ತೃತೀಯ ಲಿಂಗಿಗಳಿಗೆ ತೆರಿಗೆ ಸಂಗ್ರಹ ಕೆಲಸ ನೀಡಿದ ನಗರಸಭೆ

Public TV
2 Min Read

– ತೆರಿಗೆ ಜೊತೆ ವ್ಯಾಪಾರ ಪರವಾನಗಿ ಶುಲ್ಕ ವಸೂಲಿಗೆ ನೇಮಕ
– ಡ್ರಗ್ಸ್ ದಂಧೆ, ವೇಶ್ಯಾವಾಟಿಕೆ ವಿವಿಧ ಅಕ್ರಮ ಚಟುವಟಿಕೆ ತಡೆಯಲು ಕ್ರಮ
– ಸಮವಸ್ತ್ರ, ಐಡಿ ಕಾರ್ಡ್, ವಾಹನ, ಇಂಧನ ಸೌಲಭ್ಯ

ಭುವನೇಶ್ವರ: ಒಡಿಶಾ ರಾಜಧಾನಿ ಭುವನೇಶ್ವರದಲ್ಲಿ ತೃತೀಯ ಲಿಂಗಿಗಳಿಗೆ ಕೆಲಸ ನೀಡುವ ವಿಭಿನ್ನ ಪ್ರಯತ್ನಕ್ಕೆ ಮುಂದಾಗಿದ್ದು, ನಗರಸಭೆ ಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ನೇಮಿಸಿಕೊಂಡು ತೆರಿಗೆ ಸಂಗ್ರಹ ಹಾಗೂ ವ್ಯಾಪಾರ ಪರವಾನಗಿ ಶುಲ್ಕವನ್ನು ಸಂಗ್ರಹಿಸಲಾಗುತ್ತಿದೆ.

ಒಡಿಶಾದ ಭುವನೇಶ್ವರ ನಗರಸಭೆ(ಬಿಎಂಸಿ) ಇಂತಹದ್ದೊಂದು ವಿಭಿನ್ನ ಪ್ರಯತ್ನಕ್ಕೆ ಮುಂದಾಗಿದ್ದು, ತೃತೀಯ ಲಿಂಗಿಗಳಿಗೂ ಉದ್ಯೋಗಾವಕಾಶ ನೀಡಬೇಕು. ಈ ನಿಟ್ಟಿನಲ್ಲಿ ಅವರನ್ನು ಸ್ವಾವಲಂಬಿಗಳನ್ನಾಗಿ ಹಾಗೂ ಸ್ವಾಭಿಮಾನದಿಂದ ಬದುಕವಂತೆ ಮಾಡಬೇಕೆಂಬ ಉದ್ದೇಶದಿಂದ ನಗರಸಭೆ ಈ ಕಾರ್ಯಕ್ಕೆ ಮುಂದಾಗಿದೆ. ಈ ಕುರಿತು ಬಿಎಂಸಿ ಹಾಗೂ ಟಿಜಿ ಸ್ವೀಕೃತಿ ಸ್ವ-ಸಹಾಯ ಸಂಘ(ಎಸ್‍ಎಚ್‍ಜಿ)ದ ಮಧ್ಯೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಮೂಲಕ ತೃತೀಯ ಲಿಂಗಿಗಳನ್ನು ಆಯ್ಕೆ ಮಾಡಿ ಅವರಗೆ ಹಿಡುವಳಿ ತೆರಿಗೆ ಹಾಗೂ ವ್ಯಾಪಾರ ಪರವಾನಗಿಯ ಶುಲ್ಕವನ್ನು ವಸೂಲಿ ಮಾಡಲು ಬಳಸಿಕೊಳ್ಳಲಾಗುತ್ತಿದೆ.

ಒಂದು ವರ್ಷದ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು, ಸ್ಥಳೀಯ ತೃತೀಯ ಲಿಂಗಿ ಸಮುದಾಯದವರಿಗೆ ನಗರಸಭೆಯ ಹಿಡುವಳಿ ತೆರಿಗೆ ಹಾಗೂ ವ್ಯಾಪಾರ ಪರವಾನಗಿ ಶುಲ್ಕವನ್ನು ವಸೂಲಿ ಮಾಡುವ ಜವಾಬ್ದಾರಿಯನ್ನು ವಹಿಸಿದೆ. ಎಸ್‍ಎಚ್‍ಜಿ ತಾವು ಸಂಗ್ರಹಿಸಿದ ಹಣ ಹಾಗೂ ತೆರಿಗೆ ಕುರಿತು ಬಿಎಂಸಿಗೆ ಪ್ರತಿ ತಿಂಗಳು 5ರಂದು ವರದಿ ಸಲ್ಲಿಸುತ್ತದೆ. ಒಪ್ಪಂದ ಪೂರ್ಣಗೊಂಡ ನಂತರ ಎರಡೂ ಸಂಸ್ಥೆಗಳ ಒಪ್ಪಿಗೆ ಮೇರೆಗೆ ಮತ್ತೆ ನವೀಕರಿಸಲಾಗುತ್ತದೆ.

ಈ ಕುರಿತು ನಗರಸಭೆಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ತೆರಿಗೆ ಸಂಗ್ರಹಿಸಿದ ಆಧಾರದ ಮೇಲೆ ತೃತೀಯ ಲಿಂಗಿಗಳಿಗೆ ಸಂಭಾವನೆ ನೀಡಲಾಗುತ್ತದೆ. ಅಲ್ಲದೆ ನಿಗದಿಪಡಿಸಿದ ಸ್ಥಳಕ್ಕೆ ತೆರಳಿ ಹಣ ಸಂಗ್ರಹಿಸಲು ತೃತೀಯ ಲಿಂಗಿಗಳಿಗೆ ವಾಹನ, ಇಂಧನ, ಸಮವಸ್ತ್ರ ಹಾಗೂ ಗುರುತಿನ ಚೀಟಿ ನೀಡಲಾಗಿರುತ್ತದೆ. ಮಾಸಿಕ ಸಂಗ್ರಹ 40 ಲಕ್ಷ ರೂ.ಗಿಂತ ಕಡಿಮೆ ಇದ್ದರೆ ಶೇ.1ರಷ್ಟು, 40 ಲಕ್ಷದಿಂದ 60 ಲಕ್ಷ ರೂ. ವರೆಗೆ ಇದ್ದರೆ ಶೇ.1.5ರಷ್ಟು ಹಣವನ್ನು ಎಸ್‍ಎಚ್‍ಜಿ ಸಂಸ್ಥೆಗೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ನಿರುದ್ಯೋಗದಿಂದಾಗಿ ತೃತೀಯ ಲಿಂಗಿಗಳು ಡ್ರಗ್ಸ್ ದಂಧೆ, ವೇಶ್ಯಾವಾಟಿಕೆ ಸೇರಿದಂತೆ ವಿವಿಧ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ್ದು, ಇದರಿಂದ ಅವರನ್ನು ರಕ್ಷಿಸಿ, ಉದ್ಯೋಗ ನೀಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವರ್ಷದ ಆರಂಭದಲ್ಲಿ ತೃತೀಯ ಲಿಂಗಿ ವ್ಯಕ್ತಿಗಳ(ಹಕ್ಕುಗಳ ರಕ್ಷಣೆ) ಮಸೂದೆ ವಿರುದ್ಧ ತೃತೀಯ ಲಿಂಗಿ ಸಮುದಾಯದ ಸದಸ್ಯರು ಪ್ರತಿಭಟನೆ ನಡೆಸಿದ್ದರು. ನಂತರದ ಚರ್ಚೆಯಲ್ಲಿ ತೃತೀಯ ಲಿಂಗಿ ಸಮುದಾಯದ ಪ್ರತಿನಿಧಿಗಳು ಉದ್ಯೋಗದ ಕೊರತೆ ಹಾಗೂ ಶಿಕ್ಷಣದದ ಅವಕಾಶಗಳ ಬಗ್ಗೆ ತಮ್ಮ ಕಳವಳ ವ್ಯಕ್ತಪಡಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *