Bihar Election| ಸಿಎಂ ಅಭ್ಯರ್ಥಿಯಾಗಿ ತೇಜಸ್ವಿ ಯಾದವ್ ಘೋಷಣೆ

Public TV
2 Min Read

– ವಿಕಾಸ್‌ಶೀಲ್ ಇನ್ಸಾನ್ ಪಕ್ಷದ ಮುಖ್ಯಸ್ಥ ಮುಖೇಶ್ ಸಹಾನಿ ಡಿಸಿಎಂ ಅಭ್ಯರ್ಥಿ

ಪಾಟ್ನಾ: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ INDIA ಮೈತ್ರಿಕೂಟದ ಸಿಎಂ ಅಭ್ಯರ್ಥಿಯಾಗಿ ವಿರೋಧ ಪಕ್ಷದ ನಾಯಕ, ಮಾಜಿ ಡಿಸಿಎಂ ತೇಜಸ್ವಿ ಯಾದವ್ (Tejashwi Yadav) ಅವರನ್ನು ಘೋಷಿಸಿಲಾಗಿದೆ. ಸಿಎಂ ಅಭ್ಯರ್ಥಿ ಆಯ್ಕೆ ಬಗ್ಗೆ ಸುಧೀರ್ಘ ಚರ್ಚೆ ಬಳಿಕ ಅಂತಿಮವಾಗಿ ತೇಜಸ್ವಿ ಯಾದವ್ ಅವರ ಹೆಸರು ಘೋಷಿಸಲಾಯಿತು.

ಇದೇ ಸಂದರ್ಭದಲ್ಲಿ ವಿಕಾಸ್‌ಶೀಲ್ ಇನ್ಸಾನ್ ಪಕ್ಷದ ಮುಖ್ಯಸ್ಥ ಮುಖೇಶ್ ಸಹಾನಿ ಅವರನ್ನು ಮೈತ್ರಿಕೂಟದ ಉಪಮುಖ್ಯಮಂತ್ರಿ ಅಭ್ಯರ್ಥಿಯಾಗಿ ಪ್ರಕಟಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್‌ ನಾಯಕ ಅಶೋಕ್ ಗೆಹ್ಲೋಟ್, ಮುಂಬರುವ ಬಿಹಾರ ಚುನಾವಣೆಯಲ್ಲಿ (Bihar Election) ತೇಜಸ್ವಿ ಯಾದವ್ ಅವರನ್ನು ಮಹಾಘಟಬಂಧನದ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಮೈತ್ರಿಕೂಟ ನಿರ್ಧರಿಸಿದೆ. ಅವರಿಗೆ ದೀರ್ಘ ಭವಿಷ್ಯವಿದೆ. ನಿಶಾದ್ ಸಮುದಾಯದಲ್ಲಿ ಗಮನಾರ್ಹ ಪ್ರಭಾವ ಹೊಂದಿರುವ ಮುಖೇಶ್ ಸಹಾನಿ ಜೊತೆಗೆ, ಹಿಂದುಳಿದ ವರ್ಗದ ಮತ್ತೊಬ್ಬ ನಾಯಕನನ್ನು ಉಪಮುಖ್ಯಮಂತ್ರಿಯಾಗಿ ನೇಮಿಸಲಾಗುವುದು ಎಂದು ಹೇಳಿದರು. ಇದನ್ನೂ ಓದಿ:  Bihar Election | ಆರ್‌ಜೆಡಿ ಅಭ್ಯರ್ಥಿ ಶ್ವೇತಾ ಸುಮನ್ ನಾಮಪತ್ರ ತಿರಸ್ಕೃತ – ಮಾಧ್ಯಮಗಳ ಮುಂದೆ ಕಣ್ಣೀರು

ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ಮಾತನಾಡಿ, ನಾವು ಬಿಹಾರಕ್ಕಾಗಿ ಕೆಲಸ ಮಾಡಲು ಮತ್ತು ಎನ್‌ಡಿಎಯ (NDA) ಡಬಲ್-ಎಂಜಿನ್ ಸರ್ಕಾರವನ್ನು ಕೊನೆಗೊಳಿಸಲು ಬಯಸುತ್ತೇವೆ, ಇಲ್ಲಿರುವ ಡಬಲ್ ಇಂಜಿನ್ ಪೈಕಿ ಒಂದು ಎಂಜಿನ್ ಭ್ರಷ್ಟಾಚಾರದಿಂದ ನಡೆಸಲ್ಪಟ್ಟರೇ ಇನ್ನೊಂದು ಎಂಜಿನ್ ಅಪರಾಧದಿಂದ ನಡೆಸಲ್ಪಡುತ್ತದೆ ಎಂದು ವಾಗ್ದಾಳಿ ನಡೆಸಿದರು.


ಬಿಜೆಪಿ ನೇತೃತ್ವದ ಎನ್‌ಡಿಎದ ಮುಖ್ಯಮಂತ್ರಿ ಅಭ್ಯರ್ಥಿಯ ಬಗ್ಗೆ ಟೀಕಿಸಿದ ಅವರು, ನಿತೀಶ್ ಕುಮಾರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದಿಲ್ಲ. ನಾವು ಜಂಟಿ ಪತ್ರಿಕಾಗೋಷ್ಠಿ ನಡೆಸಿದ್ದೇವೆ. ಆದರೆ ಎನ್‌ಡಿಎ ಒಂದೇ ಒಂದು ಪತ್ರಿಕಾಗೋಷ್ಠಿಯನ್ನು ನಡೆಸಿಲ್ಲ. ಅವರ ಮುಖ್ಯಮಂತ್ರಿ ಅಭ್ಯರ್ಥಿಯ ಕುರಿತು ಅವರಿಂದ ಯಾವುದೇ ಅಧಿಕೃತ ಘೋಷಣೆ ಬಂದಿಲ್ಲ. ನಿತೀಶ್ ಕುಮಾರ್ ಅವರಿಗೆ ಅನ್ಯಾಯವಾಗುತ್ತಿದೆ ಎಂಬುದು ಸ್ಪಷ್ಟವಾಗಿದೆ. ಬಿಜೆಪಿ ಅವರನ್ನು ಮುಖ್ಯಮಂತ್ರಿ ಮಾಡುವ ಉದ್ದೇಶ ಹೊಂದಿಲ್ಲ ಎಂದು ನಾವು ಮೊದಲಿನಿಂದಲೂ ಹೇಳಿಕೊಂಡು ಬಂದಿದ್ದೇವೆ ಎಂದು ಅವರು ಹೇಳಿದರು.

Share This Article