಾಪ್ಟರ್ ಕಾರಿನ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಇದನ್ನು ನೋಡಿದ ಕೆಲವರು ಯುವಕನ ಪ್ರಯತ್ನವನ್ನು ಮೆಚ್ಚಿದ್ದರೆ, ಇನ್ನು ಕೆಲವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ರೀತಿ ಕಾರನ್ನು ವಿನ್ಯಾಸ ಮಾಡಿಕೊಂಡು ರಸ್ತೆಗಿಳಿಸಿದರೆ ಇತರೆ ವಾಹನ ಸವಾರರಿಗೆ ತೊಂದರೆ ಆಗುತ್ತದೆ. ತನ್ನ ಕನಸು ನನಸಾಗಿಸಿಕೊಳ್ಳಲು ಇತರರಿಗೆ ತೊಂದರೆ ಕೊಡುವುದು ಸರಿಯಲ್ಲ ಎಂದು ಕಿಡಿಕಾರುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *