ಡಿಕೆಶಿ ವೈಲ್ಡ್‌ ಕಾರ್ಡ್‌ಎಂಟ್ರಿ – ಬಿಗ್‌ಬಾಸ್‌ ಮನೆ ಓಪನ್‌ | ರಾತ್ರಿ ಏನೇನಾಯ್ತು? ಇಲ್ಲಿದೆ ಇನ್‌ಸೈಡ್‌ ಸ್ಟೋರಿ

Public TV
2 Min Read

ಬೆಂಗಳೂರು/ರಾಮನಗರ: ವೈಲ್ಡ್ ಕಾರ್ಡ್ ಮೂಲಕ ಎಂಟ್ರಿಯಾದ ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಮಾಲಿನ್ಯ ನಿಯಂತ್ರಣ ಮಂಡಳಿಗೆ ಠಕ್ಕರ್‌ ನೀಡಿ ಬಿಗ್‌ ಬಾಸ್‌ (Bigg Boss) ಮನೆಯನ್ನು ಓಪನ್‌ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಜಾಲಿವುಡ್‌ ಸ್ಟುಡಿಯೋದ (Jollywood Studios) ಆವರಣದಲ್ಲಿ ಬಿಗ್‌ಬಾಸ್‌ ಶೋ ನಡೆಯುತ್ತಿತ್ತು. ಮಾಲಿನ್ಯ ನಿಯಮವನ್ನು ಉಲ್ಲಂಘಿಸಿದ್ದಕ್ಕೆ ರಾಮನಗರ ಜಿಲ್ಲಾಡಳಿತ ಜಾಲಿವುಡ್‌ ಸ್ಟುಡಿಯೋಗೆ ಅ.7 ರಂದು ಬೀಗ ಹಾಕಿತ್ತು. ಜಾಲಿವುಡ್‌ ಸ್ಟುಡಿಯೋಗೆ ಬೀಗ ಹಾಕಿದ್ದರಿಂದ ಬಿಗ್‌ಬಾಸ್‌ ಮನೆಗೂ ಬೀಗ ಬಿದ್ದಿತ್ತು.

ಬಿಗ್‌ ಬಾಸ್‌ ಮನೆಗೆ ಬೀಗ ಬಿದ್ದ ವಿಚಾರದ ಬಗ್ಗೆ ಬುಧವಾರ ಬೆಳಗ್ಗೆಯೇ ಡಿಕೆಶಿ ಸಾಫ್ಟ್‌ ಕಾರ್ನರ್‌ ವ್ಯಕ್ತಪಡಿಸಿದ್ದರು. ಮಾಲಿನ್ಯ ನಿಯಂತ್ರಣ ಮಂಡಳಿ ನಿಯಮಗಳನ್ನು ಪಾಲಿಸಿಲ್ಲ ಎಂಬ ಕಾರಣಕ್ಕೆ ಬಿಗ್‌ಬಾಸ್‌ ನಡೆಯುವ ಜಾಲಿವುಡ್‌ ಸ್ಟುಡಿಯೋ ಬಂದ್‌ ಮಾಡಲಾಗಿದೆ. ಆದರೆ ಇಲ್ಲಿ ಖಾಸಗಿಯವರು ಹೂಡಿಕೆ ಮಾಡಿರುತ್ತಾರೆ, ಉದ್ಯೋಗ ನಡೆಯುವುದು ಮುಖ್ಯ. ಹೀಗಾಗಿ ತಪ್ಪುಗಳನ್ನು ಸರಿಪಡಿಸಿಕೊಂಡು ಹೋಗಲು ಅವಕಾಶ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದರು.  ಇದನ್ನೂ ಓದಿ: ಬಿಗ್‌ ಬಾಸ್‌ ಓಪನ್‌ ಬೆನ್ನಲ್ಲೇ ಮುಂಜಾನೆ ಮನೆ ಪ್ರವೇಶಿಸಿದ ಸ್ಪರ್ಧಿಗಳು

ಡಿಕೆಶಿ ಪ್ರತಿಕ್ರಿಯೆ ನೀಡಿದ್ದರೂ ಇನ್ನೊಂದು ಕಡೆ ಮಾಲಿನ್ಯ ನಿಯಂತ್ರಣ ಮಂಡಳಿಯ ಮುಖ್ಯಸ್ಥ ನರೇಂದ್ರ ಸ್ವಾಮಿ (Narendraswamy) ಮಧ್ಯಾಹ್ನ ಖಾಸಗಿ ಹೋಟೆಲಿನಲ್ಲಿ ಸುದ್ದಿಗೋಷ್ಠಿ ನಡೆಸಿ ಜಾಲಿವುಡ್‌ ಸ್ಟುಡಿಯೋ ನಿಯಮಗಳನ್ನೇ ಪಾಲನೆ ಮಾಡಿಲ್ಲ. ಒಂದು ಅರ್ಜಿಯನ್ನೇ ಹಾಕಿಲ್ಲ ಎಂದು ಹೇಳಿ ಕಿಡಿಕಾರಿದ್ದರು. ಅಷ್ಟೇ ಅಲ್ಲದೇ ರಾಮನಗರ ಜಿಲ್ಲಾಡಳಿತಕ್ಕೆ ಯಾವುದೇ ಅಧಿಕಾರವಿಲ್ಲ. ನಾವು ಅನುಮತಿ ನೀಡಿದರೆ ಮಾತ್ರ ಜಾಲಿವುಡ್‌ ಸ್ಟುಡಿಯೋವನ್ನು ತೆರೆಯಬಹುದು ಎಂದು ಕಡ್ಡಿ ಮುರಿದಂತೆ ಹೇಳಿದ್ದರು.

ನರೇಂದ್ರ ಸ್ವಾಮಿ ಹೇಳಿಕೆಯಿಂದ ಬಿಗ್‌ ಬಾಸ್‌ ಭವಿಷ್ಯ ಅತಂತ್ರವಾಗಿತ್ತು. ಪತ್ರಿಕಾಗೋಷ್ಠಿಬಳಿಕ ಖಾಸಗಿ ಹೋಟೆಲಿನಲ್ಲೇ ನರೇಂದ್ರಸ್ವಾಮಿ ಭೇಟಿ ಮಾಡಿ ಜಾಲಿವುಡ್ ಸ್ಟುಡಿಯೋ ಪ್ರತಿನಿಧಿಗಳು ಮನವೊಲಿಕೆಗೆ ಯತ್ನಿಸಿದ್ದರು. ಈ ಮನವೊಲಿಕೆಗೆ ಬಗ್ಗದ ನರೇಂದ್ರಸ್ವಾಮಿ ಈಗಲೇ ಏನು ಹೇಳಲು ಸಾಧ್ಯವಿಲ್ಲ ಎಂದು ಹೇಳಿ ಕಳುಹಿಸಿದ್ದರು. ಇದನ್ನೂ ಓದಿ:  ತಕ್ಷಣವೇ ಜಾಲಿವುಡ್‌ ಸ್ಟುಡಿಯೋಸ್‌ ಸೀಲ್‌ ತೆಗೆಯಿರಿ: ಬೆ.ದಕ್ಷಿಣ ಡಿಸಿಗೆ ಡಿಕೆಶಿ ಸೂಚನೆ

ರಾತ್ರಿ ಜಾಲಿವುಡ್ ಸ್ಟುಡಿಯೋ ಪ್ರತಿನಿಧಿಗಳು ಡಿಕೆಶಿಯನ್ನು ಭೇಟಿಯಾಗಿದ್ದಾರೆ. ಆ ನಂತರ ಬೆಂಗಳೂರು ದಕ್ಣಿಣ ಜಿಲ್ಲಾಧಿಕಾರಿಗೆ ಕರೆ ಮಾಡಿ ಡಿಕೆಶಿ ಸ್ಟೇಟಸ್ ರಿಪೋರ್ಟ್‌ ಪಡೆದಿದ್ದಾರೆ. ಈ ವೇಳೆ ಪಿಸಿಬಿ ಅಧ್ಯಕ್ಷ ನರೇಂದ್ರಸ್ವಾಮಿ ಜೊತೆಯೂ ಡಿಕೆಶಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಕೋರ್ಟ್ ವಿಚಾರ ಕೋರ್ಟ್‌ನಲ್ಲೇ ನಡೆಯಲಿ. ಆದರೆ ಜಾಲಿವುಡ್ ಸಿಬ್ಬಂದಿಗೆ ನೋಟಿಸ್ ನೀಡಿದರೂ ಪ್ರತಿಕ್ರಿಯೆ ಕೊಡದಷ್ಟು ಉದ್ದಟತನ ತೋರಿದ್ದಾರೆ ಎಂದು ನರೇಂದ್ರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದಕ್ಕೆ, ಎಲ್ಲವನ್ನೂ ಸರಿಪಡಿಸಿಕೊಂಡು ಹೋಗುತ್ತಾರೆ. ಬಿಗ್‌ಬಾಸ್‌ನಂತಹ ದೊಡ್ಡ ಕಾರ್ಯಕ್ರಮ ಅರ್ಧಕ್ಕೆ ನಿಲ್ಲುವುದು ಬೇಡ ಎಂದು ಡಿಕೆಶಿ ಮನವೊಲಿಕೆ ಮಾಡಿದ್ದಾರೆ. ಮನವೊಲಿಕೆಯ ಬೆನ್ನಲ್ಲೇ ನೀವೇ ತೀರ್ಮಾನ ಮಾಡಿ ಎಂದು ಡಿಕೆಶಿಗೆ ನರೇಂದ್ರ ಸ್ವಾಮಿ ಹೇಳಿದ್ದಾರೆ. ಕೊನೆಗೆ ಡಿಕೆಶಿ, ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿಗೆ ಕರೆ ಮಾಡಿ ಜಾಲಿವುಡ್‌ ಸ್ಟುಡಿಯೋದಲ್ಲಿರುವ ಬಿಗ್‌ ಬಾಸ್‌ ಜಾಗವನ್ನು ಓಪನ್ ಮಾಡಲು ಸೂಚನೆ ನೀಡಿದ್ದಾರೆ. ಈ ಸೂಚನೆಯಂತೆ ಬಂದ್‌ ಆಗಿದ್ದ ಬಿಗ್‌ಬಾಸ್‌ ಮನೆಯನ್ನು ತೆರೆಯಲಾಗಿದ್ದು ಸ್ಪರ್ಧಿಗಳು ಮುಂಜಾನೆ ದೊಡ್ಮನೆ ಪ್ರವೇಶಿಸಿದ್ದಾರೆ.

Share This Article