ಅಪ್ರಾಪ್ತೆಯ ಕಿಡ್ನಾಪ್ ಕೇಸ್‍ಗೆ ಟ್ವಿಸ್ಟ್ – ಯುವತಿ ನನಗೆ ಬೇಕೆಂದು ಹಠ ಹಿಡಿದ ಯುವಕ

Public TV
2 Min Read

ಹಾಸನ: ಜಿಲ್ಲೆಯ ಆಲೂರು ತಾಲೂಕಿನಲ್ಲಿ 7 ತಿಂಗಳ ಹಿಂದಿನ ಅಪ್ರಾಪ್ತೆ ಅಪಹರಣ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.

ಅನ್ಯ ಕೋಮಿನ ಹುಡುಗಿಯನ್ನು ಕರೆದುಕೊಂಡು ಹೋಗಿದ್ದ ಮತ್ತೊಂದು ಕೋಮಿನ ಯುವಕ ಆಕೆಯೊಂದಿಗೆ ಲವ್ ಮ್ಯಾರೇಜ್ ಆಗಿದ್ದಾನೆ ಎನ್ನಲಾಗಿದೆ. ಪ್ರಕರಣ ಕೋರ್ಟ್ ಮೆಟ್ಟಿಲೇರಿದ್ದರಿಂದ ಹಾಸನದ ಬಾಲ ಭವನದಲ್ಲಿ ಆಶ್ರಯ ಪಡೆದಿದ್ದ ಆಕೆಯನ್ನು ಪೋಷಕರು ಕರೆದೊಯ್ಯಲು ಬಂದಾಗ ಎರಡೂ ಕಡೆಯವರ ನಡುವೆ ವಾಗ್ವಾದ, ತಳ್ಳಾಟದಿಂದಾಗಿ ದೊಡ್ಡ ಹೈಡ್ರಾಮವೇ ನಡೆದು ಹೋಗಿದೆ. ಈ ಮಧ್ಯೆ ನಾನು ಮೆಚ್ಚಿರುವ ಹುಡುಗಿಯನ್ನು ಬಲವಂತವಾಗಿ ಕರೆದುಕೊಂಡು ಹೋಗಲಾಗುತ್ತಿದೆ. ನನಗೆ ಆಕೆಯೇ ಬೇಕು. ಇಲ್ಲವಾದರೆ ಸಾಯುತ್ತೇನೆ ಎಂದು ರಘು ಅಳಲು ತೋಡಿಕೊಂಡಿದ್ದಾನೆ.

ತಂದೆಯಿಂದ ಕಿಡ್ನಾಪ್ ದೂರು:
ಆಲೂರು ತಾಲೂಕು ಕರಡೀಬೈಲು ಗ್ರಾಮದ ಮಹಮದ್ ಅಲಿ ಪುತ್ರಿ ರಂಶೀನಾ, ನವೆಂಬರ್ 2017ರ 13ರಂದು ಏಕಾಏಕಿ ಕಾಣೆಯಾಗಿದ್ದಳು. 2ನೇ ಪಿಯುಸಿ ಓದುತ್ತಿದ್ದ 17 ವರ್ಷದ ಮಗಳು ಏಕಾಏಕಿ ನಾಪತ್ತೆಯಾಗಿದ್ದರಿಂದ ಸಹಜವಾಗಿಯೇ ಪೋಷಕರು ಆತಂಕಗೊಂಡಿದ್ದರು. ಅದಾದ ಕೆಲ ದಿನಗಳ ನಂತರ ಆಲೂರು ಪೊಲೀಸರಿಗೆ ದೂರು ನೀಡಿದ್ದ ಪೋಷಕರು, ಪಕ್ಕದ ಕಾಗನೂರು ಹೊಸಳ್ಳಿ ಗ್ರಾಮದ ರಘು ತಮ್ಮ ಮಗಳನ್ನು ಕಿಡ್ನಾಪ್ ಮಾಡಿಕೊಂಡು ಹೋಗಿದ್ದು, ಕೂಡಲೇ ಮಗಳನ್ನು ಹುಡುಕಿಕೊಡಿ ಎಂದು ಮೊರೆ ಇಟ್ಟಿದ್ದರು.

ಹೈಕೋರ್ಟ್ ಮೆಟ್ಟಿಲೇರಿದ ರಂಶೀನಾ ಪೋಷಕರು:
ನಂತರ ತಮ್ಮ ಮಗಳ ಪತ್ತೆ ಸಂಬಂಧ ಪೊಲೀಸ್ ಪ್ರಯತ್ನ ಆಗದ ಹಿನ್ನೆಲೆಯಲ್ಲಿ ರಂಶೀನಾ ತಂದೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ಸ್ವೀಕರಿಸಿದ ಹೈಕೋರ್ಟ್ ಕೂಡಲೇ ಅಪ್ರಾಪ್ತೆಯನ್ನು ಹುಡುಕಿ ಎಂದು ಪೊಲೀಸರಿಗೆ ತಾಕೀತು ಮಾಡಿತ್ತು. ಅದಾದ ಕೆಲ ದಿನಗಳ ಬಳಿಕ ರಂಶೀನಾ ಪತ್ತೆಯಾದ ಬಳಿಕ ಪೊಲೀಸರು ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದರು. ಆಗ ಹುಡುಗಿಗೆ 18 ವರ್ಷ ತುಂಬುವವರೆಗೂ ಸರ್ಕಾರಿ ಬಾಲ ಮಂದಿರದಲ್ಲಿ ಉಳಿಸುವಂತೆ ಹೈಕೋರ್ಟ್ ಆದೇಶ ಮಾಡಿತ್ತು.

ಅದರಂತೆ ಬಾಲಭವನದಲ್ಲಿದ್ದ ರಂಶೀನಾಗೆ ಮೊನ್ನೆಯಷ್ಟೇ 18 ವರ್ಷ ತುಂಬಿದ್ದರಿಂದ ಆಕೆಯನ್ನು ನನ್ನೊಂದಿಗೆ ಕಳಿಸಿಕೊಡುವಂತೆ ಪ್ರಿಯಕರ ಸಂಬಂಧಪಟ್ಟ ಅಧಿಕಾರಿಗಳಲ್ಲಿ ಮನವಿ ಮಾಡಿದ್ದ. ಮಗಳು ಬಾಲ ಭವನದಲ್ಲಿರುವ ಸುದ್ದಿ ತಿಳಿದ ಆಕೆಯ ಪೋಷಕರು ಇಂದು ಅಲ್ಲಿಗೆ ಆಗಮಿಸಿ ಮಗಳನ್ನು ಜೊತೆಯಲ್ಲಿ ಕರೆದೊಯ್ಯಲು ಮುಂದಾದರು. ಈ ಸಂಬಂಧ ಎರಡೂ ಕಡೆಯವರ ನಡುವೆ ಮಾತಿನ ಚಕಮಕಿ, ನೂಕಾಟ-ತಳ್ಳಾಟ ನಡೆದು ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು.

ಯುವತಿ ನನ್ನನ್ನು ಮೆಚ್ಚಿ ಮದುವೆಯಾಗಿದ್ದಾಳೆ. ಆದರೆ ಆಕೆಯ ಪೋಷಕರು ಬಲವಂತ ಮಾಡುತ್ತಿದ್ದಾರೆ. ಇದಕ್ಕೆ ಅಧಿಕಾರಿಗಳೂ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ರಘು ಆರೋಪಿಸಿದ್ದಾನೆ. ನಾನು ಇಲ್ಲದೆ ಹೋದರೆ ಆಕೆ ಸಾಯುತ್ತಾಳೆ. ಆಕೆ ಇಲ್ಲದೇ ಹೋದರೆ ನಾನೂ ಸಾಯುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾನೆ.

ಆದರೆ ಮಗಳು ನಮಗೆ ಬೇಕು. ಆಕೆ ತುಂಬಾ ಬುದ್ದಿವಂತೆ. ಓದಿ ದೊಡ್ಡವಳಾದ ನಂತರ ನಮ್ಮನ್ನು ಸಾಕುತ್ತೇನೆ ಎಂದಿದ್ದಳು. ಆದರೀಗ ನಡೆಯಬಾರದ ಘಟನೆ ನಡೆದು ಹೋಗಿದೆ. ನಮಗೆ ನಮ್ಮ ಮಗಳು ಬೇಕು. ಆಕೆಯ ಕೊರಗಲ್ಲೇ ತಾಯಿ ಹಾಸಿಗೆ ಹಿಡಿದಿದ್ದಾಳೆ ಎಂದು ಪೋಷಕರು ಕಣ್ಣೀರಿಡುತ್ತಿದ್ದಾರೆ. ಹೀಗಾಗಿ ಪ್ರಕರಣ ಒಂದು ರೀತಿಯಲ್ಲಿ ಕಗ್ಗಂಟಾಗಿದ್ದು ಮುಂದೆ ಯಾವ ರೀತಿ ಅಂತ್ಯ ಕಾಣಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *