ಮಾಲ್ಗುಡಿ ಡೇಸ್ ಚಿತ್ರಕ್ಕೆ ಬಿಗ್ ಬಾಸ್ ಧನರಾಜ್ ಎಂಟ್ರಿ

Public TV
1 Min Read

ಬೆಂಗಳೂರು:  ವಿಜಯ ರಾಘವೇಂದ್ರ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ‘ಮಾಲ್ಗುಡಿ ಡೇಸ್’ ಚಿತ್ರ ಚಿತ್ರೀಕರಣಕ್ಕೂ ಮುಂಚೆಯೇ ಟೈಟಲ್ ನಿಂದ ಸದ್ದು ಮಾಡಿ ಎಲ್ಲರ ಕುತೂಹಲಕ್ಕೆ ಕಾರಣವಾಗಿತ್ತು. ಈಗ ಚಿತ್ರತಂಡ ತೀರ್ಥಹಳ್ಳಿ ಶಿವಮೊಗ್ಗ ಸುತ್ತಮುತ್ತ ಚಿತ್ರೀಕರಣ ನಡೆಸುತ್ತಿದ್ದು, ಚಿತ್ರತಂಡದಿಂದ ಹೊಸದೊಂದು ಸುದ್ದಿ ಹೊರಬಂದಿದೆ.

ಬಿಗ್ ಬಾಸ್ 6ರ ಸ್ಪರ್ಧಿಯಾದ ಧನರಾಜ್ ತನ್ನ ಪ್ರಾಮಾಣಿಕ ಆಟ, ಎಲ್ಲರನ್ನು ನಗಿಸುವ ಗುಣದಿಂದ ಮನೆಮಾತಾಗಿದ್ದರು. ಬಿಗ್ ಬಾಸ್ ಅಂಚನ್ನು ತಲುಪಿದರೂ ಸ್ಪರ್ಧೆ ಗೆಲ್ಲದೆ ವೀಕ್ಷಕರ ಮನಸ್ಸನ್ನು ಗೆದ್ದಿದ್ದ ಧನರಾಜ್ ಬಿಗ್ ಬಾಸ್ ನಂತರ ಎಲ್ಲಿ ಹೋದರು ಎಂಬ ಪ್ರಶ್ನೆ ಎಲ್ಲರ ಮನಸ್ಸಿನಲ್ಲಿದ್ದದ್ದಂತೂ ನಿಜ. ಈಗ ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಬಿಗ್ ಬಾಸ್ ನಂತರ ಮೊದಲ ಬಾರಿಗೆ ಸಿನಿಮಾದಲ್ಲಿ ನಟಿಸುತ್ತಿರುವ ಧನರಾಜ್ ‘ಮಾಲ್ಗುಡಿ ಡೇಸ್’ ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ಮೂಲತಃ ಡಬ್ಬಿಂಗ್ ಆರ್ಟಿಸ್ಟ್ ಹಾಗು ಚಿತ್ರನಟರಾಗಿರುವ ಧನರಾಜ್ ಅವರಿಗೆ ಸಿನಿಮಾ ಹೊಸದಲ್ಲ. ಅವರ ಪಾತ್ರದ ಬಗ್ಗೆ ಸಿನಿಮಾ ನಿರ್ದೇಶಕರಾದ ಕಿಶೋರ್ ಮೂಡಬಿದ್ರೆಯವರನ್ನು ಕೇಳಿದಾಗ, ಸಿನಿಮಾದಲ್ಲಿ ಧನರಾಜ್ ಅವರದ್ದು ಪ್ರಮುಖ ಪಾತ್ರ. ಸಿನಿಮಾದ ಕತೆಯ ಸಾಗುವಿಕೆಯಲ್ಲಿ ಅವರ ಪಾತ್ರ ಬಹಳ ಗಮನ ಸೆಳೆಯುತ್ತದೆ ಎಂದಷ್ಟೇ ಹೇಳಿ ಕತೆಯ ಗುಟ್ಟನ್ನು ಬಿಟ್ಟುಕೊಡದೆ ಸುಮ್ಮನಾದರು. ಈಗಾಗಲೇ ಸತತ ಹತ್ತು ದಿನಗಳ ಕಾಲ ವಿಜಯ ರಾಘವೇಂದ್ರ ಮತ್ತಿತರ ನಟರೊಂದಿಗೆ ನಟಿಸುತ್ತಿರುವ ಧನರಾಜ್ ತೀರ್ಥಹಳ್ಳಿ ಸುತ್ತ ಮುತ್ತ ಚಿತ್ರೀಕರಣದಲ್ಲಿ ಮತ್ತಷ್ಟು ದಿನಗಳು ಬ್ಯುಸಿಯಾಗಿರಲಿದ್ದಾರೆ.

ಕಿಶೋರ್ ಮೂಡಬಿದ್ರೆ ನಿರ್ದೇಶನದ, ಕೆ.ರತ್ನಾಕರ್ ಕಾಮತ್ ನಿರ್ಮಾಣದ ‘ಮಾಲ್ಗುಡಿ ಡೇಸ್’ ಚಿತ್ರ ಟೈಟಲ್ ಮತ್ತು ಪಾತ್ರವರ್ಗದಿಂದ ಸುದ್ದಿ ಮಾಡಿತ್ತು. ಈಗ ಬಿಗ್ ಬಾಸ್ ಖ್ಯಾತಿಯ ಧನರಾಜ್ ಮಾಲ್ಗುಡಿ ಡೇಸ್ ಚಿತ್ರಕ್ಕೆ ಎಂಟ್ರಿ ಕೊಟ್ಟಿದ್ದು ಜನರಲ್ಲಿ ಮತ್ತಷ್ಟು ಕುತೂಹಲ ಹೆಚ್ಚಿಸಿದೆ. ಚಿತ್ರದಲ್ಲಿ ಅವರ ಪಾತ್ರವೇನು ಎನ್ನುವುದು ಬಿಡುಗಡೆಯ ನಂತರವಷ್ಟೇ ತಿಳಿಯಲಿದೆ.

Share This Article
Leave a Comment

Leave a Reply

Your email address will not be published. Required fields are marked *