Bihar Election Dates 2025 | 69 ಲಕ್ಷ ಹೆಸರುಗಳು ಡಿಲೀಟ್‌, 21 ಲಕ್ಷ ಹೊಸ ಮತದಾರರ ಸೇರ್ಪಡೆ

Public TV
2 Min Read

ನವದೆಹಲಿ: ಸಾವು, ಅಕ್ರಮ ವಲಸಿಗರು (Illegal Immigrants), ನಕಲಿ ವೋಟರ್‌ ಐಡಿ ಹಾಗೂ ವಿಳಾಸ ಬದಲಾವಣೆ ಕಾರಣಗಳಿಂದ ಈ ಬಾರಿ ಬಿಹಾರ ಮತದಾರರ ಪಟ್ಟಿಯಲ್ಲಿ 69 ಲಕ್ಷ ಹೆಸರುಗಳನ್ನು ಅಳಿಸಲಾಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ (Gyanesh Kumar) ಮಾಹಿತಿ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ವಿವಿಧ ಕಾರಣಗಳಿಂದ 69 ಲಕ್ಷ ಹೆಸರುಗಳನ್ನ ಮತಪಟ್ಟಿಯಿಂದ ಅಳಿಸಲಾಗಿದೆ. ಇದೇ ವೇಳೆ 21.5 ಲಕ್ಷ ಹೊಸ ಮತದಾರರು (New Voters) ಸೇರ್ಪಡೆಯಾಗಿದ್ದಾರೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ಬಿಹಾರ ವಿಧಾನಸಭಾ ಚುನಾವಣೆಗೆ ಮುಹೂರ್ತ ಫಿಕ್ಸ್‌ – ನ.6, 11ರಂದು ಮತದಾನ, ನ.14ಕ್ಕೆ ಫಲಿತಾಂಶ

ಬಿಹಾರದಲ್ಲಿರುವ 243 ವಿಧಾನಸಭಾ ಕ್ಷೇತ್ರಗಳ ಪೈಕಿ 203 ಸಾಮಾನ್ಯ ಕ್ಷೇತ್ರಗಳಾಗಿದ್ದು, 2 ಎಸ್ಟಿ ಹಾಗೂ 38 ಎಸ್ಸಿ ಮೀಸಲು ಕ್ಷೇತ್ರಗಳಾಗಿವೆ. 7.43 ಕೋಟಿ ಮತದಾರರಿದ್ದು, 3.92 ಕೋಟಿ ಪುರುಷರು, 3.50 ಕೋಟಿ ಮಹಿಳಾ ಮತದಾರರಿದ್ದಾರೆ. ಬಿಹಾರದಲ್ಲಿ 22 ವರ್ಷಗಳ ಬಳಿಕ ಮತಪಟ್ಟಿಯ ಸಮಗ್ರ ಪರಿಷ್ಕರಣೆ ಬಳಿಕ ಚುನಾವಣೆ ನಡೆಯುತ್ತಿದ್ದು, 14 ಲಕ್ಷ ಪ್ರಥಮ ಬಾರಿಗೆ ಮತಚಲಾಯಿಸುವ ಮತದಾರರಿದ್ದಾರೆ.

ಎಲ್ಲೆಲ್ಲಿ ಉಪಚುನಾವಣೆ?
ಇನ್ನು, ಜಮ್ಮು & ಕಾಶ್ಮೀರ 2 ಹಾಗೂ ರಾಜಸ್ಥಾನ, ಜಾರ್ಖಂಡ್, ತೆಲಂಗಾಣ, ಪಂಜಾಬ್, ಮಿಜೋರಾಂ, ಒಡಿಶಾದಲ್ಲಿ ತಲಾ ಒಂದೊಂದು ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಈ ಮಧ್ಯೆ ಬಿಹಾರ ಎಲೆಕ್ಷನ್‌ನಿಂದಾಗಿ ಕರ್ನಾಟಕದ ಕಾಂಗ್ರೆಸ್ & ಬಿಜೆಪಿ ನಾಯಕತ್ವ ಬದಲಾವಣೆ ವಿದ್ಯಮಾನಗಳಿಗೆ ಅಲ್ಪವಿರಾಮ ಬ್ರೇಕ್ ಬಿದ್ದಂತಾಗಿದೆ. ಇದನ್ನೂ ಓದಿ: Bihar Election 2025 | ಬುರ್ಖಾಧಾರಿ ಮಹಿಳೆಯರ ಗುರುತು ಪರಿಶೀಲನೆಗೆ ಅಂಗನವಾಡಿ ಕಾರ್ಯಕರ್ತರ ನಿಯೋಜನೆ

ಬುರ್ಖಾಧಾರಿ ಮಹಿಳೆಯರ ಪರಿಶೀಲನೆ
ಕಾಂಗ್ರೆಸ್‌ ನಾಯಕರಿಂದ ಮತಗಳ್ಳತನ ಆರೋಪಗಳು ಹೆಚ್ಚಾಗಿ ಕೇಳಿಬಂದ ಹಿನ್ನೆಲೆ ಈ ಬಾರಿ 100% ವೆಬ್‌ಕ್ಯಾಸ್ಟಿಂಗ್‌ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಬುರ್ಖಾಧಾರಿ ಮಹಿಳೆಯರ ಗುರುತು ಪರಿಶೀಲಿಸಲು ಪ್ರತಿ ಬೂತ್‌ನಲ್ಲಿ ಪ್ರತ್ಯೇಕವಾಗಿ ಅಂಗನವಾಡಿ ಕಾರ್ಯಕರ್ತರನ್ನ ನಿಯೋಜಿಸಲಾಗುತ್ತದೆ. ಚುನಾವಣಾ ಆಯೋಗದ ಮಾರ್ಗಸೂಚಿಯ ಪ್ರಕಾರವೇ ಅವರು ಗುರುತು ಪರಿಶೀಲಿಸಲಿದ್ದಾರೆ ಎಂದು ತಿಳಿಸಿದ್ದಾರೆ.  

ಇನ್ನೂ ಮೊದಲ ಹಂತದ ಮತದಾನ ನಡೆಯಲಿರುವ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಅ.17 ಕೊನೆಯ ದಿನವಾಗಿದ್ದು, 2ನೇ ಹಂತದ ಕ್ಷೇತ್ರಗಳಿಗೆ ಅ.21 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಅಕ್ಟೋಬರ್‌ 18‌ ಮತ್ತು ಅಕ್ಟೋಬರ್‌ 21 ರಂದು ಕ್ರಮವಾಗಿ ಮೊದಲ ಮತ್ತು 2ನೇ ಹಂತದ ಕ್ಷೇತ್ರಗಳಿಗೆ ಸಲ್ಲಿಸಿರುವ ಅಭ್ಯರ್ಥಿಗಳ ನಾಮಪತ್ರ ಪರಿಶೀಲನೆ ನಡೆಲಿದೆ. ಅಕ್ಟೋಬರ್‌ 20 ಹಾಗೂ ಅ.23 ಕ್ರಮವಾಗಿ ನಾಮಪತ್ರ ಹಿಂಪಡೆಯಲು ಕೊನೆಯದಿನವಾಗಿದೆ. ನವೆಂಬರ್‌ 6ರಂದು ಚುನಾವಣೆ ನಡೆಯಲಿದೆ. ನವೆಂಬರ್‌ 14ರಂದು ಫಲಿತಾಂಶ ಪ್ರಕಟವಾಗಲಿದ್ದು, ಯಾರು ಅಧಿಕಾರದ ಗದ್ದುಗೆ ಹಿಡಿಯಲಿದ್ದಾರೆ ಎಂದು ತಿಳಿಯಲಿದೆ.

Share This Article