– ಉತ್ತರ ಪ್ರದೇಶದಲ್ಲಿ ಸ್ವಂತ ಬಲದಲ್ಲಿ ಸರ್ಕಾರ ರಚಿಸುತ್ತೇವೆ
– ಬಿಹಾರ ಚುನಾವಣೆ ಫಲಿತಾಶದ ಬೆನ್ನಲ್ಲೇ ಎಸ್‌ಪಿ ಶಾಸಕನ ಹೇಳಿಕೆ
ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ (Bihar Election Results) ಕಾಂಗ್ರೆಸ್‌ನ ಹೀನಾಯ ಸೋಲಿನ ಬೆನ್ನಲ್ಲೇ INDIA ಒಕ್ಕೂಟದಲ್ಲಿ ಅಪಸ್ವರ ಏಳಲು ಆರಂಭವಾಗಿದೆ.
ಸಮಾಜವಾದಿ ಪಕ್ಷದ (SP) ಲಕ್ನೋ ಸೆಂಟ್ರಲ್‌ನ ಶಾಸಕ ರವಿದಾಸ್ ಮೆಹ್ರೋತ್ರಾ, ಎಸ್‌ಪಿ ಮುಖ್ಯಸ್ಥ ಮತ್ತು ಕನ್ನೌಜ್ ಸಂಸದ ಅಖಿಲೇಶ್ ಯಾದವ್ (Akhilesh Yadav) ವಿರೋಧ ಪಕ್ಷದ ಮೈತ್ರಿಕೂಟವನ್ನು ಮುನ್ನಡೆಸಬೇಕು ಎಂದು ಹೇಳಿದ್ದಾರೆ. ಇದರ ಜೊತೆಗೆ ರಾಜಕೀಯವಾಗಿ ಮಹತ್ವದ ರಾಜ್ಯಗಳ ಪೈಕಿ ಒಂದಾಗಿರುವ ಉತ್ತರ ಪ್ರದೇಶದಲ್ಲಿ ಸ್ವಂತವಾಗಿ ಸರ್ಕಾರ ರಚಿಸಲು ಎಸ್‌ಪಿ ಸಮರ್ಥವಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಬಿಹಾರ ಚುನಾವಣೆಗೆ ವಿಶ್ವಬ್ಯಾಂಕ್‌ನ 14,000 ಕೋಟಿ ಸಾಲದ ಹಣ ಬಳಕೆ: ಪ್ರಶಾಂತ್ ಕಿಶೋರ್ ಪಕ್ಷ ಆರೋಪ
ಈ ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್‌ಗೆ ಎರಡು ಸಂದೇಶವನ್ನು ಕಳುಹಿಸಿದ್ದಾರೆ. INDIA ಒಕ್ಕೂಟವನ್ನು ಮುನ್ನಡೆಸಲು ಕಾಂಗ್ರೆಸ್ ನಾಯಕರಿಗಿಂತ ಅಖಿಲೇಶ್ ಸಮರ್ಥರಿದ್ದಾರೆ ಎಂದು ಬಹಿರಂಗವಾಗಿಯೇ ಹೇಳಿದ್ದಾರೆ. ಇದರ ಜೊತೆ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಬೆಂಬಲ ಇಲ್ಲದೆಯೂ ನಾವು ಅಧಿಕಾರಕ್ಕೆ ಏರಬಹುದು ಎಂದು ಸೂಚ್ಯವಾಗಿ ತಿಳಿಸಿದ್ದಾರೆ..
ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ಬೆನ್ನಲ್ಲೇ ಬಂದ ಈ ಹೇಳಿಕೆ ಈಗ ಮಹತ್ವ ಪಡೆದಿದೆ. 2020ರ ಚುನಾವಣೆಯಲ್ಲಿ 19 ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್ ಈ ಬಾರಿ ಕೇವಲ 6 ಕ್ಷೇತ್ರಗಳಲ್ಲಿ ಮಾತ್ರ ಜಯಗಳಿಸಿದೆ.
ಕಳೆದ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ 37 ಲೋಕಸಭಾ ಸ್ಥಾನಗಳನ್ನು ಗೆದ್ದ ಸಮಾಜವಾದಿ ಪಕ್ಷವು ಕಾಂಗ್ರೆಸ್ ನಂತರ ಲೋಕಸಭೆಯಲ್ಲಿ ಎರಡನೇ ಅತಿದೊಡ್ಡ ವಿರೋಧ ಪಕ್ಷವಾಗಿದೆ. ಲೋಕಸಭಾ ಚುನಾವಣೆಯಲ್ಲಿ 99 ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್ ನಂತರ ನಡೆದ ರಾಜ್ಯ ಚುನಾವಣೆಗಳಲ್ಲಿ ಕಳಪೆ ಪ್ರದರ್ಶನ ನೀಡುತ್ತಿರುವುದು INDIA ಒಕ್ಕೂಟದ ಆತಂಕಕ್ಕೆ ಕಾರಣವಾಗಿದೆ.
