2020 ರಲ್ಲಿ 1, ಈ ಬಾರಿ 20+ ಕ್ಷೇತ್ರಗಳಲ್ಲಿ ಜಯ – ಯುವ ನಾಯಕ, ಮೋದಿಯ ಹನುಮ ಚಿರಾಗ್‌ ಕಮಾಲ್‌!

Public TV
2 Min Read

– ಬಿಹಾರ ಸರ್ಕಾರದಲ್ಲಿ ಸಿಗುತ್ತಾ ಡಿಸಿಎಂ ಪಟ್ಟ ?

ಪಾಟ್ನಾ: ಕಳೆದ ಚುನಾವಣೆಯಲ್ಲಿ ಕೇವಲ 1 ಸ್ಥಾನದಲ್ಲಿ ಗೆದ್ದಿದ್ದ ಚಿರಾಗ್‌ ಪಾಸ್ವಾನ್‌ (Chirag Paswan) ಅವರ ಲೋಕ ಜನಶಕ್ತಿ ಪಕ್ಷ (LJP) ಈ ಬಾರಿ ಸ್ಪರ್ಧಿಸಿದ್ದ 29 ಕ್ಷೇತ್ರಗಳ ಪೈಕಿ 20ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಜಯಗಳಿಸಿದೆ. ಎಲ್‌ಜೆಪಿಯ ಅತ್ಯುತ್ತಮ ಪ್ರದರ್ಶನದಿಂದ ಆರ್‌ಜೆಡಿ ಮತ್ತು ಕಾಂಗ್ರೆಸ್‌ ಮಕಾಡೆ ಮಲಗಿದೆ. ಈ ಅತ್ಯುತ್ತಮ ಸಾಧನೆಗೆ ಬಿಹಾರದ ಡಿಸಿಎಂ ಪಟ್ಟವನ್ನು ಅವರು ಅಲಂಕರಿಸುತ್ತಾರಾ ಎಂಬ ಪ್ರಶ್ನೆ ಎದ್ದಿದೆ.

ಈ ಹಿಂದೆ ರಾಮ್ ವಿಲಾಸ್ ಪಾಸ್ವಾನ್ ಪಕ್ಷ ಮುನ್ನಡೆಸುತ್ತಿದ್ದಾಗ 2005 ರಲ್ಲಿ ಅತಿ ಹೆಚ್ಚು ಅಂದರೆ 29 ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು. ಆಗ ಎಲ್‌ಜೆಪಿ 180 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಆದರೆ ಕಡಿಮೆ ಕ್ಷೇತ್ರದಲ್ಲಿ ಸ್ಪರ್ಧಿಸಿ ಉತ್ತಮ ಸಾಧನೆ ಮಾಡಿದೆ. ಇದನ್ನೂ ಓದಿ:  ಮುಸ್ಲಿಮರು ಹೆಚ್ಚಿರುವ ಕ್ಷೇತ್ರಗಳಲ್ಲಿ ಬಿಜೆಪಿಗೆ ಭಾರೀ ಮುನ್ನಡೆ!

2020 ರಲ್ಲಿ ಏನಾಗಿತ್ತು?
ಎಲ್‌ಜೆಪಿ ಈ ಹಿಂದೆ 2020 ರಲ್ಲಿ ನಿತೀಶ್ (Nitish Kumar) ಜೊತೆಗೆ ಸಂಬಂಧ ಕಡಿದುಕೊಂಡು ಪ್ರತ್ಯೇಕವಾಗಿ ಸ್ಫರ್ಧಿಸಿತ್ತು. ಚುನಾವಣೆ ಸಮಯದಲ್ಲಿ ರಾಮ್ ವಿಲಾಸ್ ಪಾಸ್ವಾನ್ ಸಾವನ್ನಪ್ಪಿದ್ದರೂ ಯಾವುದೇ ಅನುಕಂಪದ ಅಲೆ ಕೆಲಸ ಮಾಡಿರಲಿಲ್ಲ. ಒಂದು ವರ್ಷದಲ್ಲೇ ರಾಮ್ ವಿಲಾಸ್ ಅವರ ಸೋದರ ಪಶುಪತಿ ಕುಮಾರ್ ಪರಸ್ ಪಕ್ಷವನ್ನು ಒಡೆದರು.

ಪಕ್ಷ ಎರಡು ಹೋಳಾಗಿದ್ದರಿಂದ ಚಿರಾಗ್‌ ಪಾಸ್ವಾನ್‌ ಅವರ ರಾಜಕೀಯ ಜೀವನ ಅಂತ್ಯವಾಯಿತು ಎಂದೇ ಮಾತುಗಳು ಬರಲಾರಂಭಿಸಿತ್ತು. ಆದರೆ ಲೋಕಸಭಾ ಚುನಾವಣೆಯಲ್ಲಿ ಮೋದಿ, ಅಮಿತ್‌ ಶಾ ಅವರ ಕಾರ್ಯತಂತ್ರದಿಂದ ಮರಳಿ ಎನ್‌ಡಿಎಗೆ ಸೇರಿದರು. 2024ರ ಚುನಾವಣೆಯಲ್ಲಿ ಸ್ಪರ್ಧಿಸಿದ ಐದು ಕ್ಷೇತ್ರಗಳ ಪೈಕಿ ಐದರಲ್ಲಿ ಗೆಲುವು ಸಾಧಿಸಿ ತಾನೊಬ್ಬ ಯುವ ನಾಯಕ ಎಂಬುದನ್ನು ಸಾಧಿಸಿ ತೋರಿಸಿದರು.

ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಜೊತೆ ಟಿಕೆಟ್‌ ಪಡೆಯಲು ಗುದ್ದಾಡಿದ್ದರು. ಕೊನೆಗೆ 29 ಕ್ಷೇತ್ರಗಳ ಟಿಕೆಟ್‌ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಎಲ್‌ಜೆಪಿ ಮೈತ್ರಿಕೂಟಕ್ಕೆ ಸೇರಿದ್ದು ಜೆಡಿಯು ಮತ್ತು ಬಿಜೆಪಿಗೆ ನೆರವಾಯ್ತು ಅದರಲ್ಲೂ ಜೆಡಿಯುಗೆ ಹೆಚ್ಚಿನ ಲಾಭ ಸಿಕ್ಕಿದೆ. 2020ರ ಚುನಾವಣೆಯಲ್ಲಿ 135 ಸ್ಥಾನಗಳಲ್ಲಿ ಎಲ್‌ಜೆಪಿ ಸ್ಪರ್ಧಿಸಿದ್ದರಿಂದ ಜೆಡಿಯು 34 ಕ್ಷೇತ್ರಗಳಲ್ಲಿ ಸೋಲು ಕಾಣುವಂತಾಗಿತ್ತು. ಆದರೆ ಈ ಬಾರಿ ಮೈತ್ರಿಯಿಂದಾಗಿ 21 ಕ್ಷೇತ್ರಗಳಲ್ಲಿ ಜಯಗಳಿಸಿದೆ. ಇದನ್ನೂ ಓದಿ:  ಆರ್‌ಜೆಡಿ ಸೋಲಿಸೋಕೆ ರಾಹುಲ್ ಗಾಂಧಿ ಒಬ್ಬರೇ ಸಾಕು: ನಿಖಿಲ್ ಕುಮಾರಸ್ವಾಮಿ

ಪ್ರಧಾನಿ ಮೋದಿ ಅವರನ್ನು ಚಿರಾಗ್‌ ಪಾಸ್ವಾನ್‌ ಬಹಳ ಇಷ್ಟ ಪಡುತ್ತಾರೆ. ನನಗೆ ಪ್ರಧಾನಿ ಮೋದಿಯವರ (PM Narendra Modi) ಫೋಟೋಗಳು ಅಗತ್ಯವಿಲ್ಲ. ಅವರು ನನ್ನ ಹೃದಯದಲ್ಲಿದ್ದಾರೆ. ಹನುಮಂತನ ರಾಮನ ಭಕ್ತಿಯಂತೆ, ನೀವು ನನ್ನ ಹೃದಯವನ್ನು ಒಡೆದು ತೆರೆದರೆ ನಿಮಗೆ ಮೋದಿಜಿ ಮಾತ್ರ ಸಿಗುತ್ತಾರೆ ಎಂದು ಈ ಹಿಂದೆ ಹೇಳಿದ್ದರು. ಪ್ರಧಾನಿ ಮೋದಿಗೆ ನಾನು ಹನುಮನ ರೀತಿ ಇರುವೆ ಎಂಬ ಹೇಳಿಕೆ ಬಹಳ ವೈರಲ್‌ ಆಗಿತ್ತು.

ಸದ್ಯದ ಕೇಂದ್ರದ ಮಂತ್ರಿಯಾಗಿರುವ ಚಿರಾಗ್‌ ನನಗೆ ರಾಜ್ಯ ರಾಜಕೀಯ ಅಂದರೆ ಇಷ್ಟ. ಬಿಹಾರವನ್ನು ಅಭಿವೃದ್ಧಿ ಮಾಡುವ ಕನಸಿದೆ ಎಂದಿದ್ದರು. ಹೀಗಾಗಿ ನಿತೀಶ್‌ ಸಂಪುಟದಲ್ಲಿ ಉಪ ಮುಖ್ಯಮಂತ್ರಿ ಸ್ಥಾನವನ್ನು ಎನ್‌ಡಿಎ ಚಿರಾಗ್‌ಗೆ ನೀಡುತ್ತಾರಾ ಎಂಬ ಪ್ರಶ್ನೆ ಎದ್ದಿದೆ.

Share This Article