ಟ್ರಂಪ್‌ಗೆ ದೊಡ್ಡ ಹಿನ್ನಡೆ| ಇಸ್ರೇಲ್‌ ಒತ್ತಡದಿಂದ ಇರಾನ್‌ ಮೇಲೆ ಯುದ್ಧ: ಭಯೋತ್ಪಾದನಾ ನಿಗ್ರಹ ಮುಖ್ಯಸ್ಥ ರಾಜೀನಾಮೆ

3 Min Read

– ಟ್ರಂಪ್‌ಗೆ ದೀರ್ಘ ರಾಜೀನಾಮೆ ಪತ್ರ ಬರೆದ ಜೋ ಕೆಂಟ್
– ಇರಾನ್ ವಿರುದ್ಧದ ಯುದ್ಧ ನನ್ನ ಆತ್ಮಸಾಕ್ಷಿಗೆ ವಿರುದ್ಧವಾಗಿದೆ
– ಟ್ರಂಪ್‌ ನಿರ್ಧಾರವನ್ನು ಟೀಕಿಸಿ ರಾಜೀನಾಮೆ ನೀಡಿದ ಮೊದಲ ಸೇನಾಧಿಕಾರಿ

ವಾಷಿಂಗ್ಟನ್‌: ಇರಾನ್‌ ವಿರುದ್ಧದ ಯುದ್ಧದಲ್ಲಿ (Iran War) ನಾವು ಗೆದ್ದಿದ್ದೇವೆ ಎಂದು ಬೀಗುತ್ತಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಅವರಿಗೆ ದೊಡ್ಡ ಹಿನ್ನೆಡೆಯಾಗಿದೆ. ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರದ (US National Counterterrorism Center) ರಾಷ್ಟ್ರೀಯ ಗುಪ್ತಚರ ನಿರ್ದೇಶಕ ಜೋ ಕೆಂಟ್ (Joe Kent) ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಇರಾನ್ ನಮ್ಮ ರಾಷ್ಟ್ರಕ್ಕೆ ಯಾವುದೇ ಬೆದರಿಕೆಯನ್ನು ಒಡ್ಡಲಿಲ್ಲ. ಆದರೆ ಇಸ್ರೇಲ್‌ (Isreal) ಒತ್ತಡದಿಂದ ನಾವು ಯುದ್ಧವನ್ನು ಆರಂಭಿಸಿದ್ದೇವೆ ಎಂದು ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದು ಈಗ ದೊಡ್ಡ ಸಂಚಲನ ಮೂಡಿಸಿದೆ.

ಇಸ್ರೇಲ್ ಮತ್ತು ಅದರ ಅಮೇರಿಕನ್ ಲಾಬಿಯ ಒತ್ತಡದಿಂದಾಗಿ ಇರಾನ್ ವಿರುದ್ಧದ ಯುದ್ಧವನ್ನು ಪ್ರಾರಂಭಿಸಲಾಗಿದ್ದು ಇದು ನನ್ನ ಆತ್ಮಸಾಕ್ಷಿಗೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ. ಇರಾನ್ ಯುದ್ಧದ ವಿಷಯದಲ್ಲಿ ಟ್ರಂಪ್ ಆಡಳಿತದ ನೀತಿಯನ್ನು ನೇರವಾಗಿ ಟೀಕಿಸಿ ರಾಜೀನಾಮೆ ನೀಡಿದ ಮೊದಲ ಪ್ರಮುಖ ಅಧಿಕಾರಿ ಇವರಾಗಿದ್ದಾರೆ.

ರಾಜೀನಾಮೆ ಪತ್ರದಲ್ಲಿ ಏನಿದೆ?
ಬಹಳಷ್ಟು ಆಲೋಚನೆ ಮಾಡಿ ಇಂದು ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರದ ನಿರ್ದೇಶಕ ಹುದ್ದೆಗೆ ರಾಜೀನಾಮೆ ನೀಡಲು ನಾನು ನಿರ್ಧರಿಸಿದ್ದೇನೆ.

ಇರಾನ್‌ನಲ್ಲಿ ನಡೆಯುತ್ತಿರುವ ಯುದ್ಧವನ್ನು ಒಳ್ಳೆಯ ಮನಸ್ಸಿನಿಂದ ಬೆಂಬಲಿಸಲು ನನಗೆ ಸಾಧ್ಯವಿಲ್ಲ. ಇರಾನ್ ನಮ್ಮ ರಾಷ್ಟ್ರಕ್ಕೆ ಯಾವುದೇ ಬೆದರಿಕೆಯನ್ನು ಒಡ್ಡಿರಲಿಲ್ಲ. ಇಸ್ರೇಲ್ ಮತ್ತು ಅದರ ಪ್ರಬಲ ಅಮೆರಿಕ ಲಾಬಿಯ ಒತ್ತಡದಿಂದಾಗಿ ನಾವು ಈ ಯುದ್ಧವನ್ನು ಪ್ರಾರಂಭಿಸಿದ್ದೇವೆ ಎನ್ನುವುದು ಸ್ಪಷ್ಟವಾಗಿದೆ.

2016, 2020, 2024 ರಲ್ಲಿ ನೀವು ಪ್ರಚಾರ ಮಾಡಿದ ಮೌಲ್ಯಗಳು ಮತ್ತು ವಿದೇಶಾಂಗ ನೀತಿಗಳನ್ನು ನಾನು ಬೆಂಬಲಿಸುತ್ತೇನೆ. ನಿಮ್ಮ ಮೊದಲ ಅವಧಿಯಲ್ಲಿ ಇವುಗಳನ್ನು ನೀವು ಜಾರಿಗೆ ತಂದಿದ್ದೀರಿ. 2025 ರ ಜೂನ್‌ವರೆಗೆ ಮಧ್ಯಪ್ರಾಚ್ಯದಲ್ಲಿನ ಯುದ್ಧಗಳು ಅಮೆರಿಕದ ದೇಶಭಕ್ತರ ಅಮೂಲ್ಯ ಜೀವಗಳನ್ನು ಕಸಿದುಕೊಳ್ಳುವ ಮತ್ತು ನಮ್ಮ ರಾಷ್ಟ್ರದ ಸಂಪತ್ತು, ಅಭಿವೃದ್ಧಿಯನ್ನು ಕುಂಠಿತ ಮಾಡುವ ಬಲೆ ಎಂದು ಅರ್ಥೈಸಿಕೊಂಡಿದ್ದವರು ನೀವು. ಇದನ್ನೂ ಓದಿ: ಟ್ರಂಪ್‌ಗೆ ಮುಖಭಂಗ – ಯುದ್ಧ ನೌಕೆಗಳನ್ನು ಕಳುಹಿಸಲ್ಲ ಎಂದ ಮಿತ್ರ ದೇಶಗಳು

ನಿಮ್ಮ ಮೊದಲ ಆಡಳಿತದಲ್ಲಿ ನಮ್ಮನ್ನು ಅಂತ್ಯವಿಲ್ಲದ ಯುದ್ಧಗಳಿಗೆ ಸೆಳೆಯದೇ ಮಿಲಿಟರಿ ಶಕ್ತಿಯನ್ನು ಹೇಗೆ ಬಳಕೆ ಮಾಡಬೇಕು ಎನ್ನುವುದನ್ನು ಯಾವುದೇ ಆಧುನಿಕ ಅಧ್ಯಕ್ಷರಿಗಿಂತ ಬಹಳ ಚೆನ್ನಾಗಿ ನಿಭಾಯಿಸಿದ್ದೀರಿ. ಕಾಸಮ್ ಸೋಲಮಾನಿಯನ್ನು ಹತ್ಯೆ ಮಾಡುವ ಮೂಲಕ ಮತ್ತು ಐಸಿಸ್ (ISIS) ಸೋಲಿಸುವ ಮೂಲಕ ನಿಮ್ಮ ಕಾರ್ಯಕ್ಷಮತೆಯನ್ನು ಪ್ರದರ್ಶಿಸಿದ್ದೀರಿ.

ಈ ಆಡಳಿತದ ಆರಂಭದಲ್ಲಿ ಉನ್ನತ ಶ್ರೇಣಿಯ ಇಸ್ರೇಲಿ ಅಧಿಕಾರಿಗಳು ಮತ್ತು ಅಮೆರಿಕ ಮಾಧ್ಯಮದ ಪ್ರಭಾವಿ ವ್ಯಕ್ತಿಗಳು ನಿಮ್ಮ ಅಮೆರಿಕ ಫಸ್ಟ್ ವೇದಿಕೆಯನ್ನು ಸಂಪೂರ್ಣವಾಗಿ ದುರ್ಬಲಗೊಳಿಸಿದರು. ಇರಾನ್‌ನೊಂದಿಗೆ ಯುದ್ಧವನ್ನು ಪ್ರೋತ್ಸಾಹಿಸಲು ಯುದ್ಧ ಪರ ಭಾವನೆಗಳನ್ನು ಬಿತ್ತುವ ತಪ್ಪು ಮಾಹಿತಿಯ ಅಭಿಯಾನ ನಡೆಸಿದರು.

ಇರಾನ್ ಅಮೆರಿಕಕ್ಕೆ ಬೆದರಿಕೆಯನ್ನು ಒಡ್ಡಿದೆ ಎಂದು ನಿಮ್ಮನ್ನು ನಂಬಿಸಲು ಈ ವೇದಿಕೆಯಲ್ಲಿ ಪ್ರಚಾರ ಮಾಡಲಾಯಿತು. ಈಗಲೇ ದಾಳಿ ನಡೆಸಿದರೆ ಸ್ಪಷ್ಟವಾಗಿ ಜಯ ಸಿಗಲಿದೆ ಎಂದು ಸುಳ್ಳನ್ನು ಬಿಂಬಿಸಲಾಯಿತು. ನಮ್ಮ ದೇಶದ ಸಾವಿರಾರು ಪುರುಷರು ಮತ್ತು ಮಹಿಳೆಯರ ಜೀವಗಳನ್ನು ಬಲಿತೆಗೆದುಕೊಂಡ ವಿನಾಶಕಾರಿ ಇರಾಕ್ ಯುದ್ಧದಲ್ಲಿ ಭಾಗಿಯಾಗಲು ಇಸ್ರೇಲಿಗಳು ಇದೇ ತಂತ್ರವನ್ನು ಬಳಸಿ ನಮ್ಮನ್ನು ಪ್ರಚೋದಿಸಿದ್ದರು. ಆದರೆ ನಾವು ಮತ್ತೆ ಈ ತಪ್ಪನ್ನು ಮಾಡಲು ಸಾಧ್ಯವಿಲ್ಲ.

11 ಬಾರಿ ಯುದ್ಧ ಮಾಡಲು ನಿಯೋಜಿಸಲ್ಪಟ್ಟ ಒಬ್ಬ ಅನುಭವಿಯಾಗಿ, ಇಸ್ರೇಲ್‌ ಪ್ರಾಯೋಜಕತ್ವದ ಯುದ್ಧದಲ್ಲಿ ನನ್ನ ಪ್ರೀತಿಯ ಪತ್ನಿ ಶಾನನ್ ಅನ್ನು ಕಳೆದುಕೊಂಡ ಗೋಲ್ಡ್ ಸ್ಟಾರ್ ಪತಿಯಾಗಿ ಹೇಳುತ್ತಿದ್ದೇನೆ. ಮುಂದಿನ ಪೀಳಿಗೆಯ ಅಮೆರಿಕದ ಜನರಿಗೆ ಯಾವುದೇ ಪ್ರಯೋಜನವನ್ನು ನೀಡದ ಅಥವಾ ಅಮೆರಿಕನ್ ಜೀವಗಳ ವೆಚ್ಚವನ್ನು ಸಮರ್ಥಿಸದ ಯುದ್ಧದಲ್ಲಿ ಹೋರಾಡಲು ಮತ್ತು ಸಾಯಲು ಕಳುಹಿಸುವುದನ್ನು ನಾನು ಎಂದಿಗೂ ಬೆಂಬಲಿಸಲು ಸಾಧ್ಯವಿಲ್ಲ.

ನಾವು ಇರಾನ್‌ನಲ್ಲಿ ಏನು ಮಾಡುತ್ತಿದ್ದೇವೆ ಮತ್ತು ನಾವು ಅದನ್ನು ಯಾರಿಗಾಗಿ ಮಾಡುತ್ತಿದ್ದೇವೆ ಎನ್ನುವುದರ ಕುರಿತು ನೀವು ಯೋಚಿಸಬೇಕೆಂದು ನಾನು ಪ್ರಾರ್ಥಿಸುತ್ತೇನೆ. ದಿಟ್ಟ ನಿರ್ಧಾರ ಕೈಗೊಳ್ಳಲು ಈಗ ಸರಿಯಾದ ಸಮಯ ಬಂದಿದೆ. ನೀವು ಕೈಗೊಳ್ಳುವ ನಿರ್ಧಾರ ನಮ್ಮ ದೇಶಕ್ಕೆ ಹೊಸ ಹಾದಿಯನ್ನು ತೋರಿಸಬಹುದು ಅಥವಾ ನಾವು ಅವನತಿಯತ್ತ ಜಾರಬಹುದು. ನಿಮ್ಮ ಆಡಳಿತದಲ್ಲಿ ರಾಷ್ಟ್ರಕ್ಕೆ ಸೇವೆ ಸಲ್ಲಿಸಿದ್ದು ಹೆಮ್ಮೆಯ ಸಂಗತಿ ಎಂದು ರಾಜೀನಾಮೆ ಪತ್ರದಲ್ಲಿ ಬರೆದಿದ್ದಾರೆ.

Share This Article