ಎತ್ತಿನಹೊಳೆ ಪೂರ್ಣ ಆದ್ರೆ ನೇಣು ಹಾಕಿಕೊಳ್ಳುತ್ತೇನೆ: ಭೋಜೇಗೌಡ

Public TV
2 Min Read

ಬೆಂಗಳೂರು: ಎತ್ತಿನಹೊಳೆ ಯೋಜನೆ ಪೂರ್ಣ ಆದರೆ ನಾನು ನೇಣು ಹಾಕಿಕೊಳ್ಳುತ್ತೇನೆ ಎಂದು ಜೆಡಿಎಸ್‍ನ ಸದಸ್ಯ ಭೋಜೇಗೌಡ ಸವಾಲ್ ಹಾಕಿದ ಘಟನೆ ನಡೆಯಿತು.

ನಿಯಮ 72ರ ಅಡಿ ಕಾಂಗ್ರೆಸ್‍ನ ರಾಜೇಂದ್ರ ರಾಜಣ್ಣ ಎತ್ತಿನಹೊಳೆ ಯೋಜನೆ ವಿಷಯ ಪ್ರಸ್ತಾಪ ಮಾಡಿದರು. ಬಯಲು ಸೀಮೆಯ 7 ಜಿಲ್ಲೆಗಳಿಗೆ ನೀರು ಕೊಡಲು ಎತ್ತಿನಹೊಳೆ ಯೋಜನೆ ಸ್ಥಗಿತಗೊಂಡಿದೆ. ಈ ಯೋಜನೆ ಕೂಡಲೇ ಪ್ರಾರಂಭ ಮಾಡಬೇಕು ಎಂದು ಒತ್ತಾಯ ಮಾಡಿದರು. ಭೂಸ್ವಾಧೀನ ಮಾಡಿಕೊಂಡ ರೈತರಿಗೆ ಪರಿಹಾರ ಕೊಡಬೇಕು. ಇನ್ನು ಭೂಸ್ವಾಧೀನ ಪ್ರಕ್ರಿಯೆ ಆಗಿಲ್ಲ. ಕೂಡಲೇ ಪರಿಹಾರ ಕೊಟ್ಟು ಕುಡಿಯುವ ನೀರಿನ ಯೋಜನೆಗೆ ಸಹಕಾರ ಮಾಡಿ ಎಂದು ಒತ್ತಾಯ ಮಾಡಿದರು.

ಇದಕ್ಕೆ ಉತ್ತರ ನೀಡಿದ ಸಚಿವ ಗೋವಿಂದ ಕಾರಜೋಳ, ಎತ್ತಿನಹೊಳೆ ಯೋಜನೆಗೆ 12,912.36 ಕೋಟಿ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಎರಡು ಹಂತದಲ್ಲಿ ಈ ಯೋಜನೆ ನಡೆಯುತ್ತಿದೆ. ಮೊದಲ ಹಂತದ ಲಿಫ್ಟ್ ಕಾಮಗಾರಿ 5 ಪ್ಯಾಕೇಜ್‍ಗಳಲ್ಲಿ 2014ರಲ್ಲಿ ಕೈಗೊಳ್ಳಲಾಗಿದೆ. ಕೇಂದ್ರ ಸರ್ಕಾರದ ಅರಣ್ಯ ಪರಿಸರ ಇಲಾಖೆಯಿಂದ ಅನುಮತಿ ಪಡೆದು ಕಾಮಗಾರಿ ಚಾಲನೆ ನೀಡಲಾಗಿದೆ ಎಂದರು. ಇದನ್ನೂ ಓದಿ: ಅರ್ಧಗಂಟೆ ಸಮಯ ಸಿಕ್ಕರೆ ಅಷ್ಟರಲ್ಲೇ ಭಯದಿಂದ ಅಡುಗೆ ಮಾಡಿ ತಿನ್ನುತ್ತಿದ್ದೆವು: ವಿದ್ಯಾರ್ಥಿನಿ ಅಕ್ಷಿತಾ

ಭೈರಗೊಂಡ್ಲ ಜಲಾಶಯದ ಕಾಮಗಾರಿಗಳನ್ನು 35 ಪ್ಯಾಕೇಜ್ ಕೈಗೊಳ್ಳಲಾಗಿದೆ. ಯೋಜನೆ ಪ್ರಾರಂಭದಿಂದ ಜನವರಿ 2022 ಅಂತ್ಯದವರೆಗೆ 9268.76 ಕೋಟಿ ಸಂಚಿತ ವೆಚ್ಚ ಮಾಡಲಾಗಿರುತ್ತದೆ. ಭೂಸ್ವಾಧೀನ ಸಮಸ್ಯೆ, ಪರಿಸರ, ಅರಣ್ಯ ತೀರುವಳಿ, ಗ್ರೀನ್ ಟ್ರುಬ್ಯುನಲ್, ರೈಲ್ವೆ, ರಾಷ್ಟ್ರೀಯ ಹೆದ್ದಾರಿ, ಕೋವಿಡ್‍ನಿಂದಾಗಿ ಯೋಜನೆ ವಿಳಂಬವಾಗಿದೆ. ಎಲ್ಲಾ ಅಡೆತಡೆಗಳನ್ನು ನಿವಾರಣೆ ಮಾಡಿ ಯೋಜನೆ ಕಾಮಗಾರಿ ಅನುಷ್ಠಾನ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.

ಎತ್ತಿನಹೊಳೆಗೆ ಸಮಸ್ಯೆ ಆಗಿರೋದು ಭೂಸ್ವಾಧೀನ ಪ್ರಕ್ರಿಯೆ. ಸುಮಾರು 12 ಸಾವಿರ ಎಕರೆ ಭೂಸ್ವಾಧೀನ ಆಗಬೇಕು. ಎತ್ತಿನಹೊಳೆ ಯೋಜನೆ ಅನುಷ್ಠಾನ ಮಾಡಿದ್ದು ಬಿಜೆಪಿ ಸರ್ಕಾರ. ಇದು ನಮ್ಮ ಬದ್ಧತೆ. ಪ್ರತಿಯೊಂದು ಹಳ್ಳಿಗೆ ಭೂಮಿಯ ಮೌಲ್ಯ ಬೇರೆ ಬೇರೆ ಇರುತ್ತದೆ. ಪರಮೇಶ್ವರ್ ಮಂತ್ರಿಯಾದಾಗ ಯಾಕೆ ಇದನ್ನು ಹೆಚ್ಚು ಮಾಡಿಲ್ಲ ಎಂದು ಪ್ರಶ್ನೆ ಮಾಡಿದರು. ಎತ್ತಿನಹೊಳೆ ಯೋಜನೆಗೆ ಪೂರ್ಣ ಮಾಡುವ ಕೆಲಸ ಪ್ರಾಮಾಣಿಕವಾಗಿ ಮಾಡುತ್ತೇವೆ ಎಂದರು.

ಈ ವೇಳೆ ಎದ್ದು ನಿಂತ ಜೆಡಿಎಸ್‍ನ ಭೋಜೇಗೌಡ, ಎತ್ತಿನಹೊಳೆ ಯೋಜನೆ ಆದರೆ ನಾನು ನೇಣು ಹಾಕಿಕೊಳ್ಳುತ್ತೇನೆ ಎಂದು ಸವಾಲ್ ಹಾಕಿದರು. 22 ಸಾವಿರ ಕೋಟಿ ಅಲ್ಲ 50 ಸಾವಿರ ಕೋಟಿ ಖರ್ಚು ಮಾಡಿದರು ಚಿಕ್ಕಬಳ್ಳಾಪುರಕ್ಕೆ ನೀರು ಕೊಡಲು ಸಾಧ್ಯವಿಲ್ಲ. ಇದು ನನ್ನ ಚಾಲೆಂಜ್. ಎತ್ತಿನಹೊಳೆ ಕೆಲವರಿಗೆ ಕಾಮಧೇನು. ಯಾರ್ ಯಾರಿಗೆ ಇದು ಕಾಮಧೇನು ಅಂತ ನಮಗೆ ಗೊತ್ತಿದೆ. 50 ಸಾವಿರ ಕೋಟಿ ಖರ್ಚು ಮಾಡಿದರು ಈ ಯೋಜನೆ ಪೂರ್ಣ ಆಗೊಲ್ಲ. ಒಂದು ವೇಳೆ ಈ ಯೋಜನೆ ಆದರೆ ನಾನು ನೇಣು ಹಾಕಿಕೊಳ್ತೀನಿ ಅಂತ ಸವಾಲ್ ಹಾಕಿದರು. ಇದನ್ನೂ ಓದಿ: ನವೀನ್ ಬೆಳಗ್ಗೆ ನಮ್ಮೊಂದಿಗೆ ಬರುತ್ತಿದ್ದರೆ ಉಳಿಯುತ್ತಿದ್ದ: ಸ್ನೇಹಿತೆ ವರ್ಷಿತಾ

ಇದಕ್ಕೆ ಉತ್ತರ ನೀಡಿದ ಸಚಿವರು, ನಮ್ಮ ಸರ್ಕಾರಕ್ಕೆ ಬದ್ಧತೆ ಇರುವುದಕ್ಕೆ ಎತ್ತಿನಹೊಳೆ ಯೋಜನೆಗೆ ಬಜೆಟ್‍ನಲ್ಲಿ 3 ಸಾವಿರ ಕೋಟಿ ಇಟ್ಟಿದ್ದೇವೆ. ಎತ್ತಿನಹೊಳೆ ಯೋಜನೆ ಪೂರ್ಣ ಮಾಡೋದಕ್ಕೆ ನಮ್ಮ ಸರ್ಕಾರಕ್ಕೆ ಬದ್ಧತೆ ಇದೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *