ಸಿದ್ಧಾಂತಗಳಿಂದಲೇ ಕಾಂಗ್ರೆಸ್ ಆತ್ಮಹತ್ಯೆ – ಪಕ್ಷವನ್ನೇ ತ್ಯಜಿಸಿದ ಕೈ ನಾಯಕ

Public TV
2 Min Read

ನವದೆಹಲಿ: ಸೋಮವಾರದಂದು ಕೇಂದ್ರ ಸರ್ಕಾರವು ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿಕೊಟ್ಟಿದ್ದ ಪರಿಚ್ಛೇದ 370, 35(ಎ)ರನ್ನು ರದ್ದುಗೊಳಿಸಿದೆ. ಸರ್ಕಾರದ ಕ್ರಮದ ವಿರುದ್ಧ ಕಾಂಗ್ರೆಸ್ ನಿಂತಿರುವುದಕ್ಕೆ ಕೈ ನಾಯಕರೊಬ್ಬರು ಪಕ್ಷವನ್ನು ಬಿಟ್ಟು, ರಾಜ್ಯಸಭೆಗೆ ರಾಜೀನಾಮೆ ನೀಡಿದ್ದಾರೆ.

ಅಸ್ಸಾಂನಿಂದ ಕಾಂಗ್ರೆಸ್ ರಾಜ್ಯಸಭಾ ಸಂಸದರಾಗಿರುವ ಭುಭನೇಶ್ವರ್ ಕಲಿತಾ ಅವರು ಪಕ್ಷಕ್ಕೆ ಮತ್ತು ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಕೇಂದ್ರವು ಜಮ್ಮು-ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿಸಿ, ಪರಿಚ್ಛೇಧ 370 ಹಾಗೂ 35(ಎ) ವಿಧಿಯನ್ನು ರದ್ದು ಮಾಡಿರುವ ಕ್ರಮ ಸ್ವಾಗತರ್ಹ. ಆದರೆ ಕೇಂದ್ರದ ಕ್ರಮಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸುತ್ತಿದ್ದು, ತಮ್ಮ ಪಕ್ಷದ ಈ ನಡೆಗೆ ಬೇಸತ್ತು ಪಕ್ಷವನ್ನು ಬಿಟ್ಟು, ರಾಜ್ಯಸಭೆಗೆ ರಾಜೀನಾಮೆ ನೀಡುತ್ತಿರುವುದಾಗಿ ಕಲಿತಾ ಅವರು ಪತ್ರದಲ್ಲಿ ತಿಳಿಸಿದ್ದಾರೆ.

ತಮ್ಮ ರಾಜೀನಾಮೆ ಬಗ್ಗೆ ಭುವನೇಶ್ವರ ಕಲಿತಾ ಅವರು ಸ್ಪಷ್ಟನೆ ನೀಡಿದ್ದು, ಅವರು ಬರೆದಿರುವ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕಾಂಗ್ರೆಸ್ಸಿನ ನಿರ್ಧಾರದಿಂದ ಬೇಸತ್ತು ರಾಜೀನಾಮೆ ನೀಡಿದ್ದಾರೆ ಎನ್ನುವ ವಿಚಾರ ಪತ್ರದ ಮೂಲಕ ಸ್ಪಷ್ಟವಾಗಿ ತಿಳಿದುಬಂದಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ವರು ಸೋಮವಾರದಂದು ಮಂಡಿಸಿದ ಕಾಶ್ಮೀರ ಮಸೂದೆಗೆ ಕಲಿತಾ ಅವರು ಕೂಡ ಬೆಂಬಲಿಸಿ ಮತದಾನ ಮಾಡಿದ್ದರು.

ಕೇಂದ್ರದ ನಡೆ ವಿರುದ್ಧ ಕಾಂಗ್ರೆಸ್ ನಿಂತಿತ್ತು, ಆದರೆ ಪಕ್ಷದ ವಿಪ್ ಉಲ್ಲಂಘಿಸಿ ಕಲಿತಾ ಅವರು ಮತದಾನ ಮಾಡಿ ಕೇಂದ್ರದ ನಿರ್ಧಾರಕ್ಕೆ ಸಾಥ್ ನೀಡಿದ್ದಾರೆ. ಬಳಿಕ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ, ಪಕ್ಷವನ್ನು ತೊರೆದಿದ್ದಾರೆ. ಈ ಬಗ್ಗೆ ಸ್ವತಃ ಕಲಿತಾ ಅವರೇ ಟ್ವೀಟ್ ಮಾಡಿ ನಾನು ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ ಎಂದಿದ್ದಾರೆ.

ಈ ಬಗ್ಗೆ ಮಾತನಾಡಿದ ಕಲಿತಾ ಅವರು, ಕಾಂಗ್ರೆಸ್ ನನಗೆ ವಿಪ್ ಜಾರಿಗೊಳಿಸಲು ಹೇಳಿತ್ತು. ಆದರೆ ಕೇಂದ್ರದ ನಿರ್ಧಾರದಿಂದ ದೇಶ ಬದಲಾಗಲಿದೆ, ಅಲ್ಲದೆ ಕಾಂಗ್ರೆಸ್ಸಿನ ನಡೆ ಸಾರ್ವಜನಿಕರ ಭಾವನೆಗಳಿಗೆ ಧಕ್ಕೆ ತರುವಂತದ್ದಾಗಿದೆ. ಈ ಮೂಲಕ ಕಾಂಗ್ರೆಸ್ ತನ್ನ ಸಿದ್ಧಾಂತಗಳಿಂದಲೇ ಆತ್ಮಹತ್ಯೆಗೆ ಶರಣಾಗುತ್ತಿದೆ. ಇದರಲ್ಲಿ ನಾನು ಭಾಗಿಯಾಗಲು ಇಚ್ಛಿಸುವುದಿಲ್ಲ. ಆದ್ದರಿಂದ ನಾನು ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಪಕ್ಷವು ಹಾಳಾಗುತ್ತಿರುವುದನ್ನ ತಡೆಯಲು ಯಾರಿಂದಲು ಸಾಧ್ಯವಿಲ್ಲ ಎಂಬುದು ನನ್ನ ಅಭಿಪ್ರಾಯ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸಂಸತ್‍ನಲ್ಲಿ ಗೃಹ ಸಚಿವ ಅಮಿತ್ ಶಾ ತಮ್ಮ ಸರಕಾರದ ನಿರ್ಧಾರವನ್ನು ಪ್ರಕಟಿಸುತ್ತಿದ್ದಂತೆಯೇ ಕಾಂಗ್ರೆಸ್, ಪಿಡಿಪಿ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಈ ಮಧ್ಯೆ ಪಿಡಿಪಿ ಸಂಸದ ಮೀರ್ ಫಯಾಜ್ ಮತ್ತು ನಾಸಿರ್ ಅಹಮದ್ ಅವರು ಸಂವಿಧಾನದ ಪ್ರತಿಯನ್ನು ಸಂಸತ್ತಿನಲ್ಲಿ ಹರಿದುಹಾಕಲು ಯತ್ನಿಸಿದ ಘಟನೆ ಕೂಡ ನಡೆದಿತ್ತು. ಹಾಗೆಯೇ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370 ವಿಧಿ ರದ್ದುಗೊಳಿಸುವ ಮೂಲಕ ಬಿಜೆಪಿ ಸಂವಿಧಾನದ ಕಗ್ಗೊಲೆ ಮಾಡಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಹರಿಹಾಯ್ದಿದ್ದರು. ಅಲ್ಲದೆ ಕೇಂದ್ರದ ಈ ನಡೆಯನ್ನು ಖಂಡಿಸಿದ್ದ ಕಾಂಗ್ರೆಸ್ ಭಾರತದ ಸಂವಿಧಾನದ ಇತಿಹಾಸದಲ್ಲಿ ಇದು ಕಪ್ಪು ದಿನ ಎಂದಿತ್ತು.

ಆದರೆ ಕೇಂದ್ರ ಸರ್ಕಾರಕ್ಕೆ ಕೆಲ ವಿರೋಧ ಪಕ್ಷಗಳು ಈ ವಿಚಾರದಲ್ಲಿ ಸಹಕಾರ ನೀಡಿದೆ. ಶಿವ ಸೇನೆ ಅಲ್ಲದೇ ಬಿಜೆಪಿ ವಿರೋಧಿಗಳಾದ ಚಂದ್ರಬಾಬು ನಾಯ್ಡು, ಅರವಿಂದ್ ಕೇಜ್ರಿವಾಲ್, ಮಾಯಾವತಿ ಅವರು ಬೆಂಬಲ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *