ವಿ.ಸೋಮಣ್ಣಗೆ ಬಿಗ್ ಶಾಕ್ – ಸಂಸದರ ಕಚೇರಿ ವಾಪಸ್ ಪಡೆದ ಸರ್ಕಾರ

Public TV
1 Min Read

ತುಮಕೂರು: ಉದ್ಘಾಟನೆಗೆ ಸಿದ್ಧವಾಗಿದ್ದ ನೂತನ ಸಂಸದರ ಕಚೇರಿ ವಾಪಸ್ ಪಡೆದು ಜಲಶಕ್ತಿ ಹಾಗೂ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣಗೆ (V Somanna) ರಾಜ್ಯ ಸರ್ಕಾರ ಶಾಕ್ ನೀಡಿದೆ.

ತುಮಕೂರಿನ ರೈಲ್ವೆ ನಿಲ್ದಾಣ ಬಳಿ ಇರುವ ಹಳೆಯ ಪರಿವೀಕ್ಷಣಾ ಮಂದಿರವನ್ನು (Inspection Bungalow) ಸೋಮಣ್ಣ ಅವರಿಗೆ ಸರ್ಕಾರ ನೀಡಿತ್ತು. ಆ.18 ಭಾನುವಾರದಂದು ನೂತನ ಕಚೇರಿ ಉದ್ಘಾಟನೆಗೆ ಸಿದ್ದತೆ ಮಾಡಿಕೊಳ್ಳಲಾಗಿತ್ತು.

ಸೋಮಣ್ಣ ಅವರು ನೂತನ ಕಚೇರಿಯಲ್ಲಿ ಟೇಬಲ್ ಹಾಗೂ ಕುರ್ಚಿಗಳನ್ನು ಹಾಕಿಸಿದ್ದರು. ವಿ.ಸೋಮಣ್ಣ, ಜಲಶಕ್ತಿ ಹಾಗೂ ರೈಲ್ವೆ ರಾಜ್ಯ ಸಚಿವರು ಭಾರತ ಸರ್ಕಾರ ಲೋಕಸಭಾ ಸದಸ್ಯರ ಕಚೇರಿ, ತುಮಕೂರು ಎಂದು ನಾಮಫಲಕ ಕೂಡ ಹಾಕಲಾಗಿತ್ತು. ಆದರೆ ರಾಜ್ಯ ಸರ್ಕಾರ ಯಾವುದೇ ಕಾರಣ ನೀಡದೇ ನೂತನ ಸಂಸದರ ಕಚೇರಿ ವಾಪಸ್ ಪಡೆದಿದೆ. ಇದನ್ನೂ ಓದಿ: ಕರ್ನಾಟಕ ಸೇರಿದಂತೆ ಯಾವುದೇ ರಾಜ್ಯದಲ್ಲಿ ಸದ್ಯಕ್ಕೆ ಉಪಚುನಾವಣೆ ಇಲ್ಲ

ಕಚೇರಿ ಉಪಯೋಗಕ್ಕೆ ನೀಡಿದ ಅನುಮೋದನೆಯು ಈ ಕೂಡಲೇ ಹಿಂಪಡೆಯಲಾಗಿರುವ ಬಗ್ಗೆ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿ, ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ರಾಜಶೇಖರ ಸೂಚಿಸಿದ್ದಾರೆ. ಇದನ್ನೂ ಓದಿ: ಪ್ರಶಸ್ತಿಯನ್ನು ಪುನೀತ್‌ ರಾಜ್‌ಕುಮಾರ್‌, ದೈವಕ್ಕೆ, ದೈವ ನರ್ತಕರಿಗೆ ಅರ್ಪಣೆ ಮಾಡುತ್ತೇನೆ- ರಿಷಬ್ ಶೆಟ್ಟಿ

ರಾಜ್ಯ ಸರ್ಕಾರದ ನಡೆಗೆ ತುಮಕೂರು ನಗರ ಬಿಜೆಪಿ ಶಾಸಕ ಜಿ.ಬಿ ಜ್ಯೋತಿ ಗಣೇಶ್ (Jyothi Ganesh) ಕಿಡಿಕಾರಿದ್ದಾರೆ. ಇಲ್ಲಿ ಇಷ್ಟು ವರ್ಷ ಏನಾಗಿದೆ ಎಂದು ಎಲ್ಲರಿಗೂ ಗೊತ್ತಿದೆ. ಕ್ಷುಲ್ಲಕ ರಾಜಕಾರಣ ಮಾಡಬಾರದು. ಈ ಜಾಗವನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡುವ ಮಾತೇ ಇಲ್ಲ. ಯಾರು ಏನು ಮಾಡುತ್ತಾರೋ ನೋಡೋಣ. ಈ ಭಾನುವಾರ ಕಚೇರಿ ಉದ್ಘಾಟನೆ ಕಾರ್ಯಕ್ರಮಕ್ಕೆ ಸಿದ್ದತೆ ಮಾಡಿಕೊಳ್ಳಲಾಗಿತ್ತು. ಜಿಲ್ಲೆಯ ಎಲ್ಲಾ ಮುಖಂಡರಿಗೆ ಆಹ್ವಾನ ನೀಡಲಾಗಿತ್ತು. ಈಗ ಏಕಾಏಕಿ ರದ್ದು ಮಾಡಿ ಆದೇಶ ಮಾಡಿದ್ದಾರೆ. ಈ ರೀತಿಯ ನಡೆ ಸರಿಯಲ್ಲ ಎಂದು ಸಿಟ್ಟು ಹೊರಹಾಕಿದ್ದಾರೆ.

Share This Article