ಕರ್ನಾಟಕ ಹಿಜಬ್‌ ಗಲಾಟೆಯಿಂದ ನೊಂದಿದ್ದೆ: ಗೋರಖನಾಥ ದೇವಾಲಯದ ದಾಳಿಕೋರ

Public TV
2 Min Read

– ಐಸಿಸ್‌ ಉಗ್ರರಿಗೆ ನೇಪಾಳದಿಂದ ಹಣ ರವಾನೆ
– ಭಾರತ ಮುಸ್ಲಿಮ್‌ ರಾಷ್ಟ್ರವಾಗಬೇಕು
– ತನಿಖೆಯ ವೇಳೆ ತಪ್ಪೊಪ್ಪಿಕೊಂಡ ಅಬ್ಬಾಸಿ

ಲಕ್ನೋ: ಸಿಎಎ, ಎನ್‌ಆರ್‌ಸಿ ಮತ್ತು ಮತ್ತು ಕರ್ನಾಟಕ ಹಿಜಬ್‌ ವಿವಾದದಿಂದ ನಾನು ನೊಂದಿದ್ದೆ ಎಂದು ಉತ್ತರ ಪ್ರದೇಶದ ಗೋರಖಪುರದ ಗೋರಖನಾಥ ದೇವಾಲಯದ ಮೇಲೆ ದಾಳಿ ನಡೆಸಿದ್ದ ಐಐಟಿ ಪದವೀಧರ ಅಹ್ಮದ್ ಮುರ್ತಾಜಾ ಅಬ್ಬಾಸಿ ಹೇಳಿದ್ದಾನೆ.

ಆರೋಪಿಯನ್ನು ಲಕ್ನೋದ ಭಯೋತ್ಪಾದನಾ ನಿಗ್ರಹ ದಳದ ಪ್ರಧಾನ ಕಚೇರಿಗೆ ಕರೆತಂದ ಬಳಿಕ ವಿಚಾರಣೆ ನಡೆಸಲಾಗಿದೆ. ಈ ವೇಳೆ ಆತ ತನ್ನ ಕೃತ್ಯದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ ಎಂದು ಮೂಲಗಳನ್ನು ಆಧಾರಿಸಿ ಮಾಧ್ಯಮವೊಂದು ವರದಿ ಮಾಡಿದೆ.

ವಿಚಾರಣೆಯ ವೇಳೆ ಆರೋಪಿ ಮುರ್ತಾಜಾ ಹಲವು ವಿಚಾರಗಳನ್ನು ಬಹಿರಂಗಪಡಿಸಿದ್ದು, ಗೋರಖನಾಥ ದೇವಾಲಯದ ಸಂಕೀರ್ಣದ ಹೊರಗೆ ಪೊಲೀಸರ ಮೇಲೆ ಹಲ್ಲೆ ನಡೆಸಿದ ಕಾರಣವನ್ನು ತಿಳಿಸಿದ್ದಾನೆ.

ಮುಸ್ಲಿಮರ ವಿರುದ್ಧ ಸರ್ಕಾರ ಸಿಎಎ ಮತ್ತು ಎನ್‌ಆರ್‌ಸಿಯನ್ನು ಜಾರಿಗೆ ತಂದಿದೆ. ಕರ್ನಾಟಕದಲ್ಲಿ ಹಿಜಬ್‌ ಧರಿಸಲು ಸಹ ನಿರ್ಬಂಧ ಹೇರಲಾಗಿದೆ. ಈ ಎಲ್ಲ ವಿಚಾರಗಳಿಂದ ನಾನು ನೊಂದಿದ್ದೆ. ಹೀಗಾಗಿ ಪ್ರತೀಕಾರ ತೀರಿಸಲು ಇದು ಸರಿಯಾದ ಸಮಯ ಎಂದು ಭಾವಿಸಿದ್ದೆ ಎಂದು ಹೇಳಿದ್ದಾನೆ.

ಭಾರತವನ್ನು ಮುಸ್ಲಿಂ ರಾಷ್ಟ್ರವನ್ನಾಗಿ ಮಾಡುವ ಆಸೆಯನ್ನು ಆತ ಹೊಂದಿದ್ದ ವಿಚಾರ ತನಿಖೆಯ ವೇಳೆ ತಿಳಿದು ಬಂದಿದೆ. ತನಿಖಾಧಿಕಾರಿಗಳು ಆತನ ಪಾಸ್‌ಪೋರ್ಟ್‌ ವಶಕ್ಕೆ ಪಡೆದಿದ್ದಾರೆ. 6 ತಿಂಗಳ ಹಿಂದೆ ಆತ ದುಬೈಗೆ ತೆರಳಿದ್ದ. ಮುಂಬೈನಲ್ಲಿ ನೆಲೆಸಿದ್ದ ಅಬ್ಬಾಸಿ ಪ್ರಸಿದ್ಧ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದ. ಇದನ್ನೂ ಓದಿ: ಯೋಗಿಗೆ ಬೆದರಿಕೆ ಹಾಕಿದ್ದ ಎಸ್‍ಪಿ ಶಾಸಕನ ಪೆಟ್ರೋಲ್ ಬಂಕ್ ಧ್ವಂಸ

ಮೊಬೈಲ್‌ ವಶಪಡಿಸಿಕೊಂಡಿದ್ದು ಈ ವೇಳೆ ಒಂದು ಧರ್ಮದ ವಿರುದ್ಧ ದ್ವೇಷ ಸಾರುವ ವಾಟ್ಸಪ್‌ ಗ್ರೂಪಿನ ಸದಸ್ಯನಾಗಿರುವುದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಈ ಗ್ರೂಪಿನ ಸದಸ್ಯರನ್ನು ಪತ್ತೆ ಹಚ್ಚಲು ಪೊಲೀಸರು ಮುಂದಾಗಿದ್ದಾರೆ.

ನೇಪಾಳಕ್ಕೆ ಭೇಟಿ ನೀಡಿದ್ದ ಅಬ್ಬಾಸಿ ಅಲ್ಲಿನ ಬ್ಯಾಂಕ್‌ನಿಂದ ಸಿರಿಯಾದಲ್ಲಿರುವ ಐಸಿಸ್‌ ಉಗ್ರರಿಗೆ ಹಣವನ್ನು ಕಳುಹಿಸಿದ್ದ. ಅದಕ್ಕಾಗಿ ಪೇಪಾಲ್‌ ಅಪ್ಲಿಕೇಶನ್‌ ಬಳಸಿದ್ದ. ಐಸಿಸ್‌ ಉಗ್ರರ ಜೊತೆ ತನ್ನ ಆಪ್ತ ಅಬ್ದುಲ್‌ ರೆಹಮಾನ್‌ ಜೊತೆ ವೀಡಿಯೋ ಕಾನ್ಫರೆನ್ಸ್‌ನಲ್ಲೂ ಮಾತನಾಡಿದ್ದಾನೆ ಎಂದು ವರದಿ ತಿಳಿಸಿದೆ. ಇದನ್ನೂ ಓದಿ: ಮನೆ ಮುಂದೆ ಬುಲ್ಡೋಜರ್ ಪ್ರತ್ಯಕ್ಷ – ಪರಾರಿಯಾಗಿದ್ದ ಯುಪಿ ರೇಪ್ ಆರೋಪಿ ಶರಣು

ಕೆಲ ದಿನಗಳ ಹಿಂದೆ ಅಬ್ಬಾಸಿ ಕೆನಡಾ ವೀಸಾ ಪಡೆದಿದ್ದ. ಶೀಘ್ರವೇ ಕೆನಡಾಗೆ ಅಬ್ಬಾಸಿ ತೆರಳುವವನಿದ್ದ. ಆತನ ಕೃತ್ಯದ ಬಗ್ಗೆ ನಮಗೆ ಏನು ಗೊತ್ತಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಮಗ ಮಾನಸಿನ ಅಸ್ವಸ್ಥತೆಯಿಂದ ಬಳಲುತ್ತಿದ್ದಾನೆ ಎಂದು ಅಬ್ಬಾಸಿ ತಂದೆ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *