ಖರ್ಗೆ ಕಾರ್ಯಕ್ರಮಕ್ಕೆ ಬಾರದ ಜನ – ಪಕ್ಷದಿಂದಲೇ ಜಿಲ್ಲಾಧ್ಯಕ್ಷ ಅಮಾನತು

Public TV
2 Min Read

ಪಾಟ್ನಾ: ಕಾಂಗ್ರೆಸ್ (Congress) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರ ಬಿಹಾರ ಕಾರ್ಯಕ್ರಮದಲ್ಲಿ ಕಡಿಮೆ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದಕ್ಕೆ ಬಕ್ಸಾರ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮನೋಜ್ ಕುಮಾರ್ ಪಾಂಡೆಯನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ.

ಮನೋಜ್ ಕುಮಾರ್ ಪಾಂಡೆ (Manoj Kumar Pandey) ಅವರನ್ನು ಅನಿರ್ದಿಷ್ಟಾವಧಿಗೆ ಅಮಾನತು ಮಾಡಲಾಗಿದೆ ಮತ್ತು ಪಕ್ಷದ ಎಲ್ಲಾ ಹುದ್ದೆಗಳಿಂದ ತೆಗೆದುಹಾಕಲಾಗಿದೆ ಎಂದು ಬಿಹಾರ ಪ್ರದೇಶ ಕಾಂಗ್ರೆಸ್ ಸಮಿತಿಯ (ಬಿಪಿಸಿಸಿ) ಮಾಧ್ಯಮ ಕೋಶದ ಅಧ್ಯಕ್ಷ ರಾಜೇಶ್ ರಾಥೋಡ್ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಭಾನುವಾರ ಬಕ್ಸಾರ್‌ನ ದಲ್ಸಾಗರ್ ಕ್ರೀಡಾಂಗಣದಲ್ಲಿ ‘ಜೈ ಬಾಪು, ಜೈ ಭೀಮ್, ಜೈ ಸಂವಿಧಾನ್’ ಕಾರ್ಯಕ್ರಮ ಆಯೋಜನೆಯಾಗಿತ್ತು. ಕಾರ್ಯಕ್ರಮಕ್ಕೆ ಮಲ್ಲಿಕಾರ್ಜುನ ಖರ್ಗೆ ಬರುವ ವಿಚಾರ ತಿಳಿದಿದ್ದರೂ ಬಹಳಷ್ಟು ಕುರ್ಚಿಗಳು ಖಾಲಿ ಇದ್ದವು.


ಬಕ್ಸಾರ್‌ನ ಕಾಂಗ್ರೆಸ್ ಶಾಸಕ ಸಂಜಯ್ ಕುಮಾರ್ ತಿವಾರಿ ಮುಂದೆ ಬಂದು ಕುರ್ಚಿಯಲ್ಲಿ ಕುಳಿತುಕೊಳ್ಳುವಂತೆ ಜನರಲ್ಲಿ ಕೇಳಿಕೊಳ್ಳುತ್ತಿದ್ದರು. ಖಾಲಿ ಕುರ್ಚಿಗಳು ಇರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು.

ಬಿಹಾರದ ಕಾಂಗ್ರೆಸ್ ಉಸ್ತುವಾರಿ ಕೃಷ್ಣ ಅಲ್ಲವರು, ರಾಜ್ಯಾಧ್ಯಕ್ಷ ಅಖಿಲೇಶ್ ಪ್ರಸಾದ್ ಸಿಂಗ್, ಬಕ್ಸಾರ್‌ನ ಆರ್‌ಜೆಡಿ ಸಂಸದ ಸುಧಾಕರ್ ಸಿಂಗ್, ಸಸಾರಂನ ಕಾಂಗ್ರೆಸ್ ಸಂಸದ ಮನೋಜ್ ಕುಮಾರ್ ರಾಮ್ ಸೇರಿದಂತೆ ಪಕ್ಷದ ಹಿರಿಯ ನಾಯಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಕಡಿಮೆ ಸಂಖ್ಯೆಯಲ್ಲಿ ಜನರ ಭಾಗಿ ಮತ್ತು ಖಾಲಿ ಕುರ್ಚಿಗಳು ಹಿರಿಯ ನಾಯಕರಿಗೆ ಮುಜುಗರವನ್ನು ಉಂಟು ಮಾಡಿತ್ತು. ಈ ಕಾರಣಕ್ಕೆ ಶಿಸ್ತು ಕ್ರಮ ಕೈಗೊಳ್ಳಲಾಗಿದೆ ಎಂದು ಕಾಂಗ್ರೆಸ್‌ ಮೂಲಗಳನ್ನು ಆಧಾರಿಸಿ ವರದಿಯಾಗಿದೆ.

ಈ ವರ್ಷದ ಅಕ್ಟೋಬರ್‌ – ನವೆಂಬರ್‌ ಅವಧಿಯಲ್ಲಿ ಬಿಹಾರ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಕಾಂಗ್ರೆಸ್‌ ಮತ್ತು ಆರ್‌ಜೆಡಿ ಮೈತ್ರಿ ಮಾಡಿಕೊಂಡಿದ್ದರೆ ಬಿಜೆಪಿ, ಜೆಡಿಯು, ಎಲ್‌ಜೆಪಿ ಮೈತ್ರಿ ಮಾಡಿಕೊಂಡಿವೆ.

Share This Article